ಗೋಣಿಕೊಪ್ಪಲು, ಜೂ. 23 : ಚಿಕಾಗೋ ಸ್ಟೇಟ್ ಸ್ಟ್ರೀಟ್ ನಲ್ಲಿ ಜುಲೈ 1 ರಿಂದ 4 ರ ವರೆಗೆ ಲಯನ್ಸ್ ಶತಮಾನೋತ್ಸವ ಅಂತರ್ರಾಷ್ಟ್ರೀಯ ಸಮಾವೇಶದಲ್ಲಿ ಮೂರ್ನಾಡು ಲಯನ್ಸ್ ಕ್ಲಬ್‍ನ ಬಡುವಂಡ ಅರುಣ್ ಅಪ್ಪಚ್ಚು ಹಾಗೂ ಗೋಣಿಕೊಪ್ಪಲು ಲಯನ್ಸ್ ಸಂಸ್ಥೆಯ ಎಂ.ಎಂ.ಗಣಪತಿ( ಲವ) ಪಾಲ್ಗೊಳ್ಳಲಿದ್ದಾರೆ.

ಭಾರತದ ಮೂವರು ಈವರೆಗೆ ಅಂತರ್ರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದು, ನವದೆಹಲಿಯ ಡಾ. ನರೇಶ್ ಅಗರ್‍ವಾಲ್ 2017-18 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವದಾಗಿ ಅರುಣ್ ಅಪ್ಪಚ್ಚು ತಿಳಿಸಿದ್ದಾರೆ.

ಗೋಣಿಕೊಪ್ಪಲು ಪ್ರೆಸ್‍ಕ್ಲಬ್‍ನಲ್ಲಿ ಮಾಹಿತಿ ನೀಡಿದ ಅವರು, ಈವರೆಗೆ ಜರ್ಮನಿಯ ಹ್ಯಾಂಬರ್ಗ್, ಕೆನಡಾದ ಟೊರೆಂಟೋ, ಜಪಾನ್‍ನ ವುಕವೋಕಾ, ನೇಪಾಳ ಹಾಗೂ ಶ್ರೀಲಂಕಾ ಲಯನ್ಸ್ ಸಮಾವೇಶದಲ್ಲಿ ತಾವು ಪಾಲ್ಗೊಂಡಿದ್ದು, ಗಣಪತಿ ಅವರು ಜಪಾನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಜಪಾನ್‍ನಲ್ಲಿ ಕಳೆದ ಸಾಲಿನಲ್ಲಿ ಒಟ್ಟು 6 ಮಂದಿ ಜಿಲ್ಲೆಯಿಂದ ಪಾಲ್ಗೊಂಡಿದ್ದು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಿಡಿದು ಮುನ್ನಡೆಯುವ ಭಾಗ್ಯ ನಮ್ಮದಾಗಿತ್ತು. ಈ ಬಾರಿಯೂ ಚಿಕಾಗೋದಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ತಾವು ಸುಮಾರು 225 ದೇಶಗಳ ನಡುವಿನ ಪಥಸಂಚಲನದಲ್ಲಿ ಪಾಲ್ಗೊಳ್ಳಲಿರುವದಾಗಿ ಹೇಳಿದರು.

1917ರಲ್ಲಿ ಮೆಲ್ವಿನ್ ಜೋನ್ಸ್ ಲಯನ್ಸ್ ಸಂಸ್ಥೆಯನ್ನು ಸ್ಥಾಪಿಸಿದ್ದು, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 47,292 ಲಯನ್ಸ್ ಕ್ಲಬ್‍ಗಳಿವೆ. ಒಟ್ಟು 14,45,591 ಸದಸ್ಯರಿದ್ದಾರೆ ಎಂದು ಎಂ.ಎಂ.ಗಣಪತಿ ಮಾಹಿತಿ ನೀಡಿದರು. ಲಯನ್ಸ್ ಸಂಸ್ಥೆಯ ಮೂಲಕ ಸ್ವಚ್ಛಕೊಡಗು ಆಂದೋಲನಾ ಆರಂಭಿಸಲಾಗಿದ್ದು, ಕ್ಲೀನ್ ಕೂರ್ಗ್ ಸಂಸ್ಥೆಯ ಮೂಲಕವೂ ಬೈಸಿಕಲ್‍ನಲ್ಲಿ ಮನೆ ಮನೆಗೆ, ಶಾಲೆಗಳಿಗೆ ತೆರಳಿ ಕಸ ವಿಂಗಡನೆ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸ್ವಚ್ಛಕೊಡಗನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಎಲ್ಲ ಸಂಘ ಸಂಸ್ಥೆಗಳು ತಮ್ಮೊಂದಿಗೆ ಕೈಜೋಡಿಸಬಹುದು ಎಂದು ಅರುಣ್ ಅಪ್ಪಚ್ಚು ಹೇಳಿದರು.

ರಸ್ತೆ ಬದಿಯ ಬೇಲಿಯನ್ನು ಮಾಲೀಕರು ವರ್ಷಂಪ್ರತಿ ನಿರ್ವಹಣೆ ಮಾಡುವ ಅವಶ್ಯಕತೆ ಇದೆ. ಸುಗಮ ವಾಹನ ಓಡಾಟಕ್ಕೆ, ಮಳೆ ನೀರು ಹರಿದು ಹೋಗುವ ನಿಟ್ಟಿನಲ್ಲಿ ತೋಟ ಮಾಲೀಕರು ಸಹಕರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.