ಗೋಣಿಕೊಪ್ಪಲು, ಜೂ.24: ಮುದ್ದಾದ 7 ವರ್ಷ ಪ್ರಾಯದ ಹಸುವಿನ ಗರ್ಭದಲ್ಲಿ 8 ತಿಂಗಳ ಪುಟ್ಟ ಕಂದಮ್ಮ ಬೆಳೆಯುತಿತ್ತು. ತುಂಬು ಗರ್ಭಿಣಿಗೆ ಇನ್ನೊಂದು ತಿಂಗಳಿನಲ್ಲಿ ಮುದ್ದುಕರುವನ್ನು ಕಣ್ತುಂಬಿಕೊಳ್ಳುವ ಬಯಕೆ ಅಪಾರವಿತ್ತೇನೋ! ಆದರೆ ವಿಧಿಲಿಖಿತ ಬೇರೆಯೇ ಇತ್ತು. ನಾಗರಹೊಳೆ ಉದ್ಯಾನದಿಂದ ನುಸುಳಿದ ಹುಲಿರಾಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಹಸುವನ್ನು ಕೊಂದು ಕಬಳಿಸಲು ದಾಳಿ ಮಾಡಿಯೇ ಬಿಟ್ಟಿತು. ತುಂಬು ಗರ್ಭಿಣಿ ತನ್ನ ಕುತ್ತಿಗೆಯಲ್ಲಿ ಹಗ್ಗದ ಬಿಗಿತವಿದ್ದರೂ ಹುಲಿರಾಯನಿಗೆ ಕತ್ತಿನ ಭಾಗಕ್ಕೆ ಬಾಯಿ ಹಾಕಲು ಅವಕಾಶ ನೀಡದೆ ಹೋರಾಟ ನಡೆಸಿತ್ತು. ಅಂತೂ ಇಂತೂ ತನ್ನ ಕರುವನ್ನು ಉಳಿಸಲು ಹಗ್ಗವನ್ನೇ ತುಂಡರಿಸಿ ಸುಮಾರು ಒಂದು ಕಿ.ಮೀ.ಕಾಫಿ ತೋಟದ ನಡುವೆಯೇ ಓಡಿತ್ತು. ಅತ್ತ ಹುಲಿರಾಯ ಬೆನ್ನಿನ ಮೇಲೆ ಧುಮುಕಿ ಭುಜವನ್ನು ತನ್ನ ಕೋರೆ ಹಲ್ಲುಗಳಿಂದ ಕಚ್ಚಿದರೂ ಬೆದರದೆ, ಹುಲಿಯನ್ನು ತನ್ನ ಕೋಡುಗಳಿಂದ ತಿವಿದು ಹೋರಾಟ ನಡೆಸಿದೆ. ಹಸುವಿನೊಂದಿಗೆ ಸೆಣಸಿ ಸೋತ ಹುಲಿರಾಯ ಕಾಲಿಗೆ ಬುದ್ಧಿ ಹೇಳಿದೆ. ಆದರೆ, ಬೆನ್ನಿನ ಮೇಲೆ ಭಾರೀ ಗಾತ್ರದ ಗಾಯವಾಗಿತ್ತು. ಮೈಯಲ್ಲೆಲ್ಲಾ ಪಂಜಿನಿಂದ ಪರಚಿದ ಗಾಯ. ಪಶುವೈದ್ಯರ ಚಿಕಿತ್ಸೆಯೂ ಫಲಕಾರಿಯಾಗದೆ 2 ದಿನಗಳ ನಂತರ ಗರ್ಭವತಿ ಹಸು ಜೀವನ್ಮರಣ ಹೋರಾಟದಲ್ಲಿ ಸೋತು ಅಸುನೀಗಿದ ದಾರುಣ ಘಟನೆ ದಕ್ಷಿಣ ಕೊಡಗಿನ ನಾಲ್ಕೇರಿ ಸಮೀಪ ಲಕ್ಕುಂದ ಎಂಬಲ್ಲಿ ನಡೆದಿದೆ.

ಲಕ್ಕುಂದ ಗ್ರಾಮದ ಮುಕ್ಕಾಟಿರ ಕಾವೇರಪ್ಪ (ಟಾಟು) ಎಂಬವರು 30 ವರ್ಷಗಳಿಂದಲೂ ಸಣ್ಣದಾಗಿ ಹೈನುಗಾರಿಕೆ ಮಾಡುತ್ತಾ ಬಂದಿದ್ದಾರೆ. ಒಟ್ಟು 7 ರಾಸುಗಳಿದ್ದು, ಇದೀಗ ಸಾವನ್ನಪ್ಪಿದ ಹಸು ದಿನಕ್ಕೆ 10 ಲೀಟರ್ ಹಾಲು ನೀಡುತಿತ್ತು ಎನ್ನಲಾಗಿದೆ. ಹಾಲನ್ನು ಮಾರಾಟ ಮಾಡಿ ಒಂದಷ್ಟು ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಂಡಿದ್ದ ಕುಟುಂಬ. ಇದುವರೆಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸಮೀಪದಲ್ಲಿಯೇ ಸಣ್ಣ ಹಿಡುವಳಿದಾರರಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಟಾಟು ಅವರು

(ಮೊದಲ ಪುಟದಿಂದ) ಹುಲಿರಾಯ ಇದೇ ಪ್ರಥಮ ಬಾರಿಗೆ ಕೊಟ್ಟಿಗೆಗೆ ನುಗ್ಗಿದೆ ಎಂದು ನೋವನ್ನು ತೋಡಿಕೊಂಡಿದ್ದಾರೆ.

ಹುಲಿಯಿಂದ ತಪ್ಪಿಸಿಕೊಂಡಿದ್ದ ಹಸು ಮರುದಿನ ಅಲ್ಲಿನ ಅಜ್ಜಿಕುಟ್ಟೀರ ಅಪ್ಪಣ್ಣ ಎಂಬವರ ತೋಟದಲ್ಲಿ ಪ್ರತ್ಯಕ್ಷವಾಗಿದೆ. ಕಡೆಗೆ ಮಾಲೀಕ ಟಾಟು ಹಾಗೂ ಪುತ್ರ ಆದಿತ್ಯ ಹಸುವನ್ನು ಕರೆತಂದು ಕಾನೂರಿನ ಪಶುವೈದ್ಯ ಡಾ. ಭವಿಷ್ ಹಾಗೂ ಸಿಬ್ಬಂದಿ ರವಿ ಮೂಲಕ ಚಿಕಿತ್ಸೆ ನೀಡಿದ್ದರು. ಗಾಯಕ್ಕೆ ಹೊಲಿಗೆಯನ್ನೂ ಹಾಕಲಾಗಿತ್ತು.

ತಾ.23 ರಂದು ರಾತ್ರಿ ಹಸು ಸಾವನ್ನಪ್ಪಿದೆ. ಹುಲಿ ದಾಳಿಗೂ 2-3 ದಿನದ ಹಿಂದೆ ತೋಟದಲ್ಲಿ ಹುಲಿ ಹೆಜ್ಜೆ ಗುರುತನ್ನು ಮಾಲೀಕರು ನೋಡಿದ್ದರು. ಆದರೆ, ಏನೂ ಮಾಡಲಾರದು ಎಂದು ಸುಮ್ಮನಾಗಿದ್ದರು.

ಸ್ಥಳಕ್ಕೆ ನಾಗರಹೊಳೆ ವಲಯಾರಣ್ಯಾಧಿಕಾರಿ ಅರವಿಂದ್ ಮತ್ತು ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯ ಚಲನ ವಲನ ಗಮನಿಸಲು ಕಾವೇರಪ್ಪ ಅವರ ತೋಟದ ತೆಂಗಿನ ಮರ, ಇತ್ಯಾದಿ ಕಡೆ ‘ಕ್ಯಾಮೆರಾ ಟ್ರ್ಯಾಪಿಂಗ್’ ಕಾರ್ಯ ಕೈಗೊಂಡಿದ್ದಾರೆ. ಎರಡು ದಿನಗಳ ಅವಧಿಯಲ್ಲಿ ರಾತ್ರಿ ಮತ್ತೆ ಹುಲಿ ಇತ್ತ ಸುಳಿಯಲಿಲ್ಲ ಎನ್ನಲಾಗಿದೆ. ಕಾನೂರು ಸುತ್ತಮುತ್ತ ಕೆಲವರ ತೋಟದಲ್ಲಿ ಹುಲಿಹೆಜ್ಜೆ ಕಂಡು ಬಂದಿದೆ ಎನ್ನಲಾಗುತ್ತಿದೆ.

ಪರಿಹಾರಕ್ಕೆ ಆಗ್ರಹ

ಕಾನೂರು ಗ್ರಾ.ಪಂ.ಸದಸ್ಯ ಹಾಗೂ ಸಮಾಜ ಸೇವಕ ಕಾಡ್ಯಮಾಡ ಬೋಪಣ್ಣ ಅವರು ಹುಲಿ ದಾಳಿಯಿಂದ ಹಸು ಸಾವನ್ನಪ್ಪಿದ್ದು, ರೂ.50 ಸಾವಿರ ಪರಿಹಾರವನ್ನು ಮಾಲೀಕರಿಗೆ ಅರಣ್ಯ ಇಲಾಖೆ ನೀಡುವಂತೆ ಒತ್ತಾಯಿಸಿದ್ದಾರೆ. ತುರ್ತು ಪರಿಹಾರ ನೀಡುವ ಭರವಸೆಯನ್ನು ಅರಣ್ಯಾಧಿಕಾರಿಗಳು ನೀಡಿರುವದಾಗಿ ಇದೇ ಸಂದರ್ಭ ಆದಿತ್ಯ ತಿಳಿಸಿದ್ದಾರೆ. ವರದಿ: ಟಿ.ಎಲ್.ಶ್ರೀನಿವಾಸ್