ಮಡಿಕೇರಿ, ಜೂ. 23 : ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಇಂದು ಜಿಲ್ಲೆಯ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯೊಂದಿಗೆ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ಇತರ ಕೆಲಸಗಳ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲೆಯ ತಿತಿಮತಿ ವ್ಯಾಪ್ತಿ ಹಾಗೂ ಗೋಣಿಕೊಪ್ಪಲುವಿನಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವರು, ಪಾಡಿ ಇಗ್ಗುತ್ತಪ್ಪ ದೇವಾಲಯದ ರಸ್ತೆ ಕಾಮಗಾರಿಯ ಪರಿಶೀಲನೆಯೊಂದಿಗೆ ಚೇಲಾವರದ ನೂತನ ರಸ್ತೆ ಉದ್ಘಾಟಿಸಿದರು. ಅಲ್ಲದೆ ವೀರಾಜಪೇಟೆಯಲ್ಲಿ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು.

*ಗೋಣಿಕೊಪ್ಪಲು: ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಕರಡಿಕೊಪ್ಪ, ಶಾಂತಿ ನಗರ ರಸ್ತೆ ಅಭಿವೃದ್ದಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ರೂ. 50 ಕೋಟಿ ವಿಶೇಷ ಅನುದಾನದಲ್ಲಿ ಶಾಂತಿನಗರದಲ್ಲಿ ರೂ. 6 ಲಕ್ಷ ಅನುದಾನದಲ್ಲಿ ಡಾಂಬರೀಕರಣ ಹಾಗೂ ರೂ. 10 ಲಕ್ಷ ಅನುದಾನದಲ್ಲಿ ಕರಡಿಕೊಪ್ಪ ರಸ್ತೆ ಅಭಿವೃದ್ಧಿ ನಡೆಯಲಿದೆ. ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿ ಗ್ರಾಮಿಣ ಭಾಗದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಕಳೆದ ಎಂಟು ವರ್ಷಗಳ ಆಡಳಿತ ಅವಧಿಯಲ್ಲಿ ಬಿ.ಜೆ.ಪಿ. ಸರಕಾರ ಮಾಡದ ಕಾರ್ಯಗಳನ್ನು ಇದೀಗ ರಾಜ್ಯ ಸರಕಾರ ಮಾಡುತ್ತಿದೆ. ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಗೋಣಿಕೊಪ್ಪಲು ಪಟ್ಟಣದ ಆರನೇ ವಿಭಾಗದ ಕಾವೇರಿ ಹಿಲ್ಸ್ ಬಡಾವಣೆಯ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ ವೆಚ್ಚದ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಉಪಾಧ್ಯಕ್ಷೆ ಎಂ. ಪದ್ಮಿನಿ ಪೊನ್ನಪ್ಪ, ಕೊಡವ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಶಿವು ಮಾದಪ್ಪ, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಗೋಣಿಕೊಪ್ಪ ಗ್ರಾ.ಪಂ. ಸದಸ್ಯರಾದ ಪ್ರಮೋದ್ ಗಣಪತಿ, ಮಂಜುಳಾ ರಾಜಶೇಖರ್, ಮಮಿತಾ ಪ್ರಭಾವತಿ, ಧನಲಕ್ಷ್ಮಿ, ಪಿ.ಡಿ.ಓ. ಚಂದ್ರಮೌಳಿ, ಪೊನ್ನಂಪೇಟೆ

(ಮೊದಲ ಪುಟದಿಂದ) ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಕಾಂಗ್ರೆಸ್ ಯುವ ಮೋರ್ಚ ಅಧ್ಯಕ್ಷ ಜೆ.ಕೆ. ಸೋಮಣ್ಣ, ಕಾರ್ಯದರ್ಶಿ ಮುರುಗ, ಪ್ರವಾಸೋಧ್ಯಮ ಇಲಾಖೆ ನಿರ್ದೇಶಕ ಬಿ.ಎನ್. ಪ್ರಕಾಶ್, ಜಿಲ್ಲಾ ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರಭು, ತಾಲೂಕು ಅಧಿಕಾರಿ ಸುರೇಶ್, ಸಹಾಯಕ ಅಧಿಕಾರಿ ಸಣ್ಣುವಂಡ ನವೀನ್, ಮಾಜಿ ಎಂ.ಎಲ್ಸಿ ಅರುಣ್ ಮಾಚಯ್ಯ, ತಾಲೂಕು ಹಿಂದುಳಿದ ವರ್ಗದ ಅಧ್ಯಕ್ಷ ಸರಾ ಚಂಗಪ್ಪ, ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕ ವಾಸು ಕುಟ್ಟಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಕುಟ್ಟಪ್ಪ, ನಗರ ಕಾಂಗ್ರೆಸ್ ಕಾರ್ಯದರ್ಶಿ ಸತೀಶ್ ಸಿಂಗಿ ಸೇರಿದಂತೆ ಕಾಂಗ್ರೆಸ್ಸಿನ ಪ್ರಮುಖರು ಹಾಜರಿದ್ದರು.

ಹಕ್ಕುಪತ್ರ ವಿತರಣೆ

ವೀರಾಜಪೇಟೆ : ರಾಜ್ಯದಲ್ಲಿ ಹಸಿವು ಮುಕ್ತ ಯೋಜನೆ ಯಶಸ್ಸನ್ನು ಕಂಡಿದೆ. ಇದರ ನಂತರ ರಾಜ್ಯದ ಕಡು ಬಡಜನರಿಗೆ, ನಿರ್ಗತಿಕರಿಗೆ ನಿವೇಶನ ನೀಡಿ ಸ್ವಂತ ಸೂರನ್ನು ಕಟ್ಟಿಕೊಳ್ಳುವ ಸಂಕಲ್ಪವನ್ನು ಸರಕಾರ ಕಾರ್ಯಗತಗೊಳಿಸುತ್ತಿದೆ. ಕೇವಲ ಅಲ್ಪ ಅವಧಿಯಲ್ಲಿಯೇ ರಾಜ್ಯದ ಪ್ರತಿಯೊಬ್ಬರಿಗೂ ಸೂರು ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ. ಇದರಲ್ಲಿ ಮುಖ್ಯಮಂತ್ರಿ ಹೆಚ್ಚಿನ ಆಸಕ್ತಿ ವಹಿಸಿರುವದು ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿದರು.

ವೀರಾಜಪೇಟೆಯ ಮಹಿಳಾ ಸಮಾಜ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ ಸಮಾರಂಭದಲ್ಲಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿ 1974ರಲ್ಲಿ “ಉಳುವವನಿಗೆ ಭೂಮಿ” ಎಂಬ ನಿಯಮ ಜಾರಿಗೊಳಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದಾಗಿದೆ. ಹಿಂದಿನ ಸರಕಾರ ಜನರಿಗೆ ಸುಳ್ಳಿನ ಕಂತೆಗಳನ್ನು ನೀಡಿ ನಿರ್ಗತಿಕರ ಪಟ್ಟಿ ಮಾಡಿ ಚುನಾವಣೆ ಬಳಿಕ ಮತದಾರರನ್ನು ಮರೆತರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ನಿರ್ಗತಿಕರ ಹಕ್ಕುಪತ್ರದ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಈಗ ಕಾರ್ಯರೂಪಕ್ಕೆ ತಂದು “ಪ್ರತಿಯೊಬ್ಬರಿಗೂ ಸೂರು” ಹೊಸ ಯೋಜನೆಯಲ್ಲಿ ಹಕ್ಕು ಪತ್ರ ವಿತರಣೆ ಮಾಡುತ್ತಿದೆ. ತಾಲೂಕಿನಲ್ಲಿ ಹಕ್ಕು ಪತ್ರಕ್ಕಾಗಿ ಬಂದ ಸುಮಾರು 3000 ಅರ್ಜಿಗಳಲ್ಲಿ ಈಗಾಗಲೇ ಶೇಕಡ 40ರಷ್ಟು ಅರ್ಜಿಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಇಂದು 500 ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗಿದೆ. ನಿವೇಶನಕ್ಕೆ ಅರ್ಜಿ ಹಾಕುವವರಿಗೆ ಇನ್ನು ಮೂರು ತಿಂಗಳ ಅವಧಿಯನ್ನು ವಿಸ್ತರಿಸಲಾಗಿದೆ. ತಾಲೂಕಿನ ಪ್ರತಿಯೊಬ್ಬರು ಹಕ್ಕುಪತ್ರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಯಾವದೇ ಕಾರಣಕ್ಕೂ ಹಕ್ಕು ಪತ್ರವನ್ನು ದುರುಪಯೋಗಪಡಿಸಿಕೊಳ್ಳದೆ ಜೀವನ ಉದ್ದಕ್ಕೂ ನೆನಪಿಸಿಕೊಳ್ಳುವಂತಾಗಬೇಕು. ಕೊಡಗಿನ ಉಸ್ತುವಾರಿ ಸಚಿವರು ಕೊಡಗಿನ ಬಗ್ಗೆ ಅಭಿಮಾನ ಹೊಂದಿದ್ದು, ಉತ್ತಮ ಜನಪರ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಈಗಿನ ಸರಕಾರದ ಕನಸಿನಂತೆ ಎಲ್ಲರಿಗೂ ಸೂರು ಕಲ್ಪಿಸುವ ನಿಟ್ಟನಲ್ಲಿ ಹಕ್ಕು ಪತ್ರದ ವಿತರಣೆ ಮುಂದುವರೆಯಲಿದೆ ಎಂದು ಹೇಳಿದರು.

ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಮಾತನಾಡಿ, ಸ್ಥಳೀಯ ಜನಪ್ರತಿನಿಧಿಗಳು ಅನೇಕ ವರ್ಷಗಳಿಂದ ಬಡ ಜನರಿಗೆ ಆಗತ್ಯವಾದ ನಿವೇಶನ ಹಾಗೂ ಸವಲತ್ತುಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಆದರೆ ಕಾಂಗ್ರೆಸ್ ಸರಕಾರ ಕೊಡಗು ಜಿಲ್ಲೆಯಲ್ಲಿ ಸುಮಾರು 10 ಸಾವಿರ ನಿವೇಶನ ರಹಿತರಿಗೆ ನಿವೇಶನ ನೀಡುವ ಮಹತ್ವದ ಕೆಲಸ ಮಾಡುತ್ತಿದೆ. ಸರಕಾರ ಪಡಿತರ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಜನರಿಗೆ ಒದಗಿಸುತ್ತಿರುವದು ಹೆಮ್ಮೆಯ ವಿಚಾರ ಎಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಆರ್.ವಿ. ಡಿಸೋಜ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ , ಜಿಲ್ಲಾ ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ತಾರ ಅಯ್ಯಮ್ಮ, ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು, ತಾಲೂಕು ಪಂಚಾಯಿತಿ ಸದಸ್ಯ ಎಂ. ಪ್ರಶಾಂತ್ ಉತ್ತಪ್ಪ ಉಪಸ್ಥಿತರಿದ್ದರು.

ಪಾಡಿ ರಸ್ತೆ ಪರಿಶೀಲನೆ

ನಾಪೆÇೀಕ್ಲು : ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ನೂತನವಾಗಿ ನಿರ್ಮಿಸುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದರು.

ಈ ಸಂದರ್ಭ ಅವರು ಉತ್ತಮ ರಸ್ತೆ ನಿರ್ಮಿಸುವದು, ಮಳೆ ನೀರಿನ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಗುತ್ತಿಗೆದಾರ ನಾಗಾರ್ಜುನ ಅವರಿಗೆ ಸೂಚಿಸಿದರು. ಸಚಿವರೊಂದಿಗೆ ಎಂ.ಎಲ್.ಸಿ ಶಾಂತೆಯಂಡ ವೀಣಾ ಅಚ್ಚಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಮಡಿಕೇರಿ ತಾಲೂಕು ತಹಶೀಲ್ದಾರ್ ಕುಸುಮ, ಮುಖಂಡರಾದ ಬಾಚಮಂಡ ಲವ ಚಿಣ್ಣಪ್ಪ, ಕಕ್ಕಬೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಸ್ಮಾನ್, ಕದ್ದಣಿಯಂಡ ಸಂಜು, ಶ್ಯಾಮ್, ಗಿರೀಶ್, ಪೆÇನ್ನೋಲತಂಡ ಚಿಣ್ಣಪ್ಪ, ಉದಿಯಂಡ ಸುಭಾಷ್, ನಾಪೆÇೀಕ್ಲು ಕಂದಾಯ ಪರಿವೀಕ್ಷಕ ರಾಮಯ್ಯ, ಇಗ್ಗುತ್ತಪ್ಪ ದೇವಳದ ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ, ಅಧಿಕಾರಿ ವರ್ಗ ಇದ್ದರು. ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ, ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಪ್ರದೀಪ್ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ಚೇಲಾವರ ರಸ್ತೆ ಉದ್ಘಾಟನೆ

ನಾಪೆÇೀಕು ಬಳಿಯ ಚೆಯ್ಯಂಡಾಣೆಯಿಂದ ಚೇಲಾವರಕ್ಕೆ ಪ್ರವಾಸೋದ್ಯಮ ಇಲಾಖಾ ವತಿಯಿಂದ ಸುಮಾರು ರೂ. 3.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 6 ಕಿ.ಮೀ ಕಾಂಕ್ರೀಟ್ ರಸ್ತೆಯನ್ನು ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಎಂ.ಎಲ್.ಸಿ. ಶಾಂತೆಯಂಡ ವೀಣಾ ಅಚ್ಚಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಮಡಿಕೇರಿ ತಾಲೂಕು ತಹಶೀಲ್ದಾರ್ ಕುಸುಮ, ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

ವರದಿ : ಎನ್.ಎನ್. ದಿನೇಶ್, ಪ್ರಭಾಕರ್, ಡಿ.ಎಂ.ಆರ್.