ವಿಶ್ಲೇಷಣೆ : ವಾಸು ಎ.ಎನ್

ಸಿದ್ದಾಪುರ, ಜೂ. 23: ಮಾಜಿ ಸಂಸದ ಅಡಗೂರು ವಿಶ್ವನಾಥ್ ಕಾಂಗ್ರೆಸ್ ತೊರೆದು ಜೆ.ಡಿ.ಎಸ್ ಸೇರ್ಪಡೆಗೊಳ್ಳುವದು ಬಹುತೇಕ ಖಚಿತವಾಗಿದ್ದು, ಅವರ ಬೆಂಬಲಿಗರು ಪಕ್ಷ ತೊರೆದರೆ ಕೆಲವು ಗ್ರಾ.ಪಂ ಆಡಳಿತದಲ್ಲಿ ಗೊಂದಲ ಏರ್ಪಡಲಿದೆ.ಇದಕ್ಕೆ ಪೂರಕವಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಣಿರವರು ಮಾಜಿ ಸಂಸದ ಅಡಗೂರು ಹೆಚ್ ವಿಶ್ವನಾಥ್‍ರವರು ಕರೆದ ಸಭೆಗೆ ಹಾಜರಾಗಿದ್ದ ನಂತರ ಸಿದ್ದಾಪುರದ ಕಾಂಗ್ರೆಸ್‍ನಲ್ಲಿ ಭಿನ್ನಮತ ಮತ್ತಷ್ಟು ಹೆಚ್ಚಾಗಿದೆ. ಪಂಚಾಯಿತಿ ಆಡಳಿತದಲ್ಲಿ ಮುಂದೆ ಏರುಪೇರು ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಒಂದು ಕಾಲದಲ್ಲಿ ಸಿದ್ದಾಪುರದಲ್ಲಿ ಅಪಾರ ಕಾರ್ಯಕರ್ತರನ್ನು ಹೊಂದಿಕೊಂಡಿದ್ದ ಜೆ.ಡಿ.ಎಸ್ ಇಂದು ಸಿದ್ದಾಪುರದಲ್ಲಿ ಭ್ರಮನಿರಸನಗೊಂಡಿದೆ.ಈ ಹಿನ್ನಲೆಯಲ್ಲಿ ಜೆ.ಡಿ.ಎಸ್ ಅನ್ನು ಮುಂದೆ ತರಲು

(ಮತ್ತೊಮ್ಮೆ ಸಿದ್ದಾಪುರದ ರಾಜಕೀಯ ಅಖಾಡಕ್ಕೆ) ಹಲವಾರು ರೀತಿಯ ತಂತ್ರಗಳು ನಡೆಯುವದನ್ನು ಅಲ್ಲಗಳೆಯುವಂತಿಲ್ಲ. ಇದಲ್ಲದೆ ಈಗಾಗಲೇ ಸಿದ್ದಾಪುರದ ಕಾಂಗ್ರೆಸ್‍ನಲ್ಲಿ ಎರಡು ಗುಂಪುಗಳಾಗಿದ್ದು ಕೂಡ ಗುಟ್ಟಾಗಿ ಉಳಿದಿಲ್ಲ. ಇದರ ಲಾಭವನ್ನು ಪಡೆಯಲು ಜೆ.ಡಿ.ಎಸ್ ಯತ್ನಿಸುತ್ತಿದೆ. ಮಾಜಿ ಸಂಸದ ವಿಶ್ವನಾಥ್ ತಮ್ಮ ಬೆಂಬಲಿಗರ ಸಭೆ ಕರೆದ ಸಂದರ್ಭ ಗ್ರಾ.ಪಂ ಅಧ್ಯಕ್ಷ ಮಣಿ ಸಭೆಗೆ ಹಾಜರಾಗಿದ್ದು, ಇತ್ತೀಚೆಗೆ ಸಿದ್ದಾಪುರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ಜಾಗೃತಿ ಜಾಥಾದಲ್ಲಿ ಅಧ್ಯಕ್ಷ ಮಣಿ ಕಾಣಿಸಿಕೊಳ್ಳದಿರುವದು ಹಲವು ಸಂದೇಹಕ್ಕೆ ಕಾರಣವಾಗಿದೆ. ಈತನ್ಮಧ್ಯೆ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಜಾಥಾಕ್ಕೆ ಬರದಿರುವ ಗ್ರಾ.ಪಂ ಅಧ್ಯಕ್ಷರಿಗೂ ಹಾಗೂ ಸದಸ್ಯರಿಗೂ ನೋಟೀಸ್ ನೀಡಬೇಕೆಂದು ಪ್ರಭಾರ ಜಿಲ್ಲಾಧ್ಯಕ್ಷ ಟಿ.ಪಿ ರಮೇಶ್ ವಲಯ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಜಿಲ್ಲೆಯ ರಾಜಕೀಯದ ಕುರುಕ್ಷೇತ್ರವೆಂದೇ ಖ್ಯಾತಿ ಪಡೆದುಕೊಂಡಿರುವ ಸಿದ್ದಾಪುರದಲ್ಲಿ ಈ ಹಿಂದಿನ ಲೋಕಸಭಾ-ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರು ರಾಜ್ಯದ ವಿವಿಧ ಪಕ್ಷದ ಮುಖಂಡರುಗಳು ಸಿದ್ದಾಪುರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದರು. ಜಿಲ್ಲೆಯಲ್ಲಿ ಅತೀ ದೊಡ್ಡ ಗ್ರಾಮ ಪಂಚಾಯಿತಿ ಹಾಗೂ ಅಧಿಕ ಸದಸ್ಯರುಗಳಿರುವ ಪಂಚಾಯಿತಿ ಎಂದು ಖ್ಯಾತಿ ಪಡೆದಿದೆ. ಆದರೆ ಗ್ರಾಮ ಪಂಚಾಯಿತಿಯಲ್ಲಿ ಈವರೆಗೂ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸುತ್ತಿದ್ದು, ಒಂದು ಬಾರಿ ಮಾತ್ರ ಜೆ.ಡಿ.ಎಸ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಪ್ರಸಕ್ತ ಸಾಲಿನಲ್ಲಿ ಸಿದ್ದಾಪುರದಲ್ಲಿ ಒಂದು ಸ್ಥಾನವನ್ನೂ ಗಳಿಸದ ಬಿ.ಜೆ.ಪಿ ಪಕ್ಷವು ತಾಲೂಕು ಪಂಚಾಯಿತಿಯ ಚುನಾವಣೆಯಲ್ಲಿ ಗೆದ್ದು ತನ್ನ ಇರುವಿಕೆಯನ್ನು ತಿಳಿಸಿದೆ. ಕಾಂಗ್ರೆಸ್‍ನ ಭದ್ರಕೋಟೆಯಾಗಿರುವ ಸಿದ್ದಾಪರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗ್ರಾಮ ಪಂಚಾಯಿತಿಯಲ್ಲಿ 19 ಮಂದಿ ಸದಸ್ಯರಿದ್ದರೂ ಕೂಡ ಪಂಚಾಯಿತಿಯ ಒಳಗೂ ಹೊರಗೂ ಬಿನ್ನಮತ ಎದ್ದು ಕಾಣುತ್ತಿದೆ. ಆಡಳಿತ ಪಕ್ಷದಲ್ಲೇ ಕೆಲವು ಸಭೆಗಳಲ್ಲಿ ಮಾತಿನ ಚಕಮಕಿ ನಡೆಯುತ್ತಿದೆ. ಸಿದ್ದಾಪುರದ ಕಾಂಗ್ರೆಸ್ ಪಕ್ಷದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇದರ ಭಾಗವಾಗಿ ಕಳೆದ ಕೆಲವು ತಿಂಗಳ ಹಿಂದೆ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಇದು ಸ್ಪೋಟಗೊಂಡು ಮಾಜಿ ಜಿ.ಪಂ ಸದಸ್ಯ ವೆಂಕಟೇಶ್ ಹಾಗೂ ಹಾಲಿ ಜಿ.ಪಂ ಸದಸ್ಯೆ ಸರಿತಾ ಪೂಣಚ್ಚರವರ ನಡುವೆ ಮಾತಿನ ಚಕಮಕಿ ನಡೆದು ಗೊಂದಲ, ಕೋಲಾಹಲ ನಡೆದು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವ ಮೂಲಕ ಭಿನ್ನಮತ ಬಹಿರಂಗಗೊಂಡಿತ್ತು. ಇದಾದ ನಂತರ ಒಂದು ಬಾರಿಯೂ ಕೂಡ ಕಾಂಗ್ರೆಸ್ ಪಕ್ಷದ ಸಭೆ ನಡೆಯಲಿಲ್ಲ ಹಾಗೂ ಭಿನ್ನಮತ ಸಮಸ್ಯೆ ಬಗೆಹರಿದಿಲ್ಲ.

ಪಂಚಾಯಿತಿ ಅಧ್ಯಕ್ಷ ಎಂ.ಕೆ ಮಣಿರವರ ನಿಲುವು ಏನು ?

ಸಿದ್ದಾಪುರ ಗ್ರಾಮ ಪಂಚಾಯಿತಿ ಹಾಲಿ ಅಧ್ಯಕ್ಷ ಎಂ.ಕೆ ಮಣಿ ಈ ಹಿಂದೆ ಜನತಾದಳ ಪಕ್ಷದಲ್ಲಿ ಸುಮಾರು ವರ್ಷ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು 2 ಬಾರಿ ಗ್ರಾಮ ಪಂಚಾಯಿತಿಗೆ ಆಯ್ಕೆ ಆಗಿದ್ದಾರೆ.ಆದರೆ ಕಳೆದ 2 ವರ್ಷಗಳ ಹಿಂದೆ ಸಿದ್ದಾಪುರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮಣಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡರು. ಆದರೆ ಕಾಂಗ್ರೆಸ್ ಪಕ್ಷದಲ್ಲೇ ಬಿರುಕು ಕಾಣಿಸಿಕೊಂಡಾಗ ಪಕ್ಷದ ಬೆಂಬಲಿತ ಸದಸ್ಯರುಗಳೇ ತನ್ನ ರಾಜೀನಾಮೆ ಕೇಳುತ್ತಿದ್ದಾರೆಂದು ಆರೋಪ ಹೊರಿಸಿ ತಾನು ಇನ್ನು ಮುಂದೆ ಅಧ್ಯಕ್ಷನಾಗಿ ಮುಂದುವರಿಯುವದಿಲ್ಲ ಎಂದು ಅಸಹಾಯಕತೆ ತೋಡಿಕೊಂಡು ತಾನು ಈಗಾಗಲೇ ರಾಜೀನಾಮೆಯನ್ನು ನೀಡಿರುವದಾಗಿ ಮಾಧ್ಯಮದ ಮುಂದೆ ಹೊರಗೆಡವಿ ನಂತರ ಒಂದು ವಾರಗಳ ಬಳಿಕ ರಾಜೀನಾಮೆಯನ್ನು ಹಿಂಪಡೆದರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಉಸಿರುಕಟ್ಟಿದ ವಾತಾವರಣದಲ್ಲಿ ಮುಂದುವರಿಯುತ್ತಿದ್ದ ಬೆನ್ನಲ್ಲೇ ಮಡಿಕೇರಿಯಲ್ಲಿ ಇತ್ತೀಚೆಗೆ ಮಾಜಿ ಸಂಸದ ಅಡಗೂರು ವಿಶ್ವನಾಥ್‍ರವರು ಕರೆದ ಸಭೆಯಲ್ಲಿ ಪಾಲ್ಗೊಂಡ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರ ನಡುವೆ ಪಾಲ್ಗೊಂಡಿದ್ದು ಜಿಲ್ಲಾ ಕಾಂಗ್ರೆಸಿಗರಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲದೆ ಭಾನುವಾರ ಸಿದ್ದಾಪುರದಲ್ಲಿ ನಡೆದ ಯುವ ಕಾಂಗ್ರೆಸ್ ಪರಿಸರ ಜಾಗೃತಿ ಜಾಥಾಕ್ಕೆ ಜಿಲ್ಲಾಧ್ಯಕ್ಷರು ಸೇರಿ ಜಿಲ್ಲೆಯ ಮುಖಂಡರುಗಳು ಭಾಗವಹಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮಣಿ ಗೈರು ಹಾಜರಿದ್ದು ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿಶ್ವನಾಥ್‍ರವರು ಒಂದು ವೇಳೆ ಜೆ.ಡಿ.ಎಸ್ ಸೇರ್ಪಡೆಗೊಂಡರೆ ಮಣಿಯ ನಿಲುವು ಕೂಡ ನಿಗೂಢವಾಗಿದ್ದು ಸಿದ್ದಾಪುರದಲ್ಲಿ ಕೂಡ ಭಿನ್ನಮತದಲ್ಲಿ ಗುರುತಿಸಿಕೊಂಡಿರುವ ಹಾಗೂ ಜೆ.ಡಿ.ಎಸ್.ನಿಂದ ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದೆ ಸೇರ್ಪಡೆಗೊಂಡಿದ್ದವರ ಪೈಕಿ ಕೆಲವರು ಜೆ.ಡಿ.ಎಸ್ ಸೇರುವ ಬಗ್ಗೆ ಆಪ್ತವಲಯಗಳಲ್ಲಿ ಚರ್ಚೆ ನಡೆಸಿದ್ದಾರೆ ಎಂಬ ಸುದ್ದಿ ಹರಡಿದೆ. ಒಂದು ವೇಳೆ ಅಧ್ಯಕ್ಷರು ಸೇರಿ ಕೆಲವು ಸದಸ್ಯರುಗಳು ಜೆ.ಡಿ.ಎಸ್.ಗೆ ಸೇರ್ಪಡೆಗೊಂಡಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ರಾಜಕೀಯ ಬದಲಾವಣೆ ಹೆಚ್ಚಾಗುವ ಸಾಧ್ಯತೆ ಇದ್ದು ಮುಂದೆ ಯಾವ ರೀತಿಯ ರಾಜಕೀಯ ತಿರುವು ಪಡೆಯಬಹುದೆಂದು ಕಾದುನೋಡಬೇಕಿದೆ.