ಮಡಿಕೇರಿ, ಜೂ. 24: ಕರ್ನಾಟಕ ಸರಕಾರ ತಾ. 21ರ ಅಧಿವೇಶನದಲ್ಲಿ ರೈತರ ಸಹಕಾರ ಬ್ಯಾಂಕುಗಳಲ್ಲಿನ ಅಲ್ಪಾವಧಿ ಸಾಲ ರೂ. 50 ಸಾವಿರದವರೆಗಿನ ಮೊತ್ತವನ್ನು ಮನ್ನಾ ಮಾಡುವದಾಗಿ ಘೋಷಿಸಿದೆ. ಸಾಲ ಮನ್ನಾ ಮಾಡುವ ಸಂಬಂಧ ಒಟ್ಟು 14 ಷರತ್ತುಗಳನ್ನು ವಿಧಿಸಿದ್ದು, ಈ ಸಂಬಂಧ ತಾ. 23ರಂದು ಸುತ್ತೋಲೆ ಹೊರಡಿಸಿದೆ.

ವಿಧಿಸಿರುವ ಷರತ್ತುಗಳು ಇಂತಿವೆ :

1. ಈ ಸೌಲಭ್ಯವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕುಗಳು ಮತ್ರು ಪಿಕಾರ್ಡ್ ಬ್ಯಾಂಕುಗಳು ವಿತರಿಸಿದ ಅಲ್ಪಾವಧಿ ಬೆಳೆ ಸಾಲದ ಪೈಕಿ ದಿನಾಂಕ 20.06.2017ರವರೆಗೆ ಹೊಂದಿರುವ ಹೊರಬಾಕಿ ಸಾಲಕ್ಕೆ ಮಾತ್ರ ಅನ್ವಯವಾಗುತ್ತದೆ.

2. ದಿನಾಂಕ 20.06.2017ರವರೆಗೆ ಅಲ್ಪಾವಧಿ ಬೆಳೆ ಸಾಲ ಪಡೆದು ದಿನಾಂಕ 20.06.2017ಕ್ಕೆ ಹೊರಬಾಕಿ ಇರುವ ಸಾಲದ ಪೈಕಿ ರೂ. 50,000ವÀರೆಗಿನ ಸಾಲವನ್ನು ಪೂರ್ಣ ಮನ್ನಾ ಮಾಡಲಾಗಿದೆ.

3. ಈ ಸೌಲಭ್ಯವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕುಗಳು ಮತ್ತು ಪಿಕಾರ್ಡ್ ಬ್ಯಾಂಕುಗಳ ಮೂಲಕ ವಿತರಿಸಿರುವ ಕೃಷಿಯೇತರ ಸಾಲಗಳು, ಮಧ್ಯಮಾವಧಿ ಮತ್ತು ಧೀರ್ಘಾವಧಿ ಸಾಲಗಳು, ಪಶುಭಾಗ್ಯ ಯೋಜನೆಯಡಿ ನೀಡಿದ ಸಾಲಗಳು ಮತ್ತು ಇತರ ಸಾಲಗಳಿಗೆ ಅನ್ವಯವಾಗುವದಿಲ್ಲ.

4. ರೂ. 50,000ಕ್ಕಿಂತ ಹೆಚ್ಚಿಗೆ ಅಲ್ಪಾವಧಿ ಕೃಷಿ ಸಾಲ ಪಡೆದು ದಿನಾಂಕ 20.06.2017ಕ್ಕೆ ಹೊರಬಾಕಿ ಇರುವ ಸಾಲವು ಚಾಲ್ತಿ ಇದ್ದಲ್ಲಿ ಸಾಲ ಪಡೆದ ರೈತರ ಗಡುವು ದಿನಾಂಕ ಅಥವಾ ದಿನಾಂಕ 20.06.2018 ಇದರಲ್ಲಿ ಯಾವದು ಮೊದಲೋ ಆ ದಿನಾಂಕದೊಳಗಾಗಿ ರೂ. 50,000ಕ್ಕಿಂತ ಹೆಚ್ಚಿನ ಅಸಲನ್ನು ಪಾವತಿ ಮಾಡಿದ್ದಲ್ಲಿ, ರೂ. 50,000ವರೆಗಿನ ಅಸಲನ್ನು ಮನ್ನಾ ಮಾಡಲಾಗುವದು. ಸಂಪೂರ್ಣ ಸಾಲದ ಮೇಲಿನ ಬಡ್ಡಿ ಸಹಾಯಧನವನ್ನು ಜಾರಿಯಲ್ಲಿರುವ ಬಡ್ಡಿ ಸಹಾಯಧನ ಯೋಜನೆಯಲ್ಲಿ ರಾಜ್ಯ ಸರ್ಕಾರದಿಂದ ಭರಿಸಲಾಗುವದು.

5. ದಿನಾಂಕ 20.06.2017ಕ್ಕೆ ಹೊರಬಾಕಿ ಇರುವ ಸಾಲವು ಸುಸ್ತಿಯಾಗಿದ್ದಲ್ಲಿ ದಿನಾಂಕ 20.06.2017ಕ್ಕೆ ಬಾಕಿ ಇರುವ ಅಸಲು ಮತ್ತು ಮರುಪಾವತಿಸುವ ದಿನಾಂಕಕ್ಕೆ ಅನ್ವಯಿಸುವ ಬಡ್ಡಿ ಸೇರಿ ರೂ. 50,000ಕ್ಕಿಂತ ಹೆಚ್ಚಿನ ಮೊತ್ತವನ್ನು ಸಾಲ ಪಡೆದ ರೈತರು ದಿನಾಂಕ 31.12.2017ರೊಳಗಾಗಿ ಮರುಪಾವತಿ ಮಾಡಿದ್ದಲ್ಲಿ ಅಸಲು ಮತ್ತು ಬಡ್ಡಿ ಸೇರಿ ರೂ. 50,000ಗಳವರೆಗಿನ ಸಾಲವನ್ನು ಮನ್ನಾ ಮಾಡಲಾಗುವದು.

6. ಈ ಯೋಜನೆಯಡಿಯಲ್ಲಿ ಮನ್ನಾ ಮಾಡಿದ ಸಾಲವು, ರೈತರು ಸಾಲ ಪಡೆದು ಸಾಲ ಮರುಪಾವತಿ ಮಾಡುವ ಗಡುವು ದಿನಾಂಕಕ್ಕೆ ಜಾರಿಗೆ ಬರುತ್ತದೆ. ಅಂದರೆ ಈ ಯೋಜನೆಯಡಿಯಲ್ಲಿ ಸಾಲ ಮನ್ನಾ ಸೌಲಭ್ಯ ಪಡೆದ ರೈತರು ಸಾಲ ಮರುಪಾವತಿಗೆ ನಿಗದಿಪಡಿಸಿದ ಗಡುವು ದಿನಾಂಕ ಮುಗಿದ ನಂತರವೇ ಪುನಃ ಸಾಲ ಪಡೆಯಲು ಅರ್ಹರಾಗುತ್ತಾರೆ.

7. ಯಾವದೇ ಸದಸ್ಯರು ಒಂದಕ್ಕಿಂತ ಹೆಚ್ಚಿನ ಸಹಕಾರ ಸಂಘ, ಸಹಕಾರ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ ಒಂದು ಸಂಸ್ಥೆಯಿಂದ ಮಾತ್ರ ರೂ. 50,000ವರೆಗೆ ಸಾಲ ಮನ್ನಾ ಸೌಲಭ್ಯ ಪಡೆಯತಕ್ಕದ್ದು.

8. ಮೇಲಿನ ಅವಧಿಯಲ್ಲಿ ಸಾಲ ಪಡೆದು ರೈತರು ಮೃತಪಟ್ಟಿದ್ದಲ್ಲಿ ಸಂಬಂಧಿಸಿದ ವಾರಸುದಾರರು ಸಾಲ ಮರುಪಾವತಿಸಿದರೆ, ಅಂತಹ ವಾರಸುದಾರರಿಗೂ ಸಹ ಈ ಸೌಲಭ್ಯ ದೊರೆಯುತ್ತದೆ.

9. ಈ ಯೋಜನೆಯಲ್ಲಿ ಅರ್ಹವಿರುವ ರೂ. 50,000 ಗಳ ಅಸಲು ಮತ್ತು ಸಂಬಂಧಿಸಿದ ಬಡ್ಡಿಯೊಂದಿಗೆ ಜಾರಿಯಲ್ಲಿರುವ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ಕ್ಲೈಮು ಬಿಲ್ಲುಗಳನ್ನು ಸಾಲ ಮರುಪಾವತಿಸಲು ನಿಗದಿಪಡಿಸಿದ ತಿಂಗಳಿನ 30 ದಿನದೊಳಗಾಗಿ ಕ್ಲೈಮು ಬಿಲ್ಲುಗಳನ್ನು ಸಲ್ಲಿಸತಕ್ಕದ್ದು.

10. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ ಸಂಯೋಜಿಸಲ್ಪಟ್ಟ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್‍ಗಳು, ಡಿಸಿಸಿ ಬ್ಯಾಂಕುಗಳು ಈ ಯೋಜನೆಗೆ ಸಂಬಂಧಿಸಿದ ಕ್ಲೈಮು ಬಿಲ್ಲುಗಳನ್ನು ತಯಾರಿಸಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಮತ್ತು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ಮುಖಾಂತರ ಸಹಕಾರ ಸಂಘಗಳ ನಿಬಂಧಕರಿಗೆ ಕ್ಲೈಮು ಬಿಲ್ಲು ಸಲ್ಲಿಸುವದು.

11. ವಾಣಿಜ್ಯ ಬ್ಯಾಂಕುಗಳಿಗೆ ಸಂಯೋಜಿಸಲ್ಪಟ್ಟ ಅಥವಾ ಸ್ವತಂತ್ರವಾಗಿರುವ ಕೃಷಿ ಪತ್ತಿನ ಸಹಕಾರ ಸಂಘಗಳು ಈ ಯೋಜನೆಗೆ ಸಂಬಂಧಿಸಿದ ಕ್ಲೈಮು ಬಿಲ್ಲುಗಳನ್ನು ತಯಾರಿಸಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಮುಖಾಂತರ ಸಹಕಾರ ಸಂಘಗಳ ನಿಬಂಧಕರಿಗೆ ಕ್ಲೈಮು ಬಿಲ್ಲು ಸಲ್ಲಿಸುವದು.

12. ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು (ಪಿಕಾರ್ಡ್) ಗಳು ಈ ಯೋಜನೆಗೆ ಸಂಬಂಧಿಸಿದ ಕ್ಲೈಮು ಬಿಲ್ಲುಗಳನ್ನು ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ (ಕಸ್ಕಾರ್ಡ್) ಮುಖಾಂತರ ಸಹಕಾರ ಸಂಘಗಳ ನಿಬಂಧಕರಿಗೆ ಕ್ಲೈಮು ಬಿಲ್ಲು ಸಲ್ಲಿಸುವದು.

13. ಈ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ನಿಬಂಧಕರು ಆಡಳಿತಾತ್ಮಕ ಮಾರ್ಗಸೂಚಿಯನ್ನು ಹೊರಡಿಸಿ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳುವದು.

14. ಈ ಯೋಜನೆ ಅನುಷ್ಠಾನದಿಂದ ತಗಲುವ ವೆಚ್ಚವನ್ನು ಭರಿಸುವ ವಿಧಿವಿಧಾನಗಳ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಿ ಪ್ರತ್ಯೇಕ ಆದೇಶವನ್ನು ಹೊರಡಿಸಲಾಗುವದು.