ಗೋಣಿಕೊಪ್ಪಲು, ಜೂ. 24: ಹಾಕಿ ಕೂರ್ಗ್ ವತಿಯಿಂದ ಒಲಿಂಪಿಕ್ ದಿನಾಚರಣೆ ಅಂಗವಾಗಿ ಪೊನ್ನಂಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಟರ್ಫ್ ಮೈದಾನದಲ್ಲಿ ಹಾಕಿ ಪಂದ್ಯಾವಳಿ ನಡೆಯಿತು.

14, 16 ಹಾಗೂ 17 ವಯೋಮಿತಿಯ ಒಳಗಿನ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಪಂದ್ಯಾವಳಿ ನಡೆಯಿತು. ಪಾಲ್ಗೊಂಡ ಆಟಗಾರರಿಗೆ ಪದಕ ನೀಡಿ ಗೌರವಿಸಲಾಯಿತು.

ಬಾಲಕಿಯರ ವಿಭಾಗದಲ್ಲಿ ಕೂಡಿಗೆ ವಸತಿ ಶಾಲಾ ತಂಡವು ಪೊನ್ನಂಪೇಟೆ ವಸತಿ ಶಾಲಾ ತಂಡದ ವಿರುದ್ಧ 2-0 ಗೋಲುಗಳ ಅಂತರದಿಂದ ಜಯ ಗಳಿಸಿತು.

ಮತ್ತೊಂದು ಪಂದ್ಯದಲ್ಲಿ ಪೊನ್ನಂಪೇಟೆ ಸಂತ ಆಂಥೋನಿ ತಂಡವು ಟಿ. ಶೆಟ್ಟಿಗೇರಿ ರೂಟ್ಸ್ ವಿರುದ್ಧ 1-0 ಗೋಲುಗಳಿಂದ ಜಯ ಗಳಿಸಿತು.

ಬಾಲಕರ ವಿಭಾಗದಲ್ಲಿ ಪೊನ್ನಂಪೇಟೆ ವಸತಿ ಶಾಲಾ ತಂಡವು ಕೂಡಿಗೆ ವಸತಿ ಶಾಲಾ ತಂಡದ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಮತ್ತೊಂದು ಪಂದ್ಯದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡ ವೀರಾಜಪೇಟೆ ಕಾವೇರಿ ಕಾಲೇಜು ತಂಡವನ್ನು 1-0 ಗೋಲುಗಳಿಂದ ಮಣಿಸಿತು.

ಸನ್ಮಾನ: ಈ ಸಂದರ್ಭ ಗೋಣಿಕೊಪ್ಪದ ಹಿರಿಯ ಹಾಕಿ ಪಟು ಬುಟ್ಟಿಯಂಡ ಅಪ್ಪಾಜಿ ಅವರನ್ನು ಹಾಕಿ ಕೂರ್ಗ್ ವತಿಯಿಂದ ಸನ್ಮಾನಿಸಲಾಯಿತು.

ಹಾಕಿ ಕೂರ್ಗ್ ಉಪಾಧ್ಯಕ್ಷ ರವಿ ಪೆಮ್ಮಯ್ಯ, ಕಾರ್ಯದರ್ಶಿ ಪಳಂಗಂಡ ಲವಕುಮಾರ್, ಕ್ರೀಡಾಕೂಟ ಸಮಿತಿ ಸಂಚಾಲಕ ಬುಟ್ಟಿಯಂಡ ಚೆಂಗಪ್ಪ ಉಪಸ್ಥಿತರಿದ್ದರು.