ಮಡಿಕೇರಿ, ಜೂ. 24: ಕೊಡಗಿನಲ್ಲಿ ಮಿನಿ ಫುಡ್‍ಪಾರ್ಕ್ ಸ್ಥಾಪನೆಗೆ ಪ್ರಯತ್ನ ನಡೆಸುವದಾಗಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಉಪಕುಲಪತಿ ಸದ್ಯದಲ್ಲಿ ಕೇಂದ್ರ ವಿ.ವಿ. ಉಪಕುಲಪತಿಗಳಾಗಿ ದೆಹಲಿಗೆ ವರ್ಗಾವಣೆಯಾಗುತ್ತಿರುವ ಡಾ. ಸಿ. ವಾಸುದೇವಪ್ಪ ಅವರು ಹೇಳಿದರು.ಮಡಿಕೇರಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡಿದರು. ಆಹಾರ ದಾಸ್ತಾನು ಇಂದಿನ ಅಗತ್ಯತೆಯಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ 500 ಮಿನಿಫುಡ್ ಪಾರ್ಕ್ ಸ್ಥಾಪನೆಯ ಚಿಂತನೆ ಇದೆ. ತಾವು ದೆಹಲಿಗೆ ತೆರಳಿದ ಬಳಿಕ ಮಡಿಕೇರಿ ಯಲ್ಲಿ ಒಂದು ಮಿನಿಫುಡ್ ಪಾರ್ಕ್ ಸ್ಥಾಪನೆಗೆ ಪ್ರಯತ್ನ ನಡೆಸಲಿರುವದಾಗಿ ಅವರು ತಿಳಿಸಿದರು.

ಮಡಿಕೇರಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರವನ್ನು ಉತ್ತಮ ತೋಟಗಾರಿಕಾ ತಾಣವಾಗಿ ರೂಪಿತಗೊಳಿಸುವ ಕನಸು ನನಸಾಗಿದೆ ಎಂದ ಅವರು, ಈ ಕೇಂದ್ರ ರೈತರಿಗೆ ಪ್ರಯೋಜನಕಾರಿಯಾಗಬೇಕು. ಹೂ, ತರಕಾರಿಗಳಿಗೆ ಇಲ್ಲಿ ಬೇಡಿಕೆ ಉತ್ತಮವಾಗಿದೆ. ಪರಿಸರ ಪೂರಕ ಪ್ರವಾಸೋಧ್ಯಮಕ್ಕೆ ಒತ್ತು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ಕೃಷಿಯಿಂದಲೂ ಲಾಭ ಪಡೆಯಬಹುದು ಎಂಬ ಸಂದೇಶ ಈ ಕೇಂದ್ರದ ಮೂಲಕ ರೈತರಿಗೆ ತಲಪುವಂತಾಗಬೇಕು. ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಇಲ್ಲಿ ಕೈಗಾರಿಕೆಗಳ ಸ್ಥಾಪನೆ ಸಾಧ್ಯವಿಲ್ಲ. ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ರೈತರಿಗೆ ಮಾಹಿತಿ ನೀಡಬೇಕು. ಇದರೊಂದಿಗೆ ಸರಕಾರದ ಸೌಲಭ್ಯಗಳ ಕುರಿತೂ ಮಾಹಿತಿ ಒದಗಿಸಬೇಕು ಎಂದರು.

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಅನಿಸಿಕೆ ವ್ಯಕ್ತಪಡಿಸಿ ಕೊಡಗಿನಲ್ಲಿ ಬೆಳೆಯುವ ಯಾವದೇ ಬೆಳೆಗೆ ಬೇಡಿಕೆ ಇದೆ. ರೈತರು ತಮ್ಮ ಜಾಗದಲ್ಲಿ ಮಿಶ್ರಬೆಳೆ ಬೆಳೆದರೆ ಇತರ ಉದ್ಯೋಗದಲ್ಲಿ ಪಡೆಯುವ ವೇತನಕ್ಕಿಂತ ಹೆಚ್ಚು ಹಣ ಗಳಿಸಬಹುದು. ಪರಿಸರದ ನಡುವೆ ಕೆಲಸ ಮಾಡುವದರೊಂದಿಗೆ ಸುಖೀ ಜೀವನ ನಡೆಸಬಹುದು. ನಗರ ಪ್ರದೇಶಕ್ಕೆ ಹೋಲಿಸಿದರೆ ಕೊಡಗಿನ ಜನ ಜೀವಂತವಾಗಿಯೇ ಸ್ವರ್ಗದಲ್ಲಿದ್ದಾರೆ ಎಂದು ನುಡಿದರು. ರೈತರಿಗೂ ಅನುಕೂಲವಾಗುವಂತೆ ಪರಿಸರಕ್ಕೂ ಧಕ್ಕೆಯಾಗದಂತೆ ಯೋಜನೆಗಳು ರೂಪಿತವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲ ಯದ ವಿಶ್ರಾಂತ ಉಪಕುಲಪತಿ, ಡಾ. ಪಿ.ಜಿ. ಚಂಗಪ್ಪ ಅವರು ಕೃಷಿಗೆ ಒತ್ತು ನೀಡಲು ಕರೆ ನೀಡಿದರು. ಈ ಹಿಂದೆ ಮಡಿಕೇರಿ ಖಾಸಗಿ ಬಸ್ ನಿಲ್ದಾಣಕ್ಕೆ ಕೃಷಿ ವಿ.ವಿ.ಯ ಜಾಗ ನೀಡಿದ್ದು, ಇದಕ್ಕೆ ಬದಲಿ ಜಾಗ ನೀಡುವ ಭರವಸೆ ದೊರೆತಿತ್ತು. ಇದು ಇನ್ನೂ ಕಾರ್ಯಗತವಾಗಿಲ್ಲ. ಇದನ್ನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸಂಶೋಧನೆಗೆ ಜಾಗ ಅಗತ್ಯವಿದೆ ಎಂದು ಹೇಳಿದರು.

ವಿ.ವಿ.ಯ ವಿಸ್ತರಣಾಧಿಕಾರಿ ಡಾ. ಟಿ.ಎಚ್. ಗೌಡ ಮಾತನಾಡಿ, ಕೃಷಿ, ತೋಟಗಾರಿಕಾ ಬೆಳೆಗಳ ಉತ್ತೇಜನಕ್ಕೆ ಪೊನ್ನಂಪೇಟೆಯಲ್ಲಿದ್ದ ವಿಸ್ತರಣಾ ಘಟಕವನ್ನು ಮಡಿಕೇರಿಗೆ ಸ್ಥಳಾಂತರಗೊಳಿಸಲಾಗಿದೆ ಎಂದರು.

ಅತಿಥಿಗಳಾಗಿದ್ದ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಅವರು ಮಾತನಾಡಿ, 81 ರಾಷ್ಟ್ರಗಳು ಕಾಫಿ ಬೆಳೆಯುತ್ತಿದ್ದು, ಈ ಪೈಕಿ ಭಾರತದಲ್ಲಿ ಮಾತ್ರ ನೈಸರ್ಗಿಕ ಅರಣ್ಯದ ನಡುವೆ ಕಾಫಿ ಬೆಳೆಯಲಾಗುತ್ತಿದ್ದು, ಭಾರತದ ಕಾಫಿಗೆ ಬೇಡಿಕೆ ಇದೆ ಎಂದರು. ಭತ್ತದ ಕೃಷಿ ಕೈಬಿಡದಂತೆ ಮನವಿ ಮಾಡಿದ ಅವರು, ಕಟಾವಿನ ಬಳಿಕ ತರಕಾರಿ ಬೆಳೆದಲ್ಲಿ ಉತ್ತಮ ಎಂದು ಸಲಹೆಯಿತ್ತರು.

ವಿ.ವಿ.ಯ ಕುಲ ಸಚಿವ ನಾರಾಯಣ ಸ್ವಾಮಿ ಅವರು ಮಿಶ್ರ ಬೆಳೆ ಈಗಿನ ಅಗತ್ಯತೆಯಾಗಿದೆ. ಇಲ್ಲಿನ ವಾತಾವರಣಕ್ಕೆ ಅಗತ್ಯ ಸಂಶೋಧನೆ ನಡೆಸಲಾಗುತ್ತಿದೆ ಎಂದರು.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ, ಸಂಶೋಧನಾ ಕೇಂದ್ರದ ಮೂಲಕ ಹೊಸ ಹೊಸ ತಳಿಗಳನ್ನು ರೈತರಿಗೆ ಪರಿಚಯಿಸುವಂತೆ ಹೇಳಿದರು.

ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎಂ.ಕೆ. ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಶೋಧನಾ ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರವಿತ್ತರು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಕೃಷಿ ವಿ.ವಿ.ಯ ಮೂಡಿಗೆರೆಯ ಸಹ ಸಂಶೋಧನಾ ನಿರ್ದೇಶಕ ಡಾ. ಎಂ. ಶಿವಪ್ರಸಾದ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ, ಮಾಜಿ ಡೀನ್ ಡಾ. ಎನ್.ಎ. ಪ್ರಕಾಶ್, ಡಾ. ವಾಸುದೇವ್, ಎನ್.ಎಂ. ಪೂಣಚ್ಚ, ರೊಟೇರಿಯನ್ ಸದಾಶಿವರಾವ್, ಪ್ರಗತಿಪರ ರೈತ ತಿಮ್ಮಯ್ಯ ಸೇರಿದಂತೆ ಪೊನ್ನಂಪೇಟೆ ಅರಣ್ಯ ವಿದ್ಯಾಲಯದ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳು, ಕೃಷಿ ಸಂಶೋಧನಾ ಕೇಂದ್ರ ವಿಸ್ತರಣಾ ಘಟಕದ ಸಿಬ್ಬಂದಿಗಳು ಹಾಜರಿದ್ದರು.

ಈ ಮುನ್ನ ಪಾಲಿಹೌಸ್, ಸಭಾಂಗಣ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಶಾಸಕರು, ಅತಿಥಿಗಳು ಉದ್ಘಾಟಿಸಿದರು. ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿ ಡೀನ್ ಡಾ. ಸಿ.ಜಿ. ಕುಶಾಲಪ್ಪ ಸ್ವಾಗತಿಸಿದರು. ಡಾ. ದೇವಗಿರಿ ಹೆಗಡೆ ನಿರೂಪಿಸಿ, ಫಾರ್ಮ್ ಸೂಪರಿಂಟೆಂಡೆಂಟ್ ಸತೀಶ್ ವಂದಿಸಿದರು.