ಸೋಮವಾರಪೇಟೆ, ಜೂ. 23: ಸುಮಾರು 400ಕ್ಕೂ ಅಧಿಕ ವರ್ಷದ ಇತಿಹಾಸ ಹೊಂದಿರುವ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆಯ ಶ್ರೀ ಚೆನ್ನಿಗರಾಯ ವಿಷ್ಣು ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಗ್ರಾಮಸ್ಥರು ಚಾಲನೆ ನೀಡಿದ್ದಾರೆ.

ಯಡವಾರೆ ಗ್ರಾಮದ ಬಾರನಮನೆ ಕುಟುಂಬಸ್ಥರು ನೆಲೆಸಿರುವ ಪ್ರದೇಶದಲ್ಲಿ ಪುರಾತನ ಕಾಲದ ಶ್ರೀ ವಿಷ್ಣುವಿನ ದೇವಾಲಯವಿದ್ದು, 400ಕ್ಕೂ ಅಧಿಕ ವರ್ಷಗಳ ಹಿಂದೆ ದೇವಾಲಯ ನಿರ್ಮಾಣವಾಗಿರಬಹುದು ಎಂದು ಗ್ರಾಮಸ್ಥರು ಅಂದಾಜಿಸಿದ್ದಾರೆ.

ಗರುಡಪೀಠದ ಮೇಲೆ ನೆಲೆಯಾಗಿರುವ ಶ್ರೀ ಚೆನ್ನಿಗರಾಯ ದೇವಾಲಯ ಈ ವ್ಯಾಪ್ತಿಯಲ್ಲೇ ಅಪರೂಪದ್ದಾಗಿದ್ದು, ಪೂರ್ವಾಭಿಮುಖವಾಗಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದುವರೆಗೂ ತಿಂಗಳಿಗೊಮ್ಮೆ ಈ ದೇವಾಲಯದಲ್ಲಿ ಗ್ರಾಮಸ್ಥರು ಪೂಜೆ ನಡೆಸಿಕೊಂಡು ಬರುತ್ತಿದ್ದು, ಕಳೆದ ಅನೇಕ ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ದೇವಾಲಯ ಪ್ರಸ್ತುತ ಶಿಥಿಲಾವಸ್ಥೆಗೆ ತಲುಪಿದೆ.

ಈ ಹಿನ್ನೆಲೆ ದೇವಾಲಯದಲ್ಲಿ ಮಂಗಳೂರಿನ ಕದ್ರಿ ಶ್ರೀರಂಗ ಐತಾಳ್ ಅವರ ಸಮ್ಮುಖದಲ್ಲಿ ತಾಂಬೂಲ ಪ್ರಶ್ನೆ ನಡೆಸಲಾಗಿದ್ದು, ಅದರಂತೆ ದೇವಾಲಯವನ್ನು ಜೀರ್ಣೋದ್ಧಾರ ಮಾಡುವ ಸಂಕಲ್ಪ ಕೈಗೊಳ್ಳಲಾಗಿದೆ. ಇದಕ್ಕಾಗಿ 12 ಮಂದಿಯ ಸಮಿತಿಯನ್ನು ರಚಿಸಲಾಗಿದೆ. ಅಧ್ಯಕ್ಷರಾಗಿ ಬಾರನ ಅಪ್ಪಾಜಿ, ಕಾರ್ಯದರ್ಶಿಯಾಗಿ ಭರತ್ ಸೇರಿದಂತೆ ಇತರರನ್ನು ನೇಮಿಸಲಾಗಿದೆ.

ಸುಮಾರು ಒಂದು ಎಕರೆ ಜಾಗ ದೇವಾಲಯಕ್ಕೆ ಮೀಸಲಿಡಲಾಗಿದ್ದು, ಇದರಲ್ಲಿ 14 ಸೆಂಟ್ ಜಾಗದಲ್ಲಿ ಭವ್ಯ ದೇವಾಲಯ ನಿರ್ಮಾಣವಾಗಲಿದೆ. ಈಗಾಗಲೇ ರೂ. 50 ಲಕ್ಷ ವೆಚ್ಚಕ್ಕೆ ನೀಲನಕ್ಷೆ ತಯಾರಿಸಲಾಗಿದ್ದು, ಗರ್ಭಗುಡಿ, ವಿಶಾಲವಾದ ಪೌಳಿ, ಆವರಣ ಗೋಡೆ, ನೆಲಹಾಸುಗಳನ್ನು ಅಳವಡಿಸಲಾಗುವದು ಎಂದು ಸಮಿತಿಯ ನಿರ್ದೇಶಕ ಮಚ್ಚಂಡ ಅಶೋಕ್ ತಿಳಿಸಿದ್ದಾರೆ.

ದೇವಾಲಯ ನಿರ್ಮಾಣಕ್ಕೆ ಗ್ರಾಮದ ಹಿರಿಯರಾದ ಬಾರನ ಸುರೇಶ್ ದಂಪತಿಗಳು ಚಾಲನೆ ನೀಡಿದ್ದು, ಪೂಜಾ ವಿಧಿವಿಧಾನಗಳನ್ನು ಮಣಿಕಂಠನ್ ನಂಬೂದರಿ ನೆರವೇರಿಸಿದರು. ದೇವಾಲಯದ ಶಿಲ್ಪಿ ಮಂಜುನಾಥ್ ಆಚಾರ್, ಗ್ರಾ.ಪಂ. ಸದಸ್ಯ ಕೆ.ಪಿ. ರಾಯ್, ಸಮಿತಿಯ ಪ್ರಮುಖರಾದ ಪಾಲಾಕ್ಷ, ಮಚ್ಚಂಡ ಅಶೋಕ್, ಮುತ್ತಪ್ಪ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.