ಮಡಿಕೇರಿ, ಜೂ. 24: ಕಳೆದ 2015, 2016-17ನೇ ಸಾಲಿನ ರಾಜ್ಯಮಟ್ಟದ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಹಾಗೂ ವಿವಿಧ ಪುಸ್ತಕ ಪುರಸ್ಕಾರ, ಅಕಾಡೆಮಿ ಹೊರತಂದಿರುವ ಪುಸ್ತಕಗಳು ಮತ್ತು ಸಿಡಿ ಬಿಡುಗಡೆ ಯೊಂದಿಗೆ ಗ್ರಾಮೀಣ ಕಲಾ ತಂಡಗಳಿಗೆ ಜಾನಪದ ಕಲಾಪರಿಕರಗಳ ವಿತರಣಾ ಸಮಾರಂಭ ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಆಯೋಜನೆಗೊಂಡಿತ್ತು. ಕೊಡಗಿನ ಮೂಲ ನಿವಾಸಿ ಜನಾಂಗದ ವಿವಿಧ ಕ್ಷೇತ್ರದಲ್ಲಿ ಕಲಾರಂಗದ ಸೇವೆ ಸಲ್ಲಿಸಿರುವ ಹಿರಿಯ ಚೇತನಗಳನ್ನು ಈ ಸಂದರ್ಭ ಗೌರವಿಸಿದ ಕೀರ್ತಿ ಅಕಾಡೆಮಿಯದಾಗಿತ್ತು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಈ ಅವಧಿಯ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಸಮೀಪಿಸಿದ್ದು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಅಕಾಡೆಮಿಯ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ. ಕೊಡವ ಜಾನಪದ, ಆಚಾರ-ವಿಚಾರ, ಸಾಹಿತ್ಯ, ಕೊಡವ ರಂಗಭೂಮಿ ಚಟುವಟಿಕೆ.... ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಿಲ್ಲೆಯೂ ಸೇರಿದಂತೆ ಜಿಲ್ಲೆಯ ಹೊರಭಾಗದಲ್ಲೂ ನಡೆಸಿದೆ ಎಂದು ಪ್ರಾಸ್ತಾವಿಕ ನುಡಿಯಲ್ಲಿ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ನುಡಿದರು.

ಅಕಾಡೆಮಿ ಕಾರ್ಯಯೋಜನೆ ಯಂತೆ ‘ಗೌರವ ಪ್ರಶಸ್ತಿ’ ಹಾಗೂ ‘ಪುಸ್ತಕ ಪ್ರಶಸ್ತಿ’ ಪ್ರದಾನ ಸಮಾರಂಭ ರಾಜ್ಯಮಟ್ಟದಾಗಿದ್ದು, ಜಿಲ್ಲೆಯ ಸಾಧಕರನ್ನು, ಲೇಖಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತಿದೆ. ಗೌರವ ಪ್ರಶಸ್ತಿ ರೂ. 50,000, ಫಲಕ, ಪುಸ್ತಕ ಪ್ರಶಸ್ತಿ ರೂ. 25,000, ಫಲಕವನ್ನು ಒಳಗೊಂಡಿದೆ.

ಕಾವೇರಿ ಕಲಾಕ್ಷೇತ್ರದÀಲ್ಲಿ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಏರ್ಪಡಿಸಿದ್ದು, ಇದೇ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಹಾಗೂ ಸಿ.ಡಿ. ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.

ಬಡಕಡಮ್ಮಂಡ ಕಸ್ತೂರಿ ಗೋವಿಂದಮಯ್ಯ ಅವರ ‘ಬೀಂದ ಮೊಗ್ಗ್’ (ಕವನ ಸಂಕಲನ), ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರ ‘ಓ.....ಅದಾ? ಕಾದಂಬರಿ’, ಮುಲ್ಲೇಂಗಡ ರೇವತಿ ಪೂವಯ್ಯ ಅವರ ‘ನೆಲಂಜೊಪ್ಪೆ’ ಕವನ ಸಂಕಲನ, ನಾಯಕಂಡ ಬೇಬಿ ಚಿಣ್ಣಪ್ಪ ಅವರ ‘ತೇನ್‍ಗೂಡ್’ ಕವನ ಸಂಕಲನ, ಪುಸ್ತಕಗಳು ಲೋಕಾರ್ಪಣೆಗೊಂಡಿತು.

ಕೊಡಗಿನ ಹೆಮ್ಮೆಯ ಸಾಹಿತಿ ದಿ. ಡಾ. ಐಚೆಟ್ಟಿರ ಮಾ. ಮುತ್ತಣ್ಣ ಅವರ “ಮಣಿಮಾಲೆ” ಕವನ ಸಂಕಲನದಿಂದ ಆಯ್ದ ಕವನಗಳಿಗೆ ಜಿಲ್ಲೆಯ ಕಲಾವಿದ ಮತ್ತು ಅಕಾಡೆಮಿ ಸದಸ್ಯ ಮದ್ರಿರ ಸಂಜು ಬೆಳ್ಯಪ್ಪ ರಾಗ ಸಂಯೋಜನೆ, ಜಿಲ್ಲೆಯ ಉದಯೋನ್ಮುಖ ಗಾಯಕರಿಂದ ಹಾಡಿಸಿರುವ ಹಾಡುಗಳ ಸಿಡಿಯನ್ನು ಕೂಡ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ವಿಶೇಷ ಸಿಡಿ ಬಿಡುಗಡೆ : 1978ರ ದಶಕದಲ್ಲಿ ಕೊಡವ ಸಾಂಪ್ರದಾಯಿಕ ವಾಲಗದಲ್ಲಿ ಖ್ಯಾತರಾಗಿದ್ದ ಅಮ್ಮತ್ತಿಯ ದಿ. ತಿಮ್ಮ ಅವರು ನುಡಿಸಿರುವ ಮೂಲ ಸ್ವರೂಪದ ಸಿಡಿ ಬಿಡುಗಡೆ ಗೊಂಡಿದ್ದು, ಸಮಾರಂಭದ ವಿಶೇಷವಾಗಿತ್ತು. ಅಮ್ಮತ್ತಿ ದಿ. ತಿಮ್ಮ ಅವರ ತಂಡದ ಕೊಡವ ಸಾಂಪ್ರದಾಯಿಕ ವಾದ್ಯವನ್ನು ವೀರಾಜಪೇಟೆಯ ಸಂಗೀತ ಕಲಾಸಂಘದ ಮಚ್ಚಾರಂಡ ಮಣಿ ಕಾರ್ಯಪ್ಪ

(ಮೊದಲ ಪುಟದಿಂದ) ಹಾಗೂ ಮಡಿಕೇರಿಯ ‘ನಾದಲಹರಿ’ ಸಂಸ್ಥೆಯ ತಮ್ಮು ಪೂವಯ್ಯ ಅವರ ನೇತೃತ್ವದಲ್ಲಿ 1978ರಲ್ಲಿ ಧ್ವನಿ ಮುದ್ರಿಸಿದನ್ನು ಪುನರ್ ಮುದ್ರಿಸಿ ಇಂದು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅವರಿಂದ ಹಕ್ಕನ್ನು ಪಡೆದುಕೊಂಡು ಕ್ಯಾಸೆಟ್ ರೂಪದಲ್ಲಿದ್ದ ಕೊಡವ ವಾಲಗವನ್ನು ಸಿಡಿ ರೂಪಕ್ಕೆ ತಂದು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.

ರೂ. 25 ಸಾವಿರ ಪುಸ್ತಕ ಪ್ರಶಸ್ತಿ

ಡಾ. ಬೊವ್ವೇರಿಯಂಡ ಚೆಟ್ಟಿಚ್ಚ ಉತ್ತಯ್ಯ ಮತ್ತು ಬೊವ್ವೇರಿಯಂಡ ಉತ್ತಯ್ಯ ತಂಗಮ್ಮ 2016ರ ‘ಕೊಡವ ಅರಿವೋಲೆ’, ಮೊಣ್ಣಂಡ ಶೋಭ ಸುಬ್ಬಯ್ಯ 2016ರ ‘ಪವಳಸಾಲ್’ ಮತ್ತು ‘ಪಾರುವ ಪಾಪ್‍ಲಿ’, ಐತಿಚಂಡ ರಮೇಶ್ ಉತ್ತಪ್ಪ 2015ರ ‘ನಲ್ಲತಕ್ಕ್’, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ 2015ರ ‘ಪೊಂಬೊಳೆ ನೆಲ್ಲ್’, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ 2015ರ ‘ಪಾರು’ ಈ ಸಾಹಿತ್ಯಗಳಿಗೆ ಪ್ರಶಸ್ತಿ ಪಡೆದುಕೊಂಡರು.

ರೂ. 50 ಸಾವಿರ ಗೌರವ ಪ್ರಶಸ್ತಿ

ಮೈತಾಡಿಯ ಬಾಳೆಕುಟ್ಟಿರ ಪಿ. ಈರಪ್ಪ ಅವರ ಬಾಳೋಪಾಟ್ ಮತ್ತು ಜಾನಪದ ತಜ್ಞ, ಮೂರ್ನಾಡುವಿನ ಚೌರೀರ ಸೋಮಯ್ಯ ತಿಮ್ಮಯ್ಯ ಅವರ ಸಂಗೀತ, ತೋರ ಗ್ರಾಮದ ಕುಡಿಯರ ದೇವಕ್ಕಿ ಅವರ ‘ಉರ್‍ಟಿಕೊಟ್ಟ್’ ಹಾಡು, ‘ದುಡಿ ಪಾಟ್’ಗೆ. ಹಾಲುಗುಂದ ಪುಗ್ಗೆರ ಕೆ. ಪೂವಮ್ಮ ಅವರ ‘ಉಮ್ಮತ್ತಾಟ್’ ಮತ್ತು ‘ನೃತ್ಯ’, ಪೊನ್ನಂಪೇಟೆಯ ಕುಟ್ಟಂಡ ರಾಜಾರಾಂ ಗಣಪತಿ ‘ಸಂಗೀತ’ ಮತ್ತು ‘ವಾದ್ಯಗೋಷ್ಠಿ’, ಕೆದಮುಳ್ಳೂರುವಿನ ಬೀಕಚಂಡ ಎಂ. ಬಿದ್ದಪ್ಪ, ವಿವಿಧ ಬಗೆಯ ತೆರೆ ಕಟ್ಟುವದು ಮತ್ತು ಕೊಡವ ಜಾನಪದ ಕಲೆ, ಕುಂಜಿಲ ಕಕ್ಕಬೆಯ ಉತ್ತುಕುಟ್ಟಡ ಸಿ. ತಿಮ್ಮ ಉಪ್ಪಚ್ಚ, ಅಂಗಕಳಿಗಾರ ಮತ್ತು ಕೊಡವ ಒಡ್ಡೋಲಗ, ಬಿಟ್ಟಂಗಾಲದ ಪೊನ್ನಿರ ಗಗನ್, ಪೀಚೆಕತ್ತಿ ತಯಾರಕ ಮತ್ತು ಉರಗ ತಜ್ಞ, ಪೊರಾಡು ಗ್ರಾಮದ ಬಲ್ಯಮಿದೇರಿರ ಸಿ. ನಾಣಯ್ಯ, ಕೊಡವ ಕೋಲಾಟ್, ಬೊಳಕಾಟ್, ನೃತ್ಯಗಾರ ಮತ್ತು ತರಬೇತುದಾರ. ಈ ಹಿರಿಯ ಚೇತನಗಳಿಗೆ ತಲಾ ರೂ. 50 ಸಾವಿರ ನಗದು ಸಹಿತ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಐತಿಚಂಡ ರಮೇಶ್ ಉತ್ತಪ್ಪ ಅಕಾಡೆಮಿಗೆ ಅಭಿವಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ಜಿಲ್ಲೆಯ ಕೊಡವ ಭಾಷಿಕ ಮೂಲ ನಿವಾಸಿ ಜನಾಂಗದ ಗ್ರಾಮೀಣ ಕಲಾವಿದರನ್ನು ಗುರುತಿಸಿ ಬಾಳೋಪಾಟ್ ಬೊಳಚೆಗಾಗಿ ದುಡಿಗಳನ್ನು ಇದೇ ಸಂದರ್ಭ ಹತ್ತಾರು ತಂಡಗಳಿಗೆ ವಿತರಿಸಲಾಯಿತು.

ಅರಮನೆ ಪಾಲೆಗಳ ಸಹಿತ ಇತರರಿಗೆ ಚಂಡೆ ನೀಡಲಾಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅರ್ಥಪೂರ್ಣ ಸಮಾರಂಭ ಇದಾಗಿತ್ತು.