ಮಡಿಕೇರಿ, ಜೂ. 24: ದಶಕದ ಹಿಂದಿನ ಯೋಜನೆಯಾದಂತಹ ಜಿ.ಎಸ್.ಟಿ. ಉooಜs ಚಿಟಿಜ Seಡಿviಛಿe ಖಿಚಿx ಸರಕು ಹಾಗೂ ಸೇವಾ ತೆರಿಗೆ ಜುಲೈ ಒಂದರಿಂದ ದೇಶದಲ್ಲಿ ಜಾರಿಯಾಗುತ್ತಿದೆ.

ಮೂಲತಃ ಕಾಂಗ್ರೆಸ್ ಸರಕಾರದ ಕನಸಾಗಿದ್ದರೂ, ಹಲವು ಒತ್ತಡಗಳಿಂದ ಆ ಸರಕಾರ ಹಿಂದೆ ಈ ಯೋಜನೆ ಜಾರಿಗೆ ಹಿಂದೇಟು ಹಾಕಿತ್ತು. ನರೇಂದ್ರ ಮೋದಿ ಹಾಗೂ ಅರುಣ್ ಜೇಟ್ಲಿ ಅವರುಗಳ ದೂರದೃಷ್ಟಿತ್ವದಿಂದ ಈ ಯೋಜನೆಗೆ ಮತ್ತೆ ಜೀವ ಬಂದು ಕಳೆದ ವರ್ಷದಿಂದಲೇ ತಯಾರಿ ನಡೆದಿತ್ತು. ವಾಣಿಜ್ಯ ತೆರಿಗೆ, ಸುಂಕ ಇಲಾಖೆ, ಸೇವಾ ತೆರಿಗೆ ಹೀಗೆ ಹತ್ತು ಹಲವು ಇಲಾಖೆಗಳನ್ನು ಒಂದೇ ಸೂರಿನಡಿ ತರಲು ನೂರಾರು ಅಧಿಕಾರಿಗಳ ತಂಡ ಟೊಂಕ ಕಟ್ಟಿ ಶ್ರಮಿಸಿದೆ. ದೇಶದೆಲ್ಲೆಡೆ ಏಕ ರೀತಿಯ ತೆರಿಗೆಯಿಂದ ದೇಶದ ಬೊಕ್ಕಸಕ್ಕೆ ಸಹಸ್ರಾರು ಕೋಟಿ ಆದಾಯ ಬರಲಿದೆ ಎಂಬ ನಿರೀಕ್ಷೆ ಒಂದೆಡೆಯಾದರೆ ಹೊಸ ವ್ಯವಸ್ಥೆಯಲ್ಲಿ ತೆರಿಗೆ ಕಳ್ಳರು ಯಾವದೇ ಕಾರಣದಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂಬ ಭರವಸೆ ಸರಕಾರದ್ದು.

ವಾರ್ಷಿಕ 20 ಲಕ್ಷ ರೂಪಾಯಿ ಅಥವಾ ಮೇಲ್ಪಟ್ಟ ವ್ಯವಹಾರ ನಡೆಸುವವರು ಕಡ್ಡಾಯ ಜಿ.ಎಸ್.ಟಿ. ನೋಂದಾವಣೆ ಮಾಡಿಸಬೇಕೆಂದು ಸರಕಾರ ಆದೇಶಿಸಿದೆ. ಅದಕ್ಕಾಗಿ ಜಿಲ್ಲೆಯ ತೆರಿಗೆ ಇಲಾಖೆ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೆ ವ್ಯಾಟ್ ಅಡಿಯಲ್ಲಿ ನೋಂದಾಯಿಸಿದ್ದ ವಾಣಿಜ್ಯೋದ್ಯಮಿಗಳು ಕಡ್ಡಾಯವಾಗಿ ಅದನ್ನು ಜಿಎಸ್‍ಟಿಗೆ ವಲಸೆ ಮಾಡಬೇಕಿದೆ.

ಇದುವರೆಗೂ ವ್ಯಾಟ್‍ನಲ್ಲಿ ನೋಂದಾಯಿಸದೆ ಇದ್ದವರು ಹೊಸದಾಗಿ ನೋಂದಾಯಿಸಿಕೊಳ್ಳಲು ತಾ. 25 ರಿಂದ ಆನ್‍ಲೈನ್ ಕಾರ್ಯಾರಂಭ ಮಾಡಲಿದೆ.

ತಿಂಗಳ ಆರಂಭದಿಂದ ಅಂತ್ಯದವರೆಗಿನ ವಹಿವಾಟನ್ನು ಮುಂದಿನ ತಿಂಗಳ ತಾ. 10, 15, 20ರ ಒಳಗೆ ಬೇರೆ ಬೇರೆ ವಿವರಗಳ ಮೂಲಕ ಸಲ್ಲಿಸಬೇಕಿದೆ. ತಾ. 10ರ ಒಳಗೆ ಮಾರಾಟದ ವಿವರ, ತಾ. 15ರ ಒಳಗೆ ಖರೀದಿಯ ವಿವರಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕು. ನಮ್ಮ ಸಲ್ಲಿಕೆಯ ಆಧಾರದಲ್ಲಿ ಇಲಾಖೆಯ ಕಂಪ್ಯೂಟರ್‍ನಲ್ಲೇ ಎಷ್ಟು ತೆರಿಗೆ ಕಟ್ಟಬೇಕು ಎಂಬ ವಿವರಣೆ ಆನ್‍ಲೈನ್‍ನಲ್ಲಿ ಬರುತ್ತದೆ. ಯಾವದೇ ವ್ಯತ್ಯಾಸಗಳಿದ್ದಲ್ಲಿ ಕೂಡಲೇ ಸರಿಪಡಿಸಿಕೊಳ್ಳಬೇಕು. ತಾ. 20ರ ಒಳಗೆ ನಮೂದಿಸಿದ ತೆರಿಗೆಯನ್ನು ಆನ್‍ಲೈನ್ ಮೂಲಕ ಪಾವತಿಸಬೇಕು.

(ಮೊದಲ ಪುಟದಿಂದ) ತೆರಿಗೆ ಕಟ್ಟಲು ವಿಳಂಬವಾದಲ್ಲಿ ದಿನವೊಂದಕ್ಕೆ ರೂ. 100 ರಂತೆ ದಂಡ ಹಾಗೂ ಗರಿಷ್ಠ 5000 ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಜುಲೈ 1 ರಿಂದ ಜಿಎಸ್‍ಟಿ ಜಾರಿಯಾದರೂ ಜೂನ್ ತಿಂಗಳಿನ ಲೆಕ್ಕವನ್ನು ಹಿಂದಿನ ವ್ಯಾಟ್ ಮಾದರಿಯಲ್ಲೇ ಪಾವತಿಸಲು ಅವಕಾಶವಿದೆ. ಜುಲೈ ತಿಂಗಳ ಲೆಕ್ಕ ವಿವರಗಳನ್ನು ಆಗಸ್ಟ್ ತಿಂಗಳ ಬದಲು ಸೆಪ್ಟೆಂಬರ್ 10ರ ಒಳಗೆ ಜಿಎಸ್‍ಟಿ ವ್ಯವಸ್ಥೆಯಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ ತಿಂಗಳ ಲೆಕ್ಕವನ್ನೂ ಕೂಡಾ ಸೆಪ್ಟೆಂಬರ್‍ನಲ್ಲೇ ಕಟ್ಟಬೇಕೆಂದು ಸರಕಾರ ತಿಳಿಸಿದೆ.

20 ಲಕ್ಷ ಅಥವಾ ಕಡಿಮೆ ವ್ಯವಹಾರ ಮಾಡುವ ಹಲವು ಉದ್ಯಮಿಗಳೂ ಜಿಎಸ್‍ಟಿ ಯೋಜನೆ ಅನುಸರಿಸುವ ಅನಿವಾರ್ಯತೆ ಇದೆ.

ಕಾರಣ ವ್ಯಾಪಾರಿಗಳಿಗೆ ಸರಕುಗಳನ್ನು ಸರಬರಾಜು ಮಾಡುವ ಸಂಸ್ಥೆಗಳು, ಜಿಎಸ್‍ಟಿ ನೋಂದಾವಣೆ ಆಗಿದ್ದ ಸಂಸ್ಥೆಗಳಿಗೆ ಮಾತ್ರ ವಸ್ತುಗಳನ್ನು ಕಳುಹಿಸುತ್ತಾರೆ. ಹಾಗಾಗಿ ಮಧ್ಯಮ ವರ್ಗದ ವ್ಯಾಪಾರಿಗಳು ಕೂಡಾ ಜಿಎಸ್‍ಟಿ ವ್ಯಾಪ್ತಿಗೆ ಬರಬೇಕಾದ ಅನಿವಾರ್ಯತೆ ಬರಬಹುದು.

ಯಾವ ವಸ್ತುವಿಗೆ ಎಷ್ಟು ತೆರಿಗೆ ವಿಧಿಸಬೇಕು ಎಂಬ ಬಗ್ಗೆ ಕೇಂದ್ರ ಸರಕಾರ ಹಲವಷ್ಟು ಸಭೆಗಳನ್ನು ನಡೆಸಿದ್ದು, ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಿದ್ದೂ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಯಾದ ಬಳಿಕ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಬಗ್ಗೆ ಕೇಂದ್ರದ ಅರ್ಥ ಸಚಿವ ಅರುಣ್ ಜೇಟ್ಲಿ ಸುಳಿವು ನೀಡಿದ್ದಾರೆ.

75 ಲಕ್ಷ ವಹಿವಾಟು ಘೋಷಣೆ

ಪ್ರತಿಯೊಂದು ಸಣ್ಣ ಪುಟ್ಟ ವ್ಯಾಪಾರದ ಲೆಕ್ಕಪತ್ರ ಇಟ್ಟು ವರದಿ ಸಲ್ಲಿಸಲು ಕಷ್ಟವಾಗುವದಾದರೆ ಸ್ವಯಂ ಘೋಷಣೆಗೂ ಅವಕಾಶವಿದೆ. ಆದರೆ ಕನಿಷ್ಟ ರೂ. 75 ಲಕ್ಷ ವಾರ್ಷಿಕ ವಹಿವಾಟಿಗೆ ವಿಧಿಸಬಹುದಾದ ತೆರಿಗೆಯನ್ನು (ಇನ್ನೂ ನಿಗದಿಯಾಗಿಲ್ಲ) ಅಂತಹ ವ್ಯಾಪಾರಿ ಪಾವತಿಸಬೇಕಿದೆ.

ವಿನಾಯಿತಿ ಇಲ್ಲ

ಹೊಸ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ವ್ಯಾಪಾರಸ್ಥರು ಇನ್ನೂ ಕೂಡ ಈ ಬಗ್ಗೆ ಮೌನವಾಗಿದ್ದರೆ, ಸರಕಾರ ಕ್ರಮಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದೆ. ವ್ಯಾಪಾರಸ್ಥರು ಪಾವತಿಸುವ ಮೊಬೈಲ್ ಬಿಲ್, ದೂರವಾಣಿ, ವಿದ್ಯುತ್, ಗ್ಯಾಸ್ ಖರೀದಿ ಹೀಗೆ ವಿವಿಧ ಮಾಹಿತಿಗಳನ್ನು ಸಂಗ್ರಹಿಸಿ ವ್ಯಾಪಾರದ ಅಂದಾಜನ್ನು ಸ್ವಯಂ ಮಾಡಿಕೊಳ್ಳುವ ಬಗ್ಗೆ ಹಾಗೂ ಅಂತಹ ವ್ಯಾಪಾರಿಗಳ ವಿರುದ್ಧ ಯಾವದೇ ಮುಲಾಜಿಲ್ಲದೆ ಕ್ರಮಕೈಗೊಳ್ಳುವ ಬಗ್ಗೆಯೂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏಕರೂಪ ಹೇಗೆ?

ಇದುವರೆಗೆ ನಮ್ಮ ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ವಿಭಿನ್ನವಾದ ಅನೇಕ ತೆರಿಗೆ ಪದ್ಧತಿಗಳಿದ್ದು, ಅಬಕಾರಿ ಸುಂಕ, ಸೇವಾ ತೆರಿಗೆ, ಸಾಗಾಟ ತೆರಿಗೆ, ಪ್ರದೇಶ ತೆರಿಗೆ, ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ ಇತ್ಯಾದಿಯೊಂದಿಗೆ ಮೌಲ್ಯವರ್ಧಿತ ತೆರಿಗೆಗಳನ್ನು ವಿಧಿಸಲಾಗುತಿತ್ತು. ಪ್ರಸಕ್ತ ಒಟ್ಟಾರೆ ದೇಶಕ್ಕೆ ಏಕರೂಪ ತೆರಿಗೆ ಪದ್ಧತಿ ಜಾರಿಯಿಂದ ಉತ್ಪಾದಕ, ವಿತರಕ, ಗ್ರಾಹಕರಿಗೆ ಈ ಕಿರಿಕಿರಿ ತಪ್ಪಲಿದ್ದು, ಒಂದೇ ರೀತಿಯಾಗಿ ಸರಳ ತೆರಿಗೆ ಪಾವತಿ ಮಾಡಿದರಾಯಿತು.

ಆರ್ಥಿಕ ಸುಧಾರಣಾ ಕ್ರಮ

ಕೇಂದ್ರ ಜಾರಿಗೊಳಿಸಲಿರುವ ಜಿ.ಎಸ್.ಟಿ. ಮೂಲ ಆಧಾರಿತ ತೆರಿಗೆ ಪದ್ಧತಿಯಿಂದ ದೈನಂದಿನ ವಹಿವಾಟು, ಲಾಭಾಂಶ, ನಗದು ಚಲಾವಣೆ, ಉತ್ಪಾದನೆಗಳ ಮೂಲ, ಬಂಡವಾಳ ಹೂಡಿಕೆ ಇತ್ಯಾದಿ ಸಮಗ್ರ ಮಾಹಿತಿ ಆಯಾ ವ್ಯವಹಾರಗಳನ್ನು ನಡೆಸುವವರಿಗೆ ನಿಖರವಾಗಿ ಲಭಿಸಲಿದೆ.

ಮುಖ್ಯವಾಗಿ ಕಾಳಸಂತೆ ವ್ಯವಹಾರ, ಮೋಸ, ವಂಚನೆ, ಸುಲಿಗೆಗಳಿಗೆ ಕಡಿವಾಣದೊಂದಿಗೆ ನೇರವಾಗಿ ದೇಶದ ಅರ್ಥವ್ಯವಸ್ಥೆಯಲ್ಲಿ ಸುಧಾರಣೆಗೆ ಪೂರಕ ಈ ಜಿ.ಎಸ್.ಟಿ. ಕಾಯ್ದೆಯಾಗಿದೆ ಎಂಬದು ಅರ್ಥ ತಜ್ಞರ ಮಾತು,.

ಎಲ್ಲವೂ ಆನ್‍ಲೈನ್

ಜಿಎಸ್‍ಟಿ ಹೊಸ ವ್ಯವಸ್ಥೆಯಲ್ಲಿ ಎಲ್ಲವೂ ಆನ್‍ಲೈನ್. ವಹಿವಾಟು ವಿವರ ಸಲ್ಲಿಕೆ ಹಾಗೂ ಹಣ ಪಾವತಿ ಮಾತ್ರವಲ್ಲ, ವಿವರದಲ್ಲಿ ವ್ಯತ್ಯಾಸವಿದ್ದಲ್ಲಿ ಇಲಾಖೆ ಆನ್‍ಲೈನ್‍ನಲ್ಲಿಯೇ ನೋಟೀಸು ನೀಡುತ್ತದೆ. ಉತ್ತರಿಸದಿದ್ದಲ್ಲಿ ಪಾವತಿಸಬೇಕಾದ ದಂಡದ ವಿವರಣೆಯನ್ನು ಆನ್‍ಲೈನ್ ಮೂಲಕ ನೀಡಲಿದ್ದು, ಅಲ್ಲಿಯೇ ಹಣ ಪಾವತಿಸಬೇಕಾಗುತ್ತದೆ. ತೀರಾ ಅನಿವಾರ್ಯವಾದರೆ ಮಾತ್ರ ಮಾಹಿತಿಗಳನ್ನು ಹಾಗೂ ದಾಖಲಾತಿಗಳನ್ನು ತರುವಂತೆ ಇಲಾಖೆ ಸೂಚಿಸುತ್ತದೆ.

ಇದರಿಂದಾಗಿ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ಕೂಡಾ ಅಧಿಕಾರಿಗಳು ವಿಶ್ಲೇಷಿಸುತ್ತಾರೆ. ವರ್ತಕರು ಎಚ್ಚೆತ್ತುಕೊಳ್ಳಬೇಕಾಗಿದೆ. ಹೊಸ ವ್ಯವಸ್ಥೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಬಿಟ್ಟು ತಮ್ಮನ್ನು ತೊಡಗಿಸಿಕೊಳ್ಳುವ ಬಗ್ಗೆ ತುರ್ತು ಕಾರ್ಯಾಲೋಚನೆ ಮಾಡಬೇಕಿದೆ. -ಜಿ. ಚಿದ್ವಿಲಾಸ್