ಸುಂಟಿಕೊಪ್ಪ, ಜೂ. 24: ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆಯ ಜೊತೆಗೆ ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್‍ಗಳನ್ನು ನೀಡುತ್ತಿದ್ದು, ಇಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡದ ಮಕ್ಕಳು ಸರ್ಕಾರದ ವತಿಯಿಂದ ಸಿಗುವ ಮೂಲಭೂತ ಸೌಲಭ್ಯಗಳನ್ನು ಸದ್ಬಳಕೆ ಪಡೆದುಕೊಳ್ಳುವದರೊಂದಿಗೆ ದಿನನಿತ್ಯ ಶಾಲೆಗೆ ಹಾಜರಾಗುವ ಮೂಲಕ ಉತ್ತಮ ವಿದ್ಯಾಭ್ಯಾಸವನ್ನು ಪಡೆದು ದೇಶದ ಸತ್ಪಜೆಗಳಾಗುವಂತೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಅಂಗನವಾಡಿ ಕೇಂದ್ರ, ಹೇರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಹೆರೂರು ಗಿರಿಜನ ಹಾಡಿಯಲ್ಲಿ ಏರ್ಪಡಿಸಲಾಗಿದ್ದ ಬಾಲ್ಯ ವಿವಾಹ ನಿಷೇದ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಮಮ್ತಾಜ್, ತಾ.ಪಂ. ಸದಸ್ಯೆ ಮಣಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋದ, ಪಂಚಾಯಿತಿ ಸದಸ್ಯೆ ರಾಣಿ, ಅಂಗನವಾಡಿ ಮೇಲ್ವಿಚಾರಕಿ ಲೀಲಾವತಿ, ಸ್ತ್ರೀ ಶಕ್ತಿ ಸಂಘದ ಜಿಲ್ಲಾ ಅಧ್ಯಕ್ಷೆ ಮೇರಿ ಅಂಬುದಾಸ್, ರೇಹನಾ ಫೈರೋಜ್, ಶಾಲಾ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ್, ಶಿಕ್ಷಕಿ ಲತಾ, ಸುಂಟಿಕೊಪ್ಪ ಠಾಣೆಯ ಎಎಸ್‍ಐ, ಸಿಬ್ಬಂದಿಗಳು, ವಿವಿಧ ಸ್ತ್ರೀ ಶಕ್ತಿ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಇದ್ದರು.