ಗೋಣಿಕೊಪ್ಪಲು, ಜೂ.24: ಭಾರತ ಕಿರಿಯರ ಹಾಕಿ ತಂಡಕ್ಕೆ ಮುಂದಿನ ದಿನಗಳಲ್ಲಿ ಕೌಶಲ್ಯ ತರಬೇತಿಯನ್ನು ನೀಡಲಿದ್ದು, ಮುಂದಿನ ವರ್ಷ ಭಾರತ ಹಾಕಿ ತಂಡಕ್ಕೆ 4 ರಿಂದ 5 ಮಂದಿ ಕೊಡಗಿನ ಪ್ರತಿಭೆಗಳು ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹಾಕಿ ತಂಡದ ಮಾಜಿ ನಾಯಕ ಹಾತೂರುವಿನ ವಿ.ಆರ್.ರಘುನಾಥ್ ಭವಿಷ್ಯ ನುಡಿದಿದ್ದಾರೆ.

ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಹಾತೂರು ವನಭದ್ರಕಾಳಿ ದೇವಸ್ಥಾನದಲ್ಲಿ ತನ್ನ ಪತ್ನಿ ಸೂರ್ಯ ಅವರೊಂದಿಗೆ ಪೂಜೆ ಸಲ್ಲಿಸಿ, ಬಳಿಕ ದೇವಸ್ಥಾನಕ್ಕೆ ಜನರೇಟರ್ ಖರೀದಿಗಾಗಿ ರೂ.1 ಲಕ್ಷ ದೇಣಿಗೆ ನೀಡಿ ಅವರು ಮಾತನಾಡಿದರು.

ಇದೀಗ ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ಚಾಂಪಿಯನ್ ಟ್ರೋಫಿ ಹಾಕಿಯಲ್ಲಿ ಭಾರತದ ಸಾಧನೆ ಬಗ್ಗೆ, ಮಲೇಷ್ಯಾ ತಂಡದ ವಿರುದ್ಧ ಕ್ವಾರ್ಟರ್ ಫೈನಲ್‍ನಲ್ಲಿ ಸೋತ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸದ ಅವರು ಉತ್ತಮ, ಸಮತೋಲನ ಇರುವ ತಂಡವನ್ನೇ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಭಾರತ ವಿಶ್ವಕ್ರಮಾಂಕದಲ್ಲಿ 6ನೇ ಸ್ಥಾನದಲ್ಲಿದ್ದು, ಮುಂದಿನ ವಿಶ್ವಕಪ್‍ಗೂ ಅರ್ಹತೆ ಪಡೆದಿದೆ. ಭಾರತದಲ್ಲಿಯೂ ಮುಂದೆ ವಿಶ್ವಕಪ್ ಹಾಕಿ ಪಂದ್ಯಾಟ ನಡೆಯಲಿದ್ದು ಭಾರತ ತಂಡ ಉತ್ತಮ ಸಾಧನೆ ತೋರಲಿದೆ ಎಂದÀರು.

ಈ ಹಿಂದೆಯೂ ಹಾತೂರು ವನಭದ್ರಕಾಳಿ ದೇವಸ್ಥಾನದ ನೆಲಹಾಸು( ಟೈಲ್ಸ್) ಕಾಮಗಾರಿಗೆ ರೂ.1 ಲಕ್ಷ ದೇಣಿಗೆ ನೀಡಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕೇಳಪಂಡ ವಿಶ್ವನಾಥ್, ಸಮಿತಿಯ ಕಾಳೇಂಗಡ ಮಾದಪ್ಪ, ಕೊಂಗೆಪಂಡ ಸುಬ್ಬಯ್ಯ, ಕೊಕ್ಕಂಡ ಅರ್ಜುನ ಸಮ್ಮುಖದಲ್ಲಿ ರೂ.1 ಲಕ್ಷ ಮೊತ್ತವನ್ನು ಹಸ್ತಾಂತರಿಸಿದರು.

ಇಂಡಿಯನ್ ಆಯಿಲ್ ಕಾಪೆರ್Çೀರೇಷನ್( ಐಓಸಿ) ನಲ್ಲಿ ವ್ಯವಸ್ಥಾಪಕ ಹುದ್ದೆಯಲ್ಲಿರುವ ರಘುನಾಥ್ ಅವರು, ಒಟ್ಟು ಭಾರತ ತಂಡವನ್ನು ಪ್ರತಿನಿಧಿಸಿ 242 ಪಂದ್ಯಗಳನ್ನಾಡಿ, 130 ಗೋಲು ದಾಖಲಿಸಿದ್ದರು. ಅರ್ಜುನ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ಕರ್ನಾಟಕ ಕಣ್ಮಣಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪ್ರಸ್ತುತ 2017 ರ ‘ಟೈಮ್ ಪ್ಲೇಯರ್ ಆಫ್ ದ ಈಯರ್’ ಪ್ರಶಸ್ತಿಗೆ ಭಾಜನರಾಗಿದ್ದರು.

2 ಒಲಂಪಿಕ್,2 ವಿಶ್ವಕಪ್, 2 ಏಷಿಯನ್ ಗೇಮ್ಸ್, 4 ಚಾಂಪಿಯನ್ ಟ್ರೋಫಿ, 4 ಏಷಿಯನ್ ಕಪ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಒಲಂಪಿಕ್‍ನ ಮೂರು ಪಂದ್ಯಾಟ, ಆಸ್ಟ್ರೇಲಿಯಾ ನಾಲ್ಕು ರಾಷ್ಟ್ರಗಳ ಟೂರ್ನಿ, ಏಷಿಯನ್ ಕಪ್‍ನಲ್ಲಿ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದರು. ರಘುನಾಥ್ ಪೆÇೀಷಕರಾದ ಸಾಯಿ ನಿವೃತ್ತ ಕೋಚ್ ರಾಮಚಂದ್ರ ಉಪಸ್ಥಿತರಿದ್ದರು.

-ವರದಿ: ಟಿ.ಎಲ್.ಶ್ರೀನಿವಾಸ್