ಮಡಿಕೇರಿ, ಜೂ. 24: ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ ಹಾಗೂ ವೀರಾಜಪೇಟೆ ವಿಭಾಗದಲ್ಲಿ ಒಂದು ತಿಂಗಳೊಳಗಾಗಿ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಚಾಲನೆ ನೀಡುವಂತೆ ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಸೀತಾರಾಂ ಅವರು ಸೂಚನೆ ನೀಡಿದ್ದು, ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಂದು ಸಚಿವರು ಅಧಿಕಾರಿಗಳ ಸಭೆ ನಡೆಸಿದರು. ತ್ಯಾಜ್ಯ ವಿಲೇವಾರಿ ಘಟಕಕ್ಕೆ ಅನುದಾನ ವಿದ್ದರೂ ಕೂಡ ಘಟಕ ಸ್ಥಾಪನೆಗೆ ಅಧಿಕಾರಿಗಳು ನಿವೇಶನ ಕೊರತೆ ಎಂಬಿತ್ಯಾದಿ ಕಾರಣಗಳಿಂದ ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರಿಂದ ಅಸಮಾಧಾನಗೊಂಡ ಸೀತಾರಾಂ ವಿನಾಕಾರಣ ಸಬೂಬು ನೀಡದೆ ಇಚ್ಛಾಶಕ್ತಿಯೊಂದಿಗೆ ತಿಂಗಳೊಳಗಾಗಿ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ನಗರೋತ್ಥಾನ ಅನುದಾನದಲ್ಲಿ ಮಡಿಕೇರಿ ವ್ಯಾಪ್ತಿಯಲ್ಲಿ ಬಹುಪಾಲು ಹಣವನ್ನು ಮನೆಗಳ ತಡೆಗೋಡೆ ನಿರ್ಮಾಣಕ್ಕೆ ಮೀಸಲಿರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಅಪ್ಪಚ್ಚುರಂಜನ್ ಇರುವ ಹಣವನ್ನೆಲ್ಲಾ ತಡೆಗೋಡೆಗೆಂದು ಮೀಸಲಿಟ್ಟರೆ ಉಳಿದ ಅಭಿವೃದ್ಧಿ ಕೆಲಸಗಳಿಗೇನು ಮಾಡುತ್ತೀರಿ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಡಿಕೇರಿ ವ್ಯಾಪ್ತಿಯ ಹಲವು ವಾರ್ಡ್‍ಗಳಲ್ಲಿ ವಾಸದ ಮನೆಗಳು ಅಪಾಯದಂಚಿನಲ್ಲಿ ಇರುವದರಿಂದ ಈ ತೀರ್ಮಾನ ಕೈಗೊಂಡಿರುವದಾಗಿ ಹೇಳಿದರು.

ತಡೆಗೋಡೆಗೆ ಅನುದಾನ ಬೇಕಿದ್ದಲ್ಲಿ ಪ್ರತ್ಯೇಕ ಪ್ರಸ್ತಾವನೆ ಯೊಂದನ್ನು ಜಿಲ್ಲಾಧಿಕಾರಿ ಮುಖಾಂತರ ಸಲ್ಲಿಸಿ, ಹಣ ಬಿಡುಗಡೆಗೆ ತಾನು ಕ್ರಮ ಮಾತ್ರ ಕೈಗೊಳ್ಳುತ್ತೇನೆ. ನಗರೋತ್ಥಾನ ಅನುದಾನವನ್ನು ರಸ್ತೆಗಳ ನಿರ್ಮಾಣಕ್ಕೆ ಬಳಕೆ ಮಾಡಿ ಎಂದು ಸಚಿವ ಸೀತಾರಾಂ ತಿಳಿಸಿದರು.

ಮಹದೇವಪೇಟೆ ಕಾಂಕ್ರೀಟ್ ರಸ್ತೆ ನಿರ್ವಹಣೆ ಇಲ್ಲದೆ ಹದಗೆಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸಭೆಯ ಗಮನ ಸೆಳೆದರು. ಅಲ್ಲದೆ ಯಾವದೇ ಕಾಮಗಾರಿಯಾದರೂ ಗುಣಮಟ್ಟ ಕಾಯ್ದುಕೊಳ್ಳುವದು ಮುಖ್ಯ. ನಿರ್ವಹಣೆಯ ಬಗ್ಗೆ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮಡಿಕೇರಿ ನಗರದಲ್ಲಿ ಮಲ್ಟಿಲೆವೆಲ್ ವಾಹನ ನಿಲುಗಡೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಸಚಿವರ ಪ್ರಶ್ನೆಗೆ ಮಾಹಿತಿ ನೀಡಿದ ನಗರಸಭೆ ಪೌರಾಯುಕೆÀ್ತ ಬಿ. ಶುಭ ಅವರು ಒಂದು ಕಾಲು ಎಕರೆ ಭೂಮಿಯನ್ನು ಗಾಂಧಿ ಮೈದಾನದ ಬಳಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಜಾಗದಲ್ಲಿ ನಾಲ್ಕು ಮಹಡಿಯ ಮಲ್ಟಿಲೆವೆಲ್ ವಾಹನ ನಿಲುಗಡೆ ನಿರ್ಮಾಣ ಮಾಡಿ ಒಂದು ಸಾವಿರ ಕಾರುಗಳು ನಿಲುಗಡೆ ಮಾಡಬಹುದು ಎಂದು ಹೇಳಿದರು.

ನಗರೋತ್ಥಾನ ಮೂರನೇ ಹಂತದಲ್ಲಿ ಮಡಿಕೇರಿ ನಗರಸಭೆಗೆ 35 ಕೋಟಿ ರೂ., ಕುಶಾಲನಗರ, ಸೋಮವಾರಪೇಟೆ, ವೀರಾಜಪೇಟೆ ಪಟ್ಟಣ ಪಂಚಾಯಿತಿಗಳಿಗೆ ತಲಾ 2 ಕೋಟಿ ರೂ. ಒಟ್ಟು 41 ಕೋಟಿ ರೂ. ಅಂದಾಜು ಪಟ್ಟಿ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಕಾಶ್ ಮಾಹಿತಿ ನೀಡಿದರು.

ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಸಂತ್ ಕುಮಾರ್ ಅವರು ರಸ್ತೆ ಅಭಿವೃದ್ಧಿಗಾಗಿ ಶೇ.70 ರಷ್ಟು ಮತ್ತು ಮಳೆ ನೀರು ಚರಂಡಿ ಕಾಮಗಾರಿಗಾಗಿ ಶೇ.10 ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡ ಅಭಿವೃದ್ಧಿಗೆ ಶೇ.24 ರಷ್ಟು ಅನುದಾನ ಮೀಸಲಿರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ.ಪಂ. ಅಧ್ಯಕ್ಷರಾದ ಜೀವನ್ (ವೀರಾಜಪೇಟೆ), ಚರಣ್ (ಕುಶಾಲನಗರ), ವಿಜಯಲಕ್ಷ್ಮಿ (ಸೋಮವಾರಪೇಟೆ) ಅವರು ಹಲವು ಮಾಹಿತಿ ನೀಡಿದರು.

ಪ.ಪಂ. ಮುಖ್ಯಾಧಿಕಾರಿಗಳಾದ ಕೃಷ್ಣಪ್ರಸಾದ್ (ವೀರಾಜಪೇಟೆ), ಶ್ರೀಧರ್ (ಕುಶಾಲನಗರ), ನಾಚಪ್ಪ (ಸೋಮವಾರಪೇಟೆ) ಅವರು ಹಲವು ಮಾಹಿತಿ ನೀಡಿದರು.

ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿಪೊನ್ನಪ್ಪ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಇಂಜಿನಿಯರ್‍ಗಳಾದ ಅರುಣ್, ಶಿವಕುಮಾರ್, ವನಿತಾ, ಪವಿತ್ರ, ಮಂಜುಳಾ ಇತರರು ಇದ್ದರು.