ಮಡಿಕೇರಿ, ಜೂ. 23: ಸೂಕ್ಷ್ಮ ಪರಿಸರ ವಲಯ ಪ್ರದೇಶ ಘೋಷಣೆಗೆ ಸಂಬಂಧಿಸಿದಂತೆ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳು ತಮ್ಮ ಪ್ರಭಾವವನ್ನು ಬಳಸುವ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲಿ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಡಾ. ಇ.ರಾ. ದುರ್ಗಾಪ್ರಸಾದ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ಷ್ಮ ಪರಿಸರ ವಲಯ ಘೋಷಣೆಯ ವಿಚಾರದಲ್ಲಿ ನಿರಂತರ ಸುಳ್ಳು ಹೇಳುವ ಮೂಲಕ ಬಿಜೆಪಿ ಕೊಡಗಿನ ಜನರನ್ನು ವಂಚಿಸುತ್ತಲೇ ಬಂದಿದೆ ಎಂದು ಆರೋಪಿಸಿದರು. ಹಲವು ಬಾರಿ ಶಾಸಕರುಗಳಾಗಿ ಆಯ್ಕೆಯಾಗಿರುವ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳು ಬಿಜೆಪಿಯಲ್ಲಿ ಪ್ರಭಾವಿಗಳು ಎನಿಸಿಕೊಂಡಿದ್ದಾರೆ. ಈ ಪ್ರಭಾವವನ್ನು ಕೇಂದ್ರದ ಮೇಲೆ ಬೀರುವ ಮೂಲಕ ಜನರಿಗೆ ನ್ಯಾಯ ಒದಗಿಸುವ ಪ್ರಯತ್ನವನ್ನು ಯಾಕೆ ಮಾಡಬಾರದು ಎಂದು ಅವರು ಪ್ರಶ್ನಿಸಿದರು.

ರಾಜ್ಯ ಸರಕಾರ ಸೂಕ್ಷ್ಮ ಪರಿಸರ ವಲಯದ ಪ್ರಸ್ತಾಪವನ್ನು ವಿರೋಧಿಸಿ ಕೇಂದ್ರಕ್ಕೆ ಸರಿಯಾದ ರೀತಿಯಲ್ಲೇ ವರದಿಯನ್ನು ಸಲ್ಲಿಸಿದೆ. ಆದರೆ ಸರಿಯಾದ ವರದಿಯನ್ನು ನೀಡಿಲ್ಲವೆಂದು ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವ ಮೂಲಕ ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ, ಅಲ್ಲದೆ ಜನರ ಹಾದಿ ತಪ್ಪಿಸುತ್ತಿದೆ. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೇತೃತ್ವದ ಡಾ. ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ರಾಜ್ಯ ಸರಕಾರದ ನ್ಯೂನತೆಗಳನ್ನು ಸರಿಪಡಿಸಿ ತಾನೇ ಆಕ್ಷೇಪಣೆ ಸಲ್ಲಿಸುವದಾಗಿ ತಿಳಿಸಿತ್ತು. ಈ ರೀತಿ ಸಲ್ಲಿಸಿದ ಆಕ್ಷೇಪಣೆಗೆ ಕೇಂದ್ರ ಸರಕಾರ ನೀಡಿದ ಉತ್ತರವೆಂದರೆ 2017 ಫೆ. 27 ರಂದು ತಲಕಾವೇರಿ ವನ್ಯಧಾಮವನ್ನು ಸೂಕ್ಷ್ಮ ಪರಿಸರ ವಲಯ ಪ್ರದೇಶವೆಂದು ಘೋಷಿಸಿರುವದೇ ಆಗಿದೆ ಎಂದು ದುರ್ಗಾಪ್ರಸಾದ್ ಟೀಕಿಸಿದರು.

ಶಾಸಕರುಗಳು ಪ್ರತಿನಿಧಿಸುವ ಪಕ್ಷದ ನೇತೃತ್ವದ ಸರಕಾರವೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಕೊಡಗು ಜಿಲ್ಲೆಯ ಜನರು ನೀಡಿದ ಆಕ್ಷೇಪಣೆಗೆ ನ್ಯಾಯ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ವರ್ಷದ ಹಿಂದೆಯೇ ಕರಡು ಅಧಿಸೂಚನೆಯ ಮಾಹಿತಿ ಶಾಸಕರುಗಳಿಗೆ ದೊರೆತಿದ್ದರೂ ಮೌನಕ್ಕೆ ಶರಣಾಗಿದ್ದರು. ಪರಿಸರವಾದಿಗಳ ವಿರುದ್ಧ ಗುಡುಗಿದ್ದ ನಾಯಕರುಗಳು ಪರಿಸರವಾದಿಗಳ ಪ್ರಭಾವ ಕಾರ್ಯಗತವಾಗುತ್ತಿದ್ದರೂ ಸುಮ್ಮನಿದ್ದಾರೆ. ಸೂಕ್ಷ್ಮ ಪರಿಸರ ವಲಯದ ವಿಚಾರದಲ್ಲಿ ರಾಜ್ಯ ಸರಕಾರಕ್ಕೆ ಯಾವದೇ ಸರ್ವಾಧಿಕಾರವಿಲ್ಲ. ಕೇಂದ್ರ ಸರಕಾರವೇ ಇದಕ್ಕೆ ಹೊಣೆಯಾಗಿದ್ದು, ಜಿಲ್ಲೆಯ ಬಿಜೆಪಿ ಮಂದಿ ತಮ್ಮ ಜವಾಬ್ದಾರಿಯನ್ನು ಅರಿತು ಒತ್ತಡ ಹೇರುವ ಅಗತ್ಯವಿದೆ ಎಂದು ದುರ್ಗಾಪ್ರಸಾದ್ ತಿಳಿಸಿದರು.

ರಾಜ್ಯ ಸರಕಾರ ಸರಿಯಾದ ವರದಿಯನ್ನೇ ಕೇಂದ್ರಕ್ಕೆ ನೀಡಿದ್ದು, ಈ ಬಗ್ಗೆ ಸಮರ್ಥಿಸಿಕೊಳ್ಳಬೇಕಾದ ಕಾಂಗ್ರೆಸ್ಸಿಗರು ಗಾಢ ನಿದ್ದೆಯಲ್ಲಿದ್ದಾರೆ ಎಂದು ದುರ್ಗಾಪ್ರಸಾದ್ ಟೀಕಿಸಿದರು. ಸುಳ್ಳು ಭರವಸೆಗಳ ಮೂಲಕವೇ ಬಿಜೆಪಿ ವಂಚಿಸುತ್ತಾ ಬಂದಿದೆ ಎಂದು ಆರೋಪಿದ ಅವರು, ಕೊಡಗಿನ ಜನ ಬಿಜೆಪಿಯನ್ನು ತಿರಸ್ಕರಿಸಬೇಕೆಂದು ಕರೆ ನೀಡಿದರು.

ಗೋಷ್ಠಿಯಲ್ಲಿ ಸಿಪಿಐಎಂ ಪ್ರಮುಖರಾದ ಎ.ಸಿ. ಸಾಬು ಹಾಗೂ ಹೆಚ್.ಬಿ. ರಮೇಶ್ ಉಪಸ್ಥಿತರಿದ್ದರು.