ಮಡಿಕೇರಿ, ಜೂ. 23: ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ಚಿನ್ನಾಭರಣ ಕಳವು ಮಾಡಿ ಮಣ್ಣಿನಡಿ ಗುಂಡಿಯಲ್ಲಿ ಹೂತಿಟ್ಟಿದ್ದ ಕೆಲಸಗಾರ್ತಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ನಾಪೋಕ್ಲುವಿನಲ್ಲಿ ಈ ಘಟನೆ ನಡೆದಿದೆ.

ನಾಪೋಕ್ಲುವಿನ ಹಲವಾರು ಮನೆಗಳಲ್ಲಿ ಮನೆ ಕೆಲಸ ನಿರ್ವಹಿಸುತ್ತಿರುವ ಮೂಲತಃ ಕೊಳ್ಳೆಗಾಲ ನಿವಾಸಿಯಾಗಿರುವ ಪಾರ್ವತಮ್ಮ ಎಂಬಾಕೆ ಬಲ್ಲಂಡ ಮುತ್ತಣ್ಣ ಎಂಬವರ ಮನೆಯಲ್ಲಿ ಕೂಡ ಕೆಲಸ ನಿರ್ವಹಿಸುತ್ತಿದ್ದಳು. ಕಳೆದ ಮೇ 17ರಂದು ಮುತ್ತಣ್ಣ ಕುಟುಂಬ ಮದುವೆ ಸಮಾರಂಭಕ್ಕೆ ತೆರಳಿದ್ದ ಸಂದರ್ಭ ಮನೆಯಲ್ಲಿದ್ದ ರೂ. 4.50 ಲಕ್ಷ ಮೊತ್ತದ ಚಿನ್ನಾಭರಣ ಕಳುವಾಗಿತ್ತು. ಈ ಸಂದರ್ಭ ಮುತ್ತಣ್ಣ ಅವರು ಪಾರ್ವತಮ್ಮ ಅವರಲ್ಲಿ ವಿಚಾರಿಸಿದಾಗ ಪಾರ್ವತಮ್ಮ ಮುತ್ತಣ್ಣ ದಂಪತಿಯರಿಗೆ ಹಿಗ್ಗಾಮುಗ್ಗ ಬೈದಿದ್ದರು. ಈ ಸಂದರ್ಭ ಮುತ್ತಣ್ಣ ಅವರು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ಕೈಗೊಂಡ ನಾಪೋಕ್ಲು ಠಾಣಾಧಿಕಾರಿ ವೆಂಕಟೇಶ್ ಹಾಗೂ ಸಿಬ್ಬಂದಿಗಳು

(ಮೊದಲ ಪುಟದಿಂದ) ಸಂಶಯದ ಮೇರೆಗೆ ನಿನ್ನೆ ದಿನ ಪಾರ್ವತಮ್ಮ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರಾದರೂ ಪಾರ್ವತಮ್ಮ ಬಾಯಿ ಬಿಡಲಿಲ್ಲ. ನಂತರ ಕೊನೆಯ ಪ್ರಯತ್ನವಾಗಿ ಮಡಿಕೇರಿಗೆ ಕರೆ ತಂದು ‘ಸ್ಪೆಷಲ್ ಟ್ರೀಟ್‍ಮೆಂಟ್’ ನೀಡಿದಾಗ ಸತ್ಯಾಂಶ ಹೊರ ಬಂದಿದೆ. ತಾನು ಚಿನ್ನಾಭರಣ ಕದ್ದಿರುವದನ್ನು ಒಪ್ಪಿಕೊಂಡ ಮಹಿಳೆ ಆಭರಣವನ್ನು ತಾನು ವಾಸವಿರುವ ಮನೆಯ ಸನಿಹದಲ್ಲಿ ಸುಮಾರು 4 ಅಡಿ ಗುಂಡಿ ತೆಗೆದು ಅದರಲ್ಲಿ ಹೂತಿಟ್ಟು ಅದರ ಮೇಲೆ ಕಲ್ಲನಿಟ್ಟು, ಕಲ್ಲಿನ ಮೇಲೆ ತ್ಯಾಜ್ಯಗಳನ್ನು ಇರಿಸಿ ಬೆಂಕಿ ಹಚ್ಚಿರುವ ಸ್ಥಳವನ್ನು ತೋರಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಆಭರಣವನ್ನು ವಶಪಡಿಸಿ ಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಡಿವೈಎಸ್‍ಪಿ ನಾಗಪ್ಪ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್, ನಾಪೋಕ್ಲು ಠಾಣಾಧಿಕಾರಿ ವೆಂಕಟೇಶ್, ಸಹಾಯಕ ಠಾಣಾಧಿಕಾರಿ ಶ್ರೀಧರ್, ಸಿಬ್ಬಂದಿಗಳಾದ ಮಂಜುನಾಥ್, ತೀರ್ಥಕುಮಾರ್, ನವೀನ್, ಕಾಶಿಯಪ್ಪ, ಇಬ್ರಾಹಿಂ, ಮಹೇಶ್, ಶೇಷಮ್ಮ, ಶೋಭಾ ಪಾಲ್ಗೊಂಡಿದ್ದರು.

- ಸಂತೋಷ್