ಗೋಣಿಕೊಪ್ಪಲು, ಜೂ. 24: ರಾಜ್ಯ ಸರ್ಕಾರವೂ ಆರ್ಥಿಕವಾಗಿ ಸಂಕಷ್ಟದಲ್ಲಿದೆ ಎಂದು ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೈತರ ರೂ. 50 ಸಾವಿರದವರೆಗೆ ಸಹಕಾರ ಬ್ಯಾಂಕ್ ಸಾಲವನ್ನು ಮನ್ನಾ ಮಾಡುವ ಮೂಲಕ ತಮ್ಮ ರೈತ ಪರ ಕಾಳಜಿಯನ್ನು ವ್ಯಕ್ತ ಪಡಿಸಿದ್ದಾರೆ ಎಂದು ಮಾಜಿ ಎಂಎಲ್‍ಸಿ ಅರುಣ್‍ಮಾಚಯ್ಯ ಪ್ರಶಂಸಿಸಿದ್ದಾರೆ.

ಗೋಣಿಕೊಪ್ಪಲು ಪ್ರೆಸ್‍ಕ್ಲಬ್‍ನಲ್ಲಿ ಅಭಿಪ್ರಾಯಪಟ್ಟ ಅವರು, ರಾಜ್ಯ ಸರ್ಕಾರವು ಒಟ್ಟು ರೂ. 10,736 ಕೋಟಿ ಸಾಲ ಮನ್ನಾ ಹೊಣೆ ಹೊರಬೇಕಾಗಿದ್ದು, ರಾಜ್ಯದ 2,22,07,506 ಮಂದಿ ರೈತರಿಗೆ ಇದರ ಲಾಭ ಸಿಕ್ಕಿದೆ.

ಸಿದ್ಧರಾಮಯ್ಯ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿದ್ದು, ಕೊಡಗಿಗೆ ಬರ ಅಧ್ಯಯನ ತಂಡ ಆಗಮಿಸಿದ ಸಂದರ್ಭ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಕೊಡಗು ಜಿಲ್ಲೆಯ ಬಗ್ಗೆ ಇಲ್ಲಿನ ಅಧಿಕಾರಿಗಳು ತಪ್ಪು ಮಾಹಿತಿಯನ್ನು ನೀಡಿ ಬರಪೀಡಿತ ತಾಲೂಕು ಘೋಷಣೆಗೆ ಅಡ್ಡಿ ಉಂಟುಮಾಡಿದ್ದರು. ಕೊಡಗಿನಲ್ಲಿ ಕಾವೇರಿ, ಕಬಿನಿ, ಲಕ್ಷ್ಮಣ ತೀರ್ಥ ನದಿಯಲ್ಲಿ ನೀರು ಹರಿಯುತ್ತಿಲ್ಲ. ಇಲ್ಲಿ ನೀರಿದ್ದರೆ ಮಾತ್ರಾ ಎಲ್ಲೆಡೆ ಸುಭೀಕ್ಷೆ. ಇದನ್ನು ಮನವರಿಕೆ ಮಾಡುವ ಮೂಲಕ ಕೊಡಗು ಜಿಲ್ಲೆಯ ಮೂರು ತಾಲೂಕು ಬರಪೀಡಿತ ಎಂದು ಸೇರ್ಪಡೆಗೊಂಡಿದೆ ಎಂದು ನುಡಿದರು.

ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಸುಮಾರು ರೂ.72000ಕೋಟಿ ಸಾಲ ಮನ್ನಾ ಘೋಷಣೆ ಮಾಡಿದ್ದರು. ಇದರಲ್ಲಿ ಕಾಫಿ ಬೆಳೆಗಾರರ ರೂ. 900 ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯಲ್ಲಿ ರೂ. 25 ಸಾವಿರದವರೆಗಿನ ಸುಮಾರು ರೂ. 1600 ಕೋಟಿ ಸಾಲ ಮನ್ನಾ ಮಾಡಿದ್ದರು. ಆದರೆ, ಜಗದೀಶ್ ಶೆಟ್ಟರ್ ರೂ. 3600 ಸಾಲ ಮನ್ನಾ ಮಾಡುವದಾಗಿ ಘೋಷಣೆ ಮಾಡಿ ಕೇವಲ ರೂ.960 ಕೋಟಿ ಸಾಲ ಮನ್ನಾ ಮಾಡಿದ್ದರು. ಉಳಿಕೆ ರೂ. 2000 ಕೋಟಿಗೂ ಅಧಿಕ ಹಣ ಸಿದ್ಧರಾಮಯ್ಯ ಸರ್ಕಾರ ಅಂದು ಮನ್ನಾ ಮಾಡಿತ್ತು ಎಂದು ಹೇಳಿದರು.

ಹಿಂದುಳಿದ ವರ್ಗ, ಪ.ಜಾತಿ ಮತ್ತು ಪಂಗಡದ ಸಾಲ, ಕರ್ನಾಟಕ ನೇಕಾರರ ಸಾಲ, ಆಶ್ರಯ-ಅಂಬೇಡ್ಕರ್ ಯೋಜನೆಯ ಅಡಿಯಲ್ಲಿ ಉಳಿಕೆ ಮನೆಸಾಲವನ್ನು ಈಗಿನ ಸರ್ಕಾರ ಮನ್ನಾ ಮಾಡಿತ್ತು. ಕೇಂದ್ರ ಸರ್ಕಾರ ರೂ. 32,000 ಕೋಟಿ ವಾಣಿಜ್ಯೋದ್ಯಮಿಗಳ ಸಾಲವನ್ನು ಮನ್ನಾ ಮಾಡಿದೆ. ರೈತರೇ ಈ ದೇಶದ ಬೆನ್ನೆಲಬು. ಈ ನಿಟ್ಟಿನಲ್ಲಿ ಕೇಂದ್ರವೂ ರೈತರ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ವಿಪಕ್ಷ ನಾಯಕ ಜಗದೀಶ್‍ಶೆಟ್ಟರ್ ಮೋದಿ ಗಮನ ಸೆಳೆಯಬೇಕು ಎಂದು ತಿಳಿಸಿದ್ದಾರೆ.

ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ರೂ. 50 ಕೋಟಿ (2016-17 ಬಜೆಟ್ ಮೊತ್ತ) ಬಿಡುಗಡೆಯಾಗಿದ್ದು, ಜಿಲ್ಲೆಯ ವಿವಿಧ ಗ್ರಾ.ಪಂ. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ತಲಾ ರೂ. 40 ಲಕ್ಷದಂತೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ತಿತಿಮತಿ ಗ್ರಾ.ಪಂ. ರಸ್ತೆ ಅಭಿವೃದ್ಧಿಗೆ ರೂ. 40 ಲಕ್ಷ, ಗೋಣಿಕೊಪ್ಪಲು ಗ್ರಾಮೀಣ ರಸ್ತೆ ಅಭಿವೃದ್ಧಿಗೆ ರೂ. 40 ಲಕ್ಷ ಹಾಗೂ ಪೆÇನ್ನಂಪೇಟೆ ನಿರೀಕ್ಷಣಾ ಮಂದಿರ ನೂತನ ಕಟ್ಟಡ ಕಾಮಗಾರಿಗೆ ರೂ. 50 ಲಕ್ಷ ಬಿಡುಗಡೆಯಾಗಿದೆ ಎಂದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕಳೆದ ಹಲವು ವರ್ಷಗಳಿಂದ ಹಕ್ಕುಪತ್ರ ಸಿಗದೆ, ಆಶ್ರಯ, ಅಂಬೇಡ್ಕರ್, ಇತರೆ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಅತಂತ್ರವಾಗುಳಿದ ಜನತೆಗೆ ತುರ್ತು ಹಕ್ಕುಪತ್ರ ನೀಡಲು ಆದೇಶ ಹೊರಡಿಸಿದ್ದು, ಜಿಲ್ಲಾ ಉಸ್ತುವರಿ ಸಚಿವರು ಈಗಾಗಲೇ ಹಕ್ಕುಪತ್ರ ನೀಡಿದ್ದಾರೆ ಎಂದರು.

ಸಿದ್ಧರಾಮಯ್ಯ ಸರ್ಕಾರ ಪ್ರಣಾಳಿಕೆ ಘೋಷಣೆಯಂತೆ ಶೇ. 95 ರಷ್ಟು ಭರವಸೆಯನ್ನು ಈಡೇರಿಸಿದೆ. ಈ ನಿಟ್ಟಿನಲ್ಲಿ ನುಡಿದಂತೆ ನಡೆ ಧ್ಯೇಯ ವಾಕ್ಯದೊಂದಿಗೆ ಮುಂದಿನ ಚುನಾವಣೆ ಎದುರಿಸಲಾಗುವದು ಎಂದು ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎ.ಜೆ. ಬಾಬು, ಪ್ರವಾಸೋದ್ಯಮ ನಿಗಮದ ನಿರ್ದೇಶಕ, ಗ್ರಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್, ವೀರಾಜಪೇಟೆ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಪ್ರಮುಖರಾದ ಕುಲ್ಲಚಂಡ ಗಣಪತಿ ಹಾಗೂ ಹೆಚ್.ಬಿ. ಮುರುಘ ಉಪಸ್ಥಿತರಿದ್ದರು.