ಕುಶಾಲನಗರ, ಜೂ. 23: ಕುಶಾಲನಗರದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಡಿಪೋ ಸ್ಥಾಪನೆಗೆ ಜಿಲ್ಲಾಡಳಿತದ ಮೂಲಕ ತಯಾರಿಗಳು ಮುಂದುವರೆದಿದೆ. ಕುಶಾಲನಗರದ ಸಮೀಪ ಮಡಿಕೇರಿ ರಸ್ತೆಯ ಬಸವನಹಳ್ಳಿ ಬಳಿ 4 ಎಕರೆ ಜಾಗದಲ್ಲಿ ಡಿಪೋ ಸ್ಥಾಪನೆಗೆ ಈಗಾಗಲೇ ಸ್ಥಳ ಪರಿಶೀಲನೆ ನಡೆದಿದ್ದು ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆಯಿಂದ ಪತ್ರ ವ್ಯವಹಾರ ನಡೆದಿರುವದಾಗಿ ಕಂದಾಯ ಅಧಿಕಾರಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

4 ಎಕರೆ ಪ್ರದೇಶದ ಸರಕಾರಿ ದರದನ್ವಯ ಹಣ ಪಾವತಿಸಲು ಜಿಲ್ಲಾಡಳಿತ ನಿಗಮಕ್ಕೆ ಸೂಚನೆ ನೀಡಿದ್ದು ಈ ನಿಟ್ಟಿನಲ್ಲಿ ಚರ್ಚೆಗಳು ಮುಂದುವರೆದಿದೆ. ಜಾಗವನ್ನು ನಿಗಮಕ್ಕೆ ನೀಡುವ ಸಂದರ್ಭ ನಿಯಮಾನುಸಾರ ಸರಕಾರಿ ದರದ ಶೇ.50 ರಷ್ಟು ಹಣ ಪಾವತಿಸಬೇಕಾದ ರಸ್ತೆ ಸಾರಿಗೆ ನಿಗಮ ಇದನ್ನು ಪಾವತಿಸಲು ಹಿಂದೇಟು ಹಾಕುತ್ತಿರುವ ಹಿನ್ನಲೆಯಲ್ಲಿ ವಿಳಂಬವಾಗಲು ಕಾರಣವಾಗಿದೆ.

ಸರಕಾರಿ ಯೋಜನೆ ಹಿನ್ನಲೆಯಲ್ಲಿ ಉಚಿತವಾಗಿ ಜಾಗ ನೀಡಬೇಕೆನ್ನುವ ಬೇಡಿಕೆಯನ್ನು ನಿಗಮ ಜಿಲ್ಲಾಡಳಿತದ ಮುಂದಿಟ್ಟಿದ್ದು ಸದ್ಯದಲ್ಲಿಯೇ ನೂತನ ಬಸ್ ಡಿಪೋ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಕುಶಾಲನಗರ ಕಂದಾಯ ನಿರೀಕ್ಷಕ ನಂದಕುಮಾರ್ ತಿಳಿಸಿದ್ದಾರೆ. ಕುಶಾಲನಗರ ಪಟ್ಟಣಕ್ಕೆ ನೂತನವಾಗಿ ಅನುಮೋದನೆಗೊಂಡಿರುವ ಉಪನೋಂದಣಾಧಿಕಾರಿ ಕಚೇರಿ ತೆರೆಯಲು ಈಗಾಗಲೇ ಖಾಸಗಿ ಕಟ್ಟಡಗಳನ್ನು ಪರಿಶೀಲನೆ ನಡೆಸಲಾಗಿದ್ದು, ಕೆಲವೇ ದಿನಗಳಲ್ಲಿ ಕಚೇರಿ ಪ್ರಾರಂಭಗೊಳ್ಳಲಿದೆ ಎಂದು ನಂದಕುಮಾರ್ ಹೇಳಿದ್ದಾರೆ.

ನಾಡಕಚೇರಿ ಆವರಣದಲ್ಲಿ ನೂತನ ಸರಕಾರಿ ಕಛೇರಿಗಳ ಸಮುಚ್ಛಯ ನಿರ್ಮಿಸಲು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವದು ಎಂದು ತಿಳಿಸಿರುವ ಅವರು, ವಿಶೇಷ ತಹಶೀಲ್ದಾರ್ ನೇಮಕ ಆದೇಶ ಹೊರಡಿಸಲಾಗಿದ್ದು ಸದ್ಯದಲ್ಲಿಯೇ ನಾಡಕಚೇರಿ ಮೇಲ್ದರ್ಜೆಗೇರಲಿದೆ ಎಂದು ಮಾಹಿತಿ ನೀಡಿದ್ದಾರೆ.