ಮಡಿಕೇರಿ, ಜೂ. 24: ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ಅವರ ಪತ್ರಿಕಾ ಹೇಳಿಕೆಗೆ ಬಿಜೆಪಿಯ ಮಾಚಿಮಾಡ ರವೀಂದ್ರ ಈ ಕೆಳಗಿನ ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲಾಧ್ಯಕ್ಷ ಪದವಿಯನ್ನು ಕಳೆದುಕೊಂಡು ಕೊಡಗಿನಲ್ಲಿ ಅಧಿಕಾರ ವಂಚಿತರಾಗಿರುವ ಮನು ಮುತ್ತಪ್ಪ ಅವರು ಇತ್ತೀಚೆಗೆ ನನ್ನ ಬಗ್ಗೆ ಹೋದಲ್ಲಿ, ಬಂದಲ್ಲಿ ಸುಳ್ಳು ಹೇಳುತ್ತಿರುವದು ಹಾಸ್ಯಾಸ್ಪದವಾಗಿದೆ. ಬೋಪಯ್ಯ ಅವರು ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಜನತಾ ದಳದಲ್ಲಿದ್ದ ಮನುಮುತ್ತಪ್ಪ ಅವರು ದಂಬೆಕೋಡಿ ಮಾದಪ್ಪ ಅವರ ಜೊತೆ ಸೇರಿ ಇದೇ ಬೋಪಯ್ಯ ಅವರನ್ನು ಸೋಲಿಸಿದ್ದರು. ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ನನ್ನ ಪ್ರಯತ್ನದಲ್ಲೆ ಮುತ್ತಪ್ಪ ಅವರನ್ನು ಬಿ.ಜೆ.ಪಿ ಜಿಲ್ಲಾ ಯುವ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು. ಬಿ.ಜೆ.ಪಿ.ಯಲ್ಲಿ ಕಳೆದ 25 ವರ್ಷಗಳಿಂದ ಇಲ್ಲಿಯವರೆಗೆ ಸಕ್ರಿಯವಾಗಿ ನಾನು ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷನಾಗಿಯೂ, ಜಿಲ್ಲಾ ಯುವ ಮೋರ್ಚ ಅಧ್ಯಕ್ಷ, ಸಂಘಟನಾ ಕಾರ್ಯದರ್ಶಿ, ಬಿ.ಜೆ.ಪಿ ರಾಜ್ಯ ಯುವ ಮೋರ್ಚ ಸದಸ್ಯ, ತಾಲೂಕು ಅಧ್ಯಕ್ಷ,ಪ್ರಧಾನ ಕಾರ್ಯದರ್ಶಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದು, ಇತ್ತೀಚಿನ ವರೆಗೂ ಪಕ್ಷದಲ್ಲಿ ಸಕ್ರಿಯನಾಗಿದ್ದೇನೆ.

ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತ ನಾಗಬೇಕಾದರೆ ಕನಿಷ್ಟ 100 ಜನರನ್ನು ಪಕ್ಷಕ್ಕೆ ಸೇರ್ಪಡೆ ಗೊಳಿಸಬೇಕಾಗಿ ನಿಯಮವಿದೆ. ನಾನು ನೂರಕ್ಕೂ ಹೆಚ್ಚು ಜನರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ, ಪಕ್ಷವನ್ನು ಸಂಘಟನೆ ಮಾಡಿ ಸಕ್ರಿಯ ಕಾರ್ಯಕರ್ತನಾದ ದಾಖಲೆಗಳು ಇದೆ. ಮನು ಮುತ್ತಪ್ಪ ಅವರು ಅಷ್ಟು ಜನರನ್ನು ಸೇರ್ಪಡೆಗೊಳಿಸಿದ್ದಾರಾ ಎಂಬದು ನನಗೆ ಗೊತ್ತಿಲ್ಲ. ಏಪ್ರಿಲ್ ಎರಡನೆ ವಾರದಲ್ಲಿ ಬೆಂಗಳೂರಿನ ಬಿ.ಜೆ.ಪಿ. ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್, ಶೋಭ ಕರಂದ್ಲಾಜೆ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿ ಸಿ.ಟಿ. ರವಿ, ಜಿಲ್ಲೆಯ ಇಬ್ಬರು ಎಂ.ಎಲ್.ಎ. ಮತ್ತು ಮನು ಮುತ್ತಪ್ಪ ಅವರ ಸಮ್ಮುಖದಲ್ಲಿ ಜಿಲ್ಲಾ ಮಾಜಿ ಅಧ್ಯಕ್ಷರ ಜೊತೆ ನಡೆದ ಸಭೆಯಲ್ಲಿ ಮನುಮುತ್ತಪ್ಪ ಅವರನ್ನು ಬದಲಾವಣೆ ಮಾಡಿದಾಗ ನಾನು ಸಕ್ರಿಯ ಕಾರ್ಯ ಕರ್ತನಲ್ಲ ಎಂದು ಹೇಳ ಬಹುದಿತ್ತಲ್ಲ? ಈಗ ಜನರನ್ನು ಗೊಂದಲಕ್ಕೆ ಒಳಪಡಿಸುತ್ತಿರುವದು ಯಾಕೆ? ಕಳೆದ 25 ವರ್ಷಗಳಿಂದ ಕೊಡಗಿನ ಏಳಿಗೆಗಾಗಿ ಹೋರಾಟ ಮಾಡುತ್ತಿರು ವದು ಕೊಡಗಿನ ಜನತೆಗೆ ಚೆನ್ನಾಗಿ ತಿಳಿದಿದೆ. ಯಾರನ್ನೋ ಮೆಚ್ಚಿಸಲು ನಾನು ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಲ್ಲ ಎನ್ನುವ ಬಗ್ಗೆ ಸುಳ್ಳು ಹೇಳಿಕೆ ನೀಡಿದರೆ ಆ ತಾಯಿ ಕಾವೇರಿ ಮಾತೆ ಕೂಡ ಕ್ಷಮಿಸಲಾರಳು.