ಮೂರ್ನಾಡು, ಜೂ. 24: ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಅಧ್ಯಕ್ಷತೆಯಲ್ಲಿ ನಡೆಯಿತು. ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಟ್ಟಣದಲ್ಲಿ ಕಸದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಅನುಮತಿ ಪಡೆಯದೆ ಎಲ್ಲೆಂದರಲ್ಲಿ ಬ್ಯಾನರ್ ಕುರಿತು ಗ್ರಾಮಸ್ಥರು ಆರೋಪಿಸಿದರು.

ಪಟ್ಟಣದಲ್ಲಿ ಅನೇಕ ಕಾಂಪ್ಲೆಕ್ಸ್‍ಗಳಿದ್ದು ಅವುಗಳಲ್ಲಿರುವ ಅಂಗಡಿಗಳ ಕಸಗಳನ್ನು ಪ್ರತಿದಿನ ರಸ್ತೆ ಪಕ್ಕದಲ್ಲಿ ಸುರಿಯುತ್ತಾರೆ. ಅಂತಹ ಕಸಗಳನ್ನು ಗ್ರಾಮ ಪಂಚಾಯಿತಿ ಸ್ವಚ್ಛಗೊಳಿಸುತ್ತಿರುವ ಕಾರ್ಯ ದಿನಂಪ್ರತಿ ಆಗುತ್ತಿದೆ. ಕಾಂಪ್ಲೆಕ್ಸ್‍ಗಳಲ್ಲಿ ಸಂಗ್ರಹವಾಗುವ ಕಸಗಳನ್ನು ಕಾಂಪ್ಲೆಕ್ಸ್ ಜಾಗದಲ್ಲೇ ವಿಲೇವಾರಿ ಮಾಡಿ ಅವುಗಳನ್ನು ಸುಟ್ಟು ಹಾಕುವ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಕಟ್ಟಡ ಮಾಲೀಕರಿಗೆ ನೋಟೀಸು ನೀಡಬೇಕು ಎಂದು ಒತ್ತಾಯಿಸಿದರು. ದೊಡ್ಡ ದೊಡ್ಡ ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇದ ಮಾಡಲಾಗಿದೆ. ಆದರೆ ಮೂರ್ನಾಡು ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲು ಗ್ರಾಮ ಪಂಚಾಯಿತಿ ಹಿಂದೆ ಬಿದ್ದಿದೆ ಏಕೆ? ಎಂದು ಸಾರ್ವಜನಿಕರು ಪ್ರಶ್ನಿಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಮುಂದೆ ಕಸದ ಸಮಸ್ಯೆ ಹಾಗೂ ಪ್ಲಾಸ್ಟಿಕ್ ನಿಷೇಧದÀ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಂಚಾಯಿತಿ ಅಧ್ಯಕ್ಷೆ ಜಮುನ ಭರವಸೆ ನೀಡಿದರು.

ಪಟ್ಟಣದ ವಿವಿಧೆಡೆ ಬ್ಯಾನರ್‍ಗಳು ನೇತಾಡುತ್ತಿರುವದು ಸಾಮಾನ್ಯವಾಗಿದೆ. ಇಂತಹ ಬ್ಯಾನರ್‍ಗಳನ್ನು ಅನುಮತಿ ಪಡೆಯದೆ ಅಳವಡಿಸುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದರು. ಕುಡಿಯುವ ನೀರು ಪ್ರತಿನಿತ್ಯ ವ್ಯತ್ಯಯವಾಗುತ್ತಿದ್ದು, ಈ ಕುರಿತು ವಿಚಾರಿಸಿದರೆ ವಿದ್ಯುತ್ ಇಲ್ಲದೆ ನೀರು ಬಿಡಲಿಲ್ಲ ಎಂಬ ಉತ್ತರ ಬರುತ್ತದೆ. ಮೂರ್ನಾಡು ಪಟ್ಟಣದಲ್ಲಿ ವಿದ್ಯುತ್ ಇದ್ದರೂ ನೀರು ಮಾತ್ರ ಬರುವದಿಲ್ಲ ಎಂದು ಆರೋಪಿಸಿದರು. ಉಪ್ಪುಗುಂಡಿ ಯಿಂದ ನೀರು ಸರಬರಾಜು ಗೊಳ್ಳುತ್ತಿದ್ದು, ಉಪ್ಪುಗುಂಡಿಗೆ ಪಾರಾಣೆ ಮಾರ್ಗದ ವಿದ್ಯುತ್ ಲೈನ್ ಅಳವಡಿಸಲಾಗಿದೆ. ಪಾರಾಣೆ ವಿದ್ಯುತ್ ಮಾರ್ಗದಲ್ಲಿ ನಿರಂತರ ಸಮಸ್ಯೆ ಉಂಟಾಗುತ್ತಿದ್ದು, ವಿದ್ಯುತ್ ಇಲ್ಲದೆ ತೊಂದರೆ ಉಂಟಾಗುತ್ತಿದೆ. ಉಪ್ಪುಗುಂಡಿಯಲ್ಲಿ ಹೊಸ ಟ್ರಾನ್ಸ್‍ಫಾರ್ಮರ್ ಈಗಾಗಲೇ ಅಳವಡಿಸಲಾಗಿದೆ ಸಂಪೂರ್ಣ ಕಾಮಗಾರಿ ಆದ ಬಳಿಕ ಮೂರ್ನಾಡು ವಿದ್ಯುತ್ ಲೈನ್ ನೀಡಲಾಗುತ್ತದೆ ಇದರಿಂದ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಸದಸ್ಯ ರವಿ ಉತ್ತರಿಸಿದರು.

ಸಭೆಗೆ ಆಗಮಿಸಿದ ವಿವಿಧ ಇಲಾಖಾಧಿಕಾರಿಗಳು ಸರಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಂ. ಪ್ರಮೋದ್ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಕಲಾವತಿ ಪೂವಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಶಶಿ ಪ್ರಕಾಶ್, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಂಞಪ್ಪ ಪವಿತ್ರ, ಅಭಿವೃದ್ಧಿ ಅಧಿಕಾರಿ ಲೋಕೇಶ್ ಹಾಗೂ ಸದಸ್ಯರು ಹಾಜರಿದ್ದರು.