ಕುಶಾಲನಗರ, ಜೂ. 24: ಕುಶಾಲನಗರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವದಾಗಿ ಯೋಜನೆ ಮತ್ತು ಸಾಂಖ್ಯಿಕ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಭರವಸೆ ನೀಡಿದ್ದಾರೆ. ಕುಶಾಲನಗರ ಪಟ್ಟಣ ಪಂಚಾಯಿತಿಗೆ ಕೊಡಗು ವಿಶೇಷ ಪ್ಯಾಕೇಜ್‍ನಲ್ಲಿ ಬಿಡುಗಡೆಯಾಗಿರುವ ಅನುದಾನ ಮತ್ತು ವಿವಿಧ ಲೆಕ್ಕ ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಅನುದಾನದ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕುಶಾಲನಗರದ ಕಾರು ನಿಲ್ದಾಣ ಆವರಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ನೀಡಿದ ಕುಶಾಲನಗರದ ಅಭಿವೃದ್ಧಿಗೆ ಸರಕಾರ ಯೋಜನೆಗಳನ್ನು ರೂಪಿಸುವದಾಗಿ ತಿಳಿಸಿದÀರು. ದಿವಂಗತ ಗುಂಡೂರಾವ್ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದ ಕಾರ್ಯವೈಖರಿಯನ್ನು ಸೀತಾರಾಂ ಸ್ಮರಣೆ ಮಾಡಿದರು.

ತಾನು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದ ಸಂದರ್ಭ ಜಿಲ್ಲೆಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಹಲವು ಪ್ರಸ್ತಾವನೆಗಳನ್ನು ಸರಕಾರಕ್ಕೆ ನೀಡಿದ್ದು ಇದೀಗ ಕಾರ್ಯಗತಗೊಳ್ಳುತ್ತಿದೆ ಎಂದು ಮಾಜಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿವಿಧ ಕಾಮಗಾರಿಗಳ ಭೂಮಿಪೂಜೆಯನ್ನು ನೆರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಡಗು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. 4 ವರ್ಷಗಳ ಅವಧಿಯಲ್ಲಿ ಒಟ್ಟು ರೂ 150 ಕೋಟಿ ಬಿಡುಗಡೆಯಾಗಿದ್ದು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಯಾಗಿದೆ. ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಸರಕಾರ ಯಶಸ್ಸು ಕಂಡಿದೆ ಎಂದರು. ಕುಶಾಲನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಯೋಜನೆಯ ಕಾಮಗಾರಿಗೆ ಉಂಟಾಗಿರುವ ಅಡಚಣೆಯನ್ನು ಜಿಲ್ಲಾಡಳಿತ ತಕ್ಷಣ ಇತ್ಯರ್ಥಗೊಳಿಸಲಿದೆ ಎಂದ ಅವರು, ಕುಶಾಲನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ರೂ 10 ಕೋಟಿ ಅನುದಾನ ಕಲ್ಪಿಸಲು ಪ್ರಯತ್ನಿಸಲಾಗುವದು. ಕುಶಾಲನಗರದ ಅಭಿವೃದ್ಧಿಗೆ ಸದಾಕಾಲ ತನ್ನ ಸಹಕಾರ ನೀಡುವದಾಗಿ ಅವರು ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕುಶಾಲನಗರಕ್ಕೆ ಸರಕಾರದಿಂದ ಹಲವು ಯೋಜನೆಗಳು ಮಂಜೂರಾಗಿದ್ದು ಈ ಯೋಜನೆಗಳು ಕಾರ್ಯಗತಗೊಳಿಸುವ ಸಂದರ್ಭ ಉತ್ತಮ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿಗಳನ್ನು ನಡೆಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸರಕಾರದಿಂದ ಮಂಜೂರಾಗಿರುವ ಯೋಜನೆಗಳನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕು ಎಂದು ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು. ಜಿಲ್ಲೆಗೆ ರಾಜ್ಯ ಸರಕಾರದ ಮೂಲಕ ಕಳೆದ 4 ವರ್ಷಗಳ ಅವಧಿಯಲ್ಲಿ ಒಟ್ಟು ರೂ. 129 ಕೋಟಿ ಬಿಡುಗಡೆಯಾಗಿದೆ ಎಂದು ಸಭೆಯಲ್ಲಿ ಮಾಹಿತಿ ಒದಗಿಸಿದರು.

ಕ್ರೀಡಾ ಶಾಲೆಗೆ ಗುಂಡೂರಾವ್ ಹೆಸರು

ಕೂಡಿಗೆ ಕ್ರೀಡಾಶಾಲೆಗೆ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾಯರ ಹೆಸರು ನಾಮಕರಣ ಮಾಡಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಕುಶಾಲನಗರ ಪಟ್ಟಣದ ಅಭಿವೃದ್ಧಿಗೆ ಸರಕಾರದ ಮೂಲಕ ಅನುದಾನ ಕಲ್ಪಿಸುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭ ಪ.ಪಂ. ವತಿಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಸಚಿವರು ವಿತರಿಸಿದರು. ಇಂಜಿನಿಯರಿಂಗ್ ವಿದ್ಯಾರ್ಥಿ ಕಿಶೋರ್ ಎಂಬವರಿಗೆ ಲ್ಯಾಪ್‍ಟಾಪ್, ಶ್ರೀಕೃಷ್ಣ ಸ್ವಸಹಾಯ ಸಂಘಕ್ಕೆ ರೂ. 10 ಸಾವಿರ ಸಹಾಯಧನ, ಅಂಗಾಂಗ ಜೋಡಣೆಗೆ ಸಹಾಯಧನವಾಗಿ ರೂ. 60 ಸಾವಿರವನ್ನು ಸ್ಥಳೀಯ ಉದ್ಯಮಿ ಶ್ರೀನಾಥ್‍ಗೆ ನೀಡಲಾಯಿತು.

ಜಿಲ್ಲಾಧಿಕಾರಿ ಆರ್.ವಿ. ಡಿಸೋಜ, ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಟಿ.ಆರ್. ಶರವಣ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಪಿ.ಎಂ. ಲತೀಫ್, ಸುನಿತಾ, ಕುಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಹೆಚ್.ಕೆ. ಪಾರ್ವತಿ, ಹೆಚ್.ಡಿ. ಚಂದ್ರು, ಕೆ.ಆರ್. ರೇಣುಕಾ, ಸುರಯ್ಯಭಾನು, ಕೆ. ಪ್ರಮೋದ್ ಮುತ್ತಪ್ಪ, ಹೆಚ್.ಜೆ. ಕರಿಯಪ್ಪ, ಕವಿತಾ ಮಂಜು, ರಶ್ಮಿ, ಹೆಚ್.ಎಂ. ಮಧುಸೂದನ್, ಲಲಿತಾ, ಫಜಲುಲ್ಲಾ, ಹೆಚ್.ಕೆ. ಶಿವಶಂಕರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಎಸ್.ಎಚ್. ಪ್ರಭು ಇದ್ದರು.