ವೀರಾಜಪೇಟೆ, ಜೂ. 24: ವೀರಾಜಪೇಟೆಯ ತೆಲುಗರ ಬೀದಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಒಂದು ಕೆ.ಜಿ. ಬೇಳೆಗೆ ರೂ 60ರಂತೆ ವಸೂಲಿ ಮಾಡುತ್ತಿದ್ದುದರ ವಿರುದ್ಧ ಪಡಿತರ ಗ್ರಾಹಕರು ಅಂಗಡಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್ ಗೋವಿಂದರಾಜು ಅವರು ನ್ಯಾಯ ಬೆಲೆ ಅಂಗಡಿಯ ದಾಖಲೆಗಳನ್ನು ಪರಿಶೀಲಿಸಿ ಪಡಿತರ ಸಾಮಗ್ರಿಗಳಿಗೆ ಸರಕಾರ ನಿಗದಿಪಡಿಸಿರುವ ದರದಲ್ಲಿ ಮಾರಾಟ ಮಾಡಬೇಕು. ಅಂಗಡಿಗಳ ಮುಂದೆ ಸಾಮಗ್ರಿಗಳ ದರ ನಮೂದಿಸಿದ ನಾಮಫಲಕ ಕಡ್ಡಾಯವಾಗಿ ಅಳವಡಿಸಬೇಕು ಇಲ್ಲದಿದ್ದರೆ ಆಹಾರ ನಿರೀಕ್ಷಕರು, ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿಯೇ ಆದೇಶಿಸಿದರು.

ನ್ಯಾಯ ಬೆಲೆ ಅಂಗಡಿಗಳಲ್ಲಿ ಒಂದು ಕೆ.ಜಿ ಬೇಳೆಗೆ ರೂ. 38ಕ್ಕೆ ಮಾರಾಟ ಮಾಡಬೇಕೆಂದಿದ್ದರೂ ಮಾಲೀಕ ಯೋಗಾನಂದರಾವ್ ಪಡಿತರ ಚೀಟಿದಾರರಿಂದ ರೂ. 60 ವಸೂಲಾತಿ ಮಾಡುತ್ತಿದ್ದಾರೆ ಎಂದು ಟಿ.ಪಿ. ಲಕ್ಷ್ಮಣ್ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು, ಈ ವೇಳೆ ಅಂಗಡಿಗೆ ಮುತ್ತಿಗೆ ಹಾಕಿದ್ದು, ತಹಶೀಲ್ದಾರ್ ಸಮ್ಮುಖದಲ್ಲಿ ಕ್ಷಮಾಪಣೆ ಕೇಳಿದಾಗ ಪರಿಸ್ಥಿತಿ ಶಾಂತವಾಯಿತು. ಸ್ಥಳಕ್ಕೆ ಬಂದ ಆಹಾರ ತನಿಖಾ ಘಟಕದ ತಾಲೂಕು ನಿರೀಕ್ಷಕ ಶಿವನಂಜಯ್ಯ ಅವರನ್ನು ಮುತ್ತಿಗೆ ಹಾಕಿದವರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ಇದೇ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯ ಟಿ.ಜೆ. ಶಂಕರ್ ಶೆಟ್ಟಿ, ವಕೀಲ ಟಿ.ಪಿ. ಕೃಷ್ಣ, ಟಿ.ಪಿ. ಲೋಕೇಶ್, ರವಿಕುಮಾರ್, ಕರ್ಣ, ಕಿಟ್ಟು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಸದಸ್ಯೆ ಬಿ.ಡಿ. ಸುನೀತಾ ಮತ್ತಿತರರು ಹಾಜರಿದ್ದರು.

ವೀರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಬಗ್ಗೆ ಮಾತನಾಡಿದ ಟಿ.ಪಿ. ಲಕ್ಷ್ಮಣ್ ನ್ಯಾಯಬೆಲೆ ಅಂಗಡಿಗಳು ಕಾನೂನು ಬಾಹಿರವಾಗಿ ನಡೆಯುತ್ತಿದ್ದು, ಸರಕಾರದ ಪರವಾನಗಿಯ ಷರತ್ತುಗಳನ್ನು ಉಲ್ಲಂಘಿಸುತ್ತಿರುವದರಿಂದ ಇಂತಹ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ, ಆಹಾರ ಇಲಾಖೆಯ ಸಚಿವರು, ಜಿಲ್ಲೆಯ ಉಸ್ತುವಾರಿ ಸಚಿವರಿಗೆ ದೂರು ನೀಡುವದಾಗಿ ತಿಳಿಸಿದರು.