ವೀರಾಜಪೇಟೆ, ಜೂ. 23: ಭಾರತ ದೇಶದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳುವ ಹಕ್ಕು ಸಂವಿಧಾನದಲ್ಲಿದೆ. ಮುಗ್ಧ ಮಕ್ಕಳ ಹಕ್ಕನ್ನು ಯಾರು ಕಸಿದುಕೊಳ್ಳಬಾರದು ಎಂದು ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ತಡೆಯ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಸಾಕ್ಷರತಾ ರಥಕ್ಕೆ ಸ್ವಾಗತ” ಕೋರುವ ಮೊದಲು ಪಟ್ಟಣದ ಪುರಭವನದಲ್ಲಿ ಏರ್ಪಡಿಸಿದ್ದ ‘ಬಾಲ್ಯ ವಿವಾಹ ತಡೆ-ಶಾಲೆ ಕಡೆ ನಡೆ’ ಜಾಗೃತಿ ಆಂದೋಲನದ ಕಾರ್ಯಕ್ರಮ ಉದ್ಘಾಟಿಸಿದ ಮೋಹನ್ ಪ್ರಭು ಅವರು, ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಸದಸ್ಯರು ಕಾನೂನಿನ ಮಹತ್ವವನ್ನು ಅರಿಯಬೇಕು. ಕಾನೂನಿನ ನಿಯಮದಂತೆ ಪ್ರತಿ ಮಕ್ಕಳಿಗೂ ಶಿಕ್ಷಣ ನೀಡುವದು ಪೋಷಕರ ಆದ್ಯ ಕರ್ತವ್ಯವಾಗಿದೆ. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹವನ್ನು ಪೂರ್ಣವಾಗಿ ತಡೆಗಟ್ಟಿ ಮಕ್ಕಳಿಗೆ ಶಿಕ್ಷಣ ನೀಡಿ ಬಾಳು ಬೆಳಗಿಸಬೇಕು. ಸಮಾಜದಲ್ಲಿ ಮಕ್ಕಳ ಒಳಿತಿಗಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಶಿಕ್ಷಣ ಕಡ್ಡಾಯಗೊಳಿಸಿದರೆ ಬಾಲ್ಯ ವಿವಾಹ ಸಮಸ್ಯೆ ಉದ್ಭವಿಸುವದಿಲ್ಲ. ಸಮಾಜದಲ್ಲಿ ಮೂಢ ನಂಬಿಕೆಯ ಜನರಿಂದ ಬಾಲ್ಯ ವಿವಾಹಗಳು ನಡೆಯುವದು ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಪೊಲೀಸರಿಗೆ ತಕ್ಷಣ ತಿಳಿಸಿ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.

ವಕೀಲರ ಸಂಘದ ಅದ್ಯಕ್ಷ ಎನ್.ಜಿ. ಕಾಮತ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸರ್ಕಾರಿ ಕಾರ್ಯಕ್ರಮಗಳು ಕಾಟಾಚಾರದ ಕಾರ್ಯಕ್ರಮ ಆಗಬಾರದು. ಮೊದಲು ಜಾಗೃತಿ ಅರಿವು ಹಾಗೂ ಹಾಡಿಗಳಿಗೆ ಕಡ್ಡಾಯ ಶಿಕ್ಷಣ ನೀಡುವ ಮೂಲಕ ಬಾಲ್ಯ ವಿವಾಹದ ಸಮಸ್ಯೆ ಅರಿವು ಮೂಡಿಸುವಂತಾಗಬೇಕು ಎಂದರು

ಸ್ತ್ರೀಶಕ್ತಿ ಒಕ್ಕೂಟದ ವೀರಾಜಪೇಟೆ ಅಧ್ಯಕ್ಷೆ ರಜಿನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಜಯಪ್ರಕಾಶ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಕಾಮತ್, ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳು, ಪೊಲೀಸ್ ಇಲಾಖೆ, ವಕೀಲರುಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಪಿ. ಲೀಲಾವತಿ ಸ್ವಾಗತಿಸಿ, ನಿರೂಪಿಸಿದರೆ, ಮಕ್ಕಳ ರಕ್ಷಣಾ ದಳದ ಮಂಜುನಾಥ್ ವಂದಿಸಿದರು.