ವೀರಾಜಪೇಟೆ, ಜೂ. 23: ರಾಜ್ಯದಲ್ಲೇ ದ್ವಿತೀಯ ಪಿ.ಯು. ಫಲಿತಾಂಶದ 3 ನೇ ಸ್ಥಾನ ಪಡೆಯುವ ಜಿಲ್ಲೆಯ ವಿದ್ಯಾರ್ಥಿಗಳು ಸಿಇಟಿ ಹಾಗೂ ನೀಟ್ ಪರೀಕ್ಷೆಯಲ್ಲಿ ಇದುವರೆಗೂ ಉತ್ತಮ ಸಾಧನೆ ತೋರದಿರುವದು ಬೇಸರ ತಂದಿದೆ ಎಂದು ಸಮಾಜ ಸೇವಕ ಕೋಲತಂಡ ರಘು ಮಾಚಯ್ಯ ಹೇಳಿದರು.

ಪಟ್ಟಣದ ಜೈನರ ಬೀದಿಯಲ್ಲಿರುವ ಚಾಣಕ್ಯ ಟ್ರಸ್ಟ್ ವತಿಯಿಂದ ನಡೆದ ಉಚಿತ ಸಿಇಟಿ ಹಾಗೂ ನೀಟ್ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಹಿಂದುಳಿಯಲು ಸೂಕ್ತ ಕೋಚಿಂಗ್ ಸೆಂಟರ್‍ಗಳಿಲ್ಲದಿರುವದೇ ಪ್ರಮುಖ ಕಾರಣವಾಗಿದ್ದು, ದ್ವಿತೀಯ ಪಿ.ಯು.ನಲ್ಲಿ ಶೇ. 98 ರಷ್ಟು ಅಂಕ ಗಳಿಸುವ ಜಿಲ್ಲೆಯ ವಿದ್ಯಾರ್ಥಿಗಳು ಸಿಇಟಿಯಲ್ಲಿ ನಿರಾಶಾದಾಯಕ ಫಲಿತಾಂಶವನ್ನು ಪಡೆಯುತ್ತಿದ್ದಾರೆ. ಸಿಇಟಿ ಹಾಗೂ ನೀಟ್ ಪರೀಕ್ಷೆಯನ್ನು ಎದುರಿಸಲು ಈಗಿನಿಂದಲೇ ತಯಾರಿ ನಡೆಸಬೇಕಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವೀರಾಜಪೇಟೆ ಮತ್ತು ಮಡಿಕೇರಿ ಯೋಜನಾಧಿಕಾರಿ ಸದಾಶಿವಗೌಡ ಮಾತನಾಡಿ, ಉತ್ತಮ ಕಾಲಘಟ್ಟವಾದ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಮುಂದೆ ಬದುಕಿನ ಅವಧಿಯಲ್ಲಿ ಉತ್ತಮವಾಗಿರಬಹುದು. ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿರುವ ಯುವಶಕ್ತಿ ಮೊದಲು ಸಮರ್ಥರಾಗಬೇಕು ಎಂದರು.

ಸಮಾಜ ಸೇವಕಿ ಜೆ.ಎನ್. ವಸಂತ ದೇವಿ ಕಾರ್ಯಾಗಾರವನ್ನು ಉದ್ಘಾಟಿಸಿ, ಮಾತನಾಡಿದರು. ಕಾರ್ಯಾಗಾರದಲ್ಲಿ ಮೈಸೂರಿನ ವಿಶ್ವ ಪ್ರಜ್ಞ ಕಾಲೇಜಿನ ಅಧ್ಯಕ್ಷ ವಿಶ್ವನಾಥ್ ಶೇಷಾಚಲ, ಮಂಗಳೂರಿನ ಚಿದಾನಂದ, ನಾಗಪ್ರಸಾದ್ ರೆಡ್ಡಿ, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಸುದೇಶ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಿಇಟಿ ಹಾಗೂ ನೀಟ್ ಪರೀಕ್ಷೆಯನ್ನು ಎದುರಿಸುವ ಕುರಿತು ಮಾಹಿತಿ ನೀಡಿದರು.