ಸಿದ್ದಾಪುರ, ಜೂ. 23: ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಬಳಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿ.ಪಂ. ಸದಸ್ಯೆ ಕಲಾವತಿ ಹಾಗೂ ತಾ.ಪಂ. ಸದಸ್ಯ ಬಿ.ವೈ. ರವೀಂದ್ರ (ಅಪ್ರು) ಉದ್ಘಾಟಿಸಿದರು

ಕುಡಿಯುವ ನೀರಿನ ಘಟಕಕ್ಕೆ ಕಾರ್ಡ್ ಬಳಸಿ ನೀರಿಗೆ ಚಾಲನೆ ನೀಡಿದ ಮರಗೋಡು ಗ್ರಾ.ಪಂ. ಅಧ್ಯಕ್ಷ ಬಿದ್ರುಪಣೆ ಮೋಹನ್ ಮಾತನಾಡಿ, ಗ್ರಾಮಸ್ಥರಿಗೆ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ಒದಗಿಸಿಕೊಡುವ ನಿಟ್ಟಿನಲ್ಲಿ ರೂ. 2ಕ್ಕೆ 20 ಲೀಟರ್ ನೀರನ್ನು ನೀಡಲಾಗುತ್ತದೆ.

ಇದರ ಸದುಪಯೋಗವನ್ನು ಗ್ರಾಮಸ್ಥರು ಬಳಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಡ್ ಮುಖಾಂತರ ನೀರನ್ನು ನೀಡಲಾಗುವದೆಂದರು.

ಇದೇ ಸಂದÀರ್ಭ ಸರ್ಕಾರಿ ಶಾಲೆಗೆ ಹಾಗೂ ಸ್ಥಳೀಯ ಸಹಕಾರ ಸಂಘಕ್ಕೆ ನೀರನ್ನು ಉಪಯೋಗಿಸಲು ಕಾರ್ಡ್ ವಿತರಿಸಲಾಯಿತು.

ಸಹಕಾರ ಸಂಘದವರು ಮೊದಲಿಗೆ ನೀರು ಪಡೆದುಕೊಂಡು ಯೋಜನೆಗೆ ಚಾಲನೆ ನೀಡಿದರು.

ತಾಲೂಕು ಪಂಚಾಯಿತಿ ಸದಸ್ಯ ಅಪ್ರು ರವೀಂದ್ರ ಮಾತನಾಡಿ, ರಾಜ್ಯ ಸರ್ಕಾರವು ಶುದ್ಧ ಕುಡಿಯುವ ನೀರನ್ನು ಸಾರ್ವಜನಿಕರ ಉಪಯೋಗಕ್ಕಾಗಿ ನಗರ ಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ಘಟಕಗಳನ್ನು ಪ್ರಾರಂಭಿಸಿದ್ದು, ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹೇಳಿದರು.

ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ಮುಂಡೋಡಿ ನಂದಾ ನಾಣಯ್ಯ, ಕಟ್ಟೆಮನೆ ಧನಂಜಯ, ಸುರೇಶ, ಗೌರಮ್ಮ, ಜಲಜಾಕ್ಷಿ, ಬೋಜಿ, ದಮಯಂತಿ, ಸಹಕಾರ ಸಂಘದ ಅಧ್ಯಕ್ಷ ಬಾಳೆಕಜೆ ಯೋಗೇಂದ್ರ, ಪಿ.ಡಿ.ಓ. ಆಶಾ, ಆರ್.ಎಂ.ಸಿ. ಅಧ್ಯಕ್ಷ ಕಾಂಗೀರ ಸತೀಶ್ ಸೇರಿದಂತೆ ಗ್ರಾಮಸ್ಥರು ಇದ್ದರು.