ಮಡಿಕೇರಿ, ಜೂ. 23: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಭಾರತ ಸರಕಾರದ ಆರ್ಥಿಕ ಸಾಧನೆಯು ಪ್ರಸಕ್ತ ಅವಧಿಗೆ ರೂ. ಹದಿನೇಳು ಲಕ್ಷ ಕೋಟಿ ಗುರಿ ಹೊಂದಲಿದ್ದು, ಇಂತಹ ಸಾಧನೆಗೆ ಸಮರ್ಥ ನಾಯಕನ ಕೈಗೆ ದೇಶದ ಅಧಿಕಾರ ನೀಡಿರುವ ಜನ ಕೋಟಿಯನ್ನು ಅಭಿನಂದಿಸುವದಾಗಿ, ಉತ್ತರ ಕನ್ನಡ ಜಿಲ್ಲೆ ಕೆನರಾ ಲೋಕಸಭಾ ಸದಸ್ಯ ಅನಂತಕುಮಾರ್ ಹೆಗಡೆ ತಿಳಿಸಿದ್ದಾರೆ.
ನಗರದ ಕ್ರಿಸ್ಟಲ್ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಮೂರು ವರ್ಷಗಳ ಸಾಧನೆಗಾಗಿ ಆಯೋಜಿಸಿದ್ದ ‘ಎಲ್ಲರೊಡನೆ ಎಲ್ಲರ ವಿಕಾಸ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರು ಅಧಿಕಾರದಲ್ಲಿದ್ದ ವೇಳೆ 9 ಲಕ್ಷ ಕೋಟಿಯಷ್ಟು ಇದ್ದಂತಹ ಆರ್ಥಿಕ ಸ್ಥಿತಿಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ರೂ. 13 ಲಕ್ಷ ಕೋಟಿಗೆ ಹೆಚ್ಚಿಸಿದ್ದಾಗಿ ಬೊಟ್ಟು ಮಾಡಿದರು.
ಅನಂತರದ 10 ವರ್ಷ ಆಳ್ವಿಕೆ ನಡೆಸಿದ ಯುಪಿಎ ಸರಕಾರದ ಈ ಸುದೀರ್ಘ ಅವಧಿಯಲ್ಲಿ ಕೇವಲ 1 ಲಕ್ಷ ಕೋಟಿ ಹೆಚ್ಚಳದೊಂದಿಗೆ ದೇಶದ ಆರ್ಥಿಕ ಮೊತ್ತವನ್ನು ಒಟ್ಟು ರೂ. 14 ಲಕ್ಷ ಕೋಟಿಯಷ್ಟು ಗಳಿಸಿದ್ದಾಗಿ ಅನಂತ್‍ಕುಮಾರ್ ಹೆಗಡೆ ಅಂಕಿ ಅಂಶ ನೀಡಿದರು. ಇದೀಗ ಕೇವಲ ಮೂರು ವರ್ಷದ ಆಳ್ವಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಗುರಿ ಮೀರಿದ ಸಾಧನೆಯೊಂದಿಗೆ ರೂ. 16 ಲಕ್ಷ ಕೋಟಿಗೆ ಮುಟ್ಟಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಈ ಆದಾಯ ರೂ. 17 ಲಕ್ಷ ಕೋಟಿ ತಲಪಲಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ಕಳೆದ ಮೂರು ವರ್ಷಗಳಲ್ಲಿ ಸಾಧಿಸಿದ್ದನ್ನು ಸಹಿಸಿಕೊಳ್ಳಲಾರದ ಮಂದಿ, ಕಳೆದ 60 ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ನರೇಂದ್ರ ಮೋದಿ ಭಾರತದೆಡೆಗೆ ಜಗತ್ತು ನೋಡುವಂತೆ ಹಾಗೂ ಭಾರತದ ನಾಯಕತ್ವವನ್ನು ಒಪ್ಪಿಕೊಳ್ಳುವ ಸಾಮಥ್ರ್ಯ ಪಡೆದಿರುವದು ತಾಕತ್ತಲ್ಲವೇ? ಎಂದು ಮರು ಪ್ರಶ್ನೆ ಹಾಕಿದರು.
ಸಮಗ್ರ ಭಾರತದ ಅಭಿವೃದ್ಧಿಗಾಗಿ ಮತ್ತು ಎಲ್ಲರ ವಿಕಾಸಕ್ಕಾಗಿ ರೂಪಿಸಿರುವ ಕಾರ್ಯಕ್ರಮಗಳನ್ನು ಬೊಟ್ಟು ಮಾಡಿದ ಅನಂತಕುಮಾರ್ ಹೆಗಡೆ, ಇದುವರೆಗೆ ಮತ ಬ್ಯಾಂಕ್‍ಗಾಗಿ ಪುಕ್ಕಲುತನದ ರಾಜಕಾರಣ ಮಾಡುವವರು ದೇಶದ ಪ್ರಧಾನಿಗಳಾದರೆ, ನರೇಂದ್ರ ಮೋದಿಯವರು ಭಾರತದ ಅಭ್ಯುದಯಕ್ಕಾಗಿ ಜಗತ್ತು ತಲೆದೂಗುವಂತಹ ಪ್ರಧಾನಿಯಾಗಿ ನುಡಿದಂತೆ ನಡೆಯುವ ಆಡಳಿತ ನೀಡುತ್ತಿರುವದ್ದಾಗಿ ಸಮರ್ಥಿಸಿ ಕೊಂಡರು.
ಬಿಜೆಪಿ ಅಜೆಂಡಾ ಅಲ್ಲ : ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಬಿಜೆಪಿ ಅಜೆಂಡಾ ಅಲ್ಲವೆಂದು ಟೀಕಾಕಾರರಿಗೆ ತಿರುಗೇಟು ನೀಡಿದ ಅವರು, ಅದು ಈ ದೇಶದ ಅಜೆಂಡಾವಾಗಿದ್ದು, ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ
(ಮೊದಲ ಪುಟದಿಂದ) ಶತಸಿದ್ಧವೆಂದು ಘೋಷಿಸಿದರು. ಸ್ವಾತಂತ್ರ್ಯದ ಬೆನ್ನಲ್ಲೇ ಅಂದಿನ ಗೃಹಮಂತ್ರಿ ಸರ್ದಾರ್ ಪಟೇಲ್ ಹಾಗೂ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಗುಜರಾತಿನ ಸೋಮನಾಥ ಮಂದಿರವನ್ನು ಜೀರ್ಣೋದ್ಧಾರಗೊಳಿಸಿದಾಗ, ಪಂಡಿತ್ ನೆಹರು ಪ್ರಧಾನಿಯಾಗಿ ದೂರ ಉಳಿದಿದ್ದರೆಂದು ಉದಾಹರಿಸುತ್ತಾ, ಆ ಮಾತ್ರದಿಂದಲೇ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಸಮರ್ಥನೆ ನೀಡಿದರು.
ಏಕರೂಪ ಕಾನೂನು - ತೆರಿಗೆ : ಭಾರತದಂತಹ ಮಹಾನ್ ದೇಶದಲ್ಲಿ ಏಕರೂಪ ಕಾನೂನು ಹಾಗೂ ಏಕರೂಪ ತೆರಿಗೆ ಇರಬೇಕೆಂಬದು ಈ ದೇಶದ 125 ಕೋಟಿ ಜನತೆಯ ಆಶಯವಾಗಿದ್ದು, ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಕಾಲದ ಜಿಎಸ್‍ಟಿ ತೆರಿಗೆ ಪದ್ಧತಿ ಜಾರಿಗೆ ನರೇಂದ್ರ ಮೋದಿ ದಿಟ್ಟ ಹೆಜ್ಜೆ ಇರಿಸಿದ್ದು, ಜುಲೈ 1 ರಿಂದ ಅನುಷ್ಠಾನಗೊಳ್ಳಲಿದೆ ಎಂದರು.
ಎದೆಗಾರಿಕೆ ಬೇಕು : ಭಾರತದ ಅಭ್ಯುದಯಕ್ಕಾಗಿ ಏಕರೂಪ ತೆರಿಗೆ ಪದ್ಧತಿ, ಗೋಹತ್ಯಾ ನಿಷೇಧ ಕಾನೂನು, ಕಪ್ಪುಹಣಕ್ಕೆ ಕಡಿವಾಣ, ರಾಷ್ಟ್ರದ ಸೈನಿಕರಿಗೆ ಆತ್ಮಸ್ಥೈರ್ಯ ನೀಡಿ ಸರ್ಜಿಕಲ್ ಸ್ಟ್ರೈಕ್ ಮೂಲಕ ವಿದ್ರೋಹಿಗಳಿಗೆ ಪಾಠ ಕಲಿಸಲು ಎದೆಗಾರಿಕೆಯುಳ್ಳ ಮೋದಿಯಂತಹ ಪ್ರಧಾನಿಯಿಂದ ಮಾತ್ರ ಸಾಧ್ಯವೆಂದ ಅವರು, ಪುಕ್ಕಲುತನ ಮಂದಿಗೆ ಇದೆಲ್ಲ ಅಸಾಧ್ಯವೆಂದು ವಿರೋಧಿಗಳಿಗೆ ಕುಟುಕಿದರು.
ಜಿಲ್ಲೆಯಲ್ಲಿ ಬ್ರಿಟಿಷ್ ಕಾನೂನು : ಸಮ್ಮೇಳನದಲ್ಲಿ ಪ್ರಾಸ್ತವಿಕ ನುಡಿಯಾಡಿದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು, ದೇಶದ ಸುಧಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ, ಸಾವಿರಾರು ಕೆಲಸಕ್ಕೆ ಬಾರದ ಕಾನೂನುಗಳನ್ನು ರದ್ದುಗೊಳಿಸಿದರೆ, ಕೊಡಗಿನಲ್ಲಿ ಅರಣ್ಯಾಧಿಕಾರಿಗಳು 1878ರ ಬ್ರಿಟೀಷ್ ಶಾಸನದಡಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಸಮಗ್ರ ಭಾರತದ ಅಭ್ಯುದಯದೊಂದಿಗೆ ಜನತೆಯ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದ್ದು, ಈ ಸೌಲಭ್ಯಗಳನ್ನು ಹೊಂದಿಕೊಂಡು ಜನತೆ ಮುಖ್ಯವಾಹಿನಿಗೆ ಬರುವಂತೆ ಅವರು ಕರೆ ನೀಡಿದರು. ರೈತರ ಅಭ್ಯುದಯಕ್ಕೆ ಕೋಟ್ಯಾಂತರ ರೂ. ಯೋಜನೆ ಜಾರಿಗೊಳಿಸಿ ಗೊಬ್ಬರದ ಕೊರತೆಯಾಗದಂತೆ ನೋಡಿಕೊಂಡಿರುವ ಭ್ರಷ್ಟಾಚಾರ ಮುಕ್ತ ಸರಕಾರ ಕೇಂದ್ರದ್ದಾಗಿದೆ ಎಂದು ಅವರು ಕೊಂಡಾಡಿದರು.
ಎಲ್ಲರ ಕ್ಷೇಮ : ದೇಶದಲ್ಲಿ ಎಲ್ಲರ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೊಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಸರಕಾರದ ಸಾಧನೆಯೆಂದು ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ ಕಾರ್ಯಕ್ರಮದಲ್ಲಿ ನುಡಿದರು. ಯೋಗದಿಂದ ಆರೋಗ್ಯವೆಂದು ಜಗತ್ತಿಗೆ ತೋರಿಸಿ, ನುಡಿದಂತೆ ನಡೆದಿರುವ ಸರಕಾರ ಮತ್ತು ಪ್ರಧಾನಿ ಮೋದಿ ಅಭಿನಂದನಾರ್ಹರೆಂದು ಸಮರ್ಥಿಸಿದರು.
ರಾಷ್ಟ್ರಭಕ್ತಿ : ಎಲ್ಲಕ್ಕಿಂತ ದೇಶ ಮೊದಲು ಎಂಬಂತೆ ದೇಶಭಕ್ತಿಯೊಂದಿಗೆ ಅಭಿಮಾನ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಕೆ ನಾಯಕತ್ವ ನೀಡುತ್ತಿದ್ದಾರೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ನುಡಿದರು. ಇದುವರೆಗೆ ಕೀಳರಿಮೆಯಿಂದ ಕಾಣುತ್ತಿದ್ದ ಭಾರತವನ್ನು ವಿದೇಶಿ ಮಂದಿ ಗೌರವದಿಂದ ನೋಡುವಂತೆ ಮಾಡಿದ ಕೀರ್ತಿ ಮೋದಿ ಅವರದ್ದು ಎಂದ ಅವರು, ಬುಲೆಟ್ ರೈಲುವಿನಂತಹ ಯೋಜನೆ, ಸೇನೆಯ ಸಾಮಥ್ರ್ಯ ಹೆಚ್ಚಳ, ಕಾಳಧನ ನಿಯಂತ್ರಣದಂತಹ ಕೇಂದ್ರದ ಸಾಧನೆಯಿಂದ ಜನತೆ ಮೋದಿ ಬೆಂಬಲಕ್ಕಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲೆಡೆಯಿಂದ ಚುನಾಯಿತ ಹಾಗೂ ಸಹಕಾರ ಕ್ಷೇತ್ರಗಳ ಜನಪ್ರತಿನಿಧಿಗಳು, ವಿವಿಧ ಇಲಾಖೆ ವರ್ಗದವರು ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ದೇಶಕ ಜ್ವಾಲೇಂದ್ರ ಕುಮಾರ್ ಸ್ವಾಗತಿಸಿದರು. ಬಿ.ಕೆ. ಅರುಣ್‍ಕುಮಾರ್ ನಿರೂಪಿಸಿದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಎಸ್‍ಪಿ ರಾಜೇಂದ್ರ ಪ್ರಸಾದ್, ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ತಾ.ಪಂ. ಅಧ್ಯಕ್ಷರುಗಳಾದ ಶೋಭಾ ಮೋಹನ್, ಸ್ಮಿತಾ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು. ಜಯಂತಿ ಪ್ರಾರ್ಥನೆ, ಭಾರತಿ ರಮೇಶ್ ತಂಡ ವಂದೇಮಾತರಂ ಹಾಡಿದರೆ, ರಾಷ್ಟ್ರಗೀತೆಯೊಂದಿಗೆ ಮನುಮುತ್ತಪ್ಪ ವಂದಿಸಿದರು.