ಮಡಿಕೇರಿ, ಜೂ.24 : ದೇಶದ ಸಂವಿಧಾನಕ್ಕೆ ಬದ್ಧವಾಗಿ ದುರ್ಬಲರ ಏಳಿಗೆಗಾಗಿ ರಾಜ್ಯದಲ್ಲಿ ಜಾರಿಯಲ್ಲಿರುವ ಮೀಸಲಾತಿ ಮತ್ತು ಕೆಲವು ಉಚಿತ ಯೋಜನೆಗಳನ್ನು ಸಂಸದ ಅನಂತಕುಮಾರ್ ಹೆಗಡೆ ಅವರು ಕೀಳಾಗಿ ಕಂಡಿದ್ದಾರೆ ಎಂದು ಆರೋಪಿಸಿರುವ ಐಎನ್‍ಟಿಯುಸಿ ಸಂಘಟನೆ, ಜೂ.27 ರಂದು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಸಂಸದ ಅನಂತಕುಮಾರ್ ಹೆಗಡೆ ಅವರು ತಾ.23 ರಂದು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೀಸಲಾತಿ ಮತ್ತು ಕೆಲವು ಉಚಿತ ಸೌಲಭ್ಯಗಳನ್ನು ಪಡೆಯುವ ವರ್ಗದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.

ತಕ್ಷಣ ಅನಂತಕುಮಾರ್ ಹೆಗಡೆ ಬೇಷರತ್ ಕ್ಷಮೆ ಯಾಚಿಸದಿದ್ದಲ್ಲಿ ತಾ.27 ರಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವದು ಎಂದರು. ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಅನಂತಕುಮಾರ್ ವಿರುದ್ಧ ದಲಿತ ನಿಂದನೆ ದೂರು ದಾಖಲಿಸುವದಾಗಿ ತಿಳಿಸಿದರು.

ಐಎನ್‍ಟಿಯುಸಿಯ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ನಾಪಂಡ ಮುದ್ದಪ್ಪ ಮಾತನಾಡಿ, ದೇಶದ ಕಟ್ಟಕಡೆಯ ವ್ಯಕ್ತಿಯವರೆಗೂ ಎಲ್ಲಾ ಮೂಲಭೂತ ಹಕ್ಕುಗಳನ್ನು ತಲುಪಿಸಬೇಕೆನ್ನುವ ಉದ್ದೇಶದಿಂದ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಆದರೆ ವಿವೇಕವಿಲ್ಲದ ಸಂಸದರೊಬ್ಬರನ್ನು ಕರೆತಂದು ಮೀಸಲಾತಿ ವಿರುದ್ಧ ಬಾಷಣ ಮಾಡಿಸುವ ದುಸ್ಥಿತಿ ಕೊಡಗು ಜಿಲ್ಲಾ ಬಿಜೆಪಿಗೆ ಬಂದಿರುವದು ದುರಂತವೆಂದು ಟೀಕಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ, ಐಎನ್‍ಟಿಯುಸಿಯ ಜಿಲ್ಲಾಧ್ಯಕ್ಷ ಕೆ.ಟಿ.ಹಮೀದ್, ಯುವ ಘಟಕದ ಅಧ್ಯಕ್ಷ ಪವನ್ ತಿಮ್ಮಯ್ಯ ಹಾಗೂ ನಗರಾಧ್ಯಕ್ಷ ಮುನೀರ್ ಮಾಚರ್ ಉಪಸ್ಥಿತರಿದ್ದರು.