ಶ್ರೀಮಂಗಲ, ಜೂ. 23: ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸರ ತಾಣ ಯೋಜನೆ ಅನುಷ್ಠಾನವಾದರೆ ಜನರಿಗೆ ಮಾರಕವಾಗಲಿದೆ, ಈ ಯೋಜನೆ ಯಿಂದ ಜನರನ್ನು ಒಕ್ಕಲೆಬ್ಬಿಸ ಬೇಕಾಗುತ್ತದೆ ಎಂದು ಹೇಳುತ್ತಿದ್ದ ಜಿಲ್ಲೆಯ ಶಾಸಕರು ಇದೀಗ ಯೋಜನೆ ಘೋಷಣೆಯಾದ ನಂತರ ಈ ಯೋಜನೆಯಿಂದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದು, ಕೆ.ಜಿ. ಬೋಪಯ್ಯ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಆಗ್ರಹಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ಷ್ಮ ಪರಿಸರ ತಾಣ ಯೋಜನೆಯ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಸೂಕ್ತ ಮಾಹಿತಿಯನ್ನು ಆರಂಭದಲ್ಲೇ ನೀಡಬೇಕಾಗಿತ್ತು. ಈ ಬಗ್ಗೆ ರಾಜ್ಯ ಸರಕಾರದ ಮೇಲೆ ಒತ್ತಡವನ್ನು ಹೇರಬೇಕಾಗಿತ್ತು. ಇದನ್ನು ಬಿಟ್ಟು ಜನರಲ್ಲಿ ಆತಂಕ ಮೂಡಿಸಿ, ಈ ಯೋಜನೆ ಘೋಷಣೆಗೆ ಎಂದಿಗೂ ಬಿಡುವದಿಲ್ಲ. ಎಂದು ಹೇಳಿದ ಶಾಸಕರು ಇದೀಗ ಏಕೆ ಈ ಯೋಜನೆಯಿಂದ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಜಿಲ್ಲೆಯ ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಕೆದಕಿ ತೆಗೆದು ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಿಸಾನ್ ಸಂಘ ಹೋರಾಟವನ್ನು ರೂಪಿಸಿದೆ. ಆದರೆ ರಾಜಕೀಯ ಪಕ್ಷವೊಂದು ಇದನ್ನು ಹೈಜಾಕ್ ಮಾಡಿ ಸಮಸ್ಯೆ ಇತ್ಯರ್ಥಪಡಿಸುವದಾಗಿ ಹೇಳಿಕೊಂಡು ತಿರುಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾಡಿದರು. ಜಿಲ್ಲೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಆಗಮಿಸಿದಾಗ ಈ ಬಗ್ಗೆ ಚಕಾರ ಎತ್ತದವರಿಂದ ಈ ಕೆಲಸ ಸಾಧ್ಯವೇ ಎಂದು ರಾಜೀವ್ ಬೋಪಯ್ಯ ಪ್ರಶ್ನಿಸಿದರು.

ಕಳೆದ ಎರಡು ಮೂರು ವರ್ಷಗಳಿಂದ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರ ಯಾವದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇದನ್ನು ನಾವುಗಳು ಆಯ್ಕೆ ಮಾಡಿ ಕಳುಹಿಸಿರುವ ಜನಪ್ರತಿನಿಧಿಗಳು ಪ್ರಶ್ನಿಸದೆ ಸಮಸ್ಯೆಯ ಪರಿಹಾರಕ್ಕೆ ಸ್ಪಂದನ ನೀಡುತ್ತಿಲ್ಲ. ರೈತರ ಜಾನುವಾರು, ಕಾಫಿ, ಕರಿಮೆಣಸು ಕಳ್ಳತನವಾಗುತ್ತಿದೆ. ಇದರೊಂದಿಗೆ ಆನೆ ಹಾವಳಿಗೆ ಆರ್.ಟಿ.ಸಿ.ಯಲ್ಲಿ ಬೆಳೆ ಕಲಂ ನಿಗದಿಯಾಗದೆ ರೈತರಿಗೆ ಯಾವದೇ ಸೌಲಭ್ಯ ದೊರೆಯುತ್ತಿಲ್ಲ. ಮೂರು ತಿಂಗಳಿಗೊಮ್ಮೆ ಕೆ.ಡಿ.ಪಿ. ಸಭೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ನಡೆಸುತ್ತಿದ್ದು, ಮೇಲಿನ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ನೀಡಬೇಕಾಗಿದೆ ಹಾಗೂ ಸರಕಾರಕ್ಕೆ ಇದರ ಬಗ್ಗೆ ಮಾಹಿತಿಯನ್ನು ರವಾನಿಸಬೇಕಾಗಿದೆ. ಇಷ್ಟು ಸಮಯದವರೆಗೆ ಯಾವೆಲ್ಲಾ ಸಮಸ್ಯೆಗಳನ್ನು ಸರಕಾರಕ್ಕೆ ಕಳುಹಿಸಿದ್ದಾರೆ. ರೈತರ ಬಗ್ಗೆ ಯಾವ ರೀತಿಯ ಗಟ್ಟಿ ನಿಲುವನ್ನು ತಳೆದಿದ್ದಾರೆ ಎಂಬದನ್ನು ರೈತರಿಗೆ ತಿಳಿಸುವಂತೆ ಆಗ್ರಹಿಸಿದರು.

ಚುನಾಯಿತ ಪ್ರತಿನಿಧಿಗಳು ಜಿಲ್ಲೆಯ ಸಮಸ್ಯೆಗಳನ್ನು ವಿಧಾನಸಭೆ, ವಿಧಾನಪರಿಷತ್ ಹಾಗೂ ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿ ಸರಕಾರದ ಗಮನ ಸೆಳೆದು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇದನ್ನು ಬಿಟ್ಟು ಜಿಲ್ಲೆಯಲ್ಲಿ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಮಾಡುವದರ ಮೂಲಕ ಇವರ ಸ್ಥಾನಕ್ಕೆ ಅಗೌರವ ತಂದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಕಿಸಾನ್ ಸಂಘದ ಉಪಾಧ್ಯಕ್ಷ ಚೊಟ್ಟೆಯಂಡಮಾಡ ಡಿ. ಮಾದಪ್ಪ, ಜಂಟಿ ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ ಹಾಜರಿದ್ದರು.