ಮಡಿಕೇರಿ, ಜೂ. 23: ಉತ್ತಮ ವಿದ್ಯಾಭ್ಯಾಸ ಪಡೆದಲ್ಲಿ ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಮಡಿಕೇರಿಯ ಅಂಜುಮಾನ್ ತಂಜೀಮೆ ಮಿಲ್ಲತ್ ಸಂಸ್ಥೆಯ ಸ್ಥಾಪಕಾಧ್ಯಕ್ಷ, ಕಾಫಿ ಬೆಳೆಗಾರ ಎಸ್.ಎಂ. ಸಈದ್ ಅವರು ಅಭಿಪ್ರಾಯಪಟ್ಟರು.

ಸಂಸ್ಥೆಯ ವತಿಯಿಂದ ನಗರದ ಕೂರ್ಗ್ ಕಮ್ಯುನಿಟಿ ಹಾಲ್‍ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಿಲ್ಲೆಯ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೋಷಕರು ತಮ್ಮ ಮಕ್ಕಳಿಗೆ ವಿದ್ಯೆ ಕೊಡಿಸುವದನ್ನು ಯಾವದೇ ಕಾರಣಕ್ಕೂ ಅರ್ಧಕ್ಕೆ ಮೊಟಕುಗೊಳಿಸಬಾರದು ಎಂದ ಸಈದ್ ಅವರು, ಸರ್ಕಾರದಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿದ್ಯಾರ್ಥಿ ವೇತನ ಮುಂತಾದ ಸವಲತ್ತುಗಳನ್ನು ಕಾಲ ಕಾಲಕ್ಕೆ ಪಡೆದುಕೊಳ್ಳುವಂತಾಗಬೇಕು ಎಂದರು.

ಅಂಜುಮಾನ್ ಸಂಸ್ಥೆಯನ್ನು ಅಭಿವೃದ್ಧಿಪಡಿಸಿ ಮತ್ತಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದ ಸಈದ್, ಕಳೆದ 50 ವರ್ಷಗಳಲ್ಲಿ ಸಂಸ್ಥೆಯಿಂದ ಉಚಿತ ಪುಸ್ತಕ ಪಡೆದು ಉತ್ತಮ ಬದುಕು ರೂಪಿಸಿಕೊಂಡವರು ಸಂಸ್ಥೆಗೆ ನೆರವಾದಲ್ಲಿ ಹೆಚ್ಚಿನವರಿಗೆ ಸಹಕಾರಿ ಆಗಲಿದೆ ಎಂದರು. ಮತ್ತೋರ್ವ ಮುಖ್ಯ ಅತಿಥಿ ನಗರದ ವಕೀಲ ಕೆ.ಎಂ. ಕುಂಞಬ್ದುಲ್ಲ ಅವರು ಮಾತನಾಡಿ, ಭವಿಷ್ಯದಲ್ಲಿ ವಿದ್ಯೆಯೊಂದೇ ನಮ್ಮನ್ನು ಕಾಪಾಡಬಲ್ಲದು ಎಂದರು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅಂಜುಮಾನ್ ಸಂಸ್ಥೆಯ ಕೊಡುಗೆ ಶ್ಲಾಘನೀಯ ಎಂದು ಅವರು ಹೇಳಿದರು.

ಅರೆಕಾಡು ಜಿಹೆಚ್‍ಪಿ ಶಾಲೆಯ ಮುಖ್ಯ ಶಿಕ್ಷಕ ವಿಜಯ್, ಮೂಡಾ ಸಂಸ್ಥೆಯ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್, ಪತ್ರಕರ್ತ ಎಂ.ಇ. ಮಹಮದ್ ಇವರುಗಳು ಮಾತನಾಡಿದರು. ನಗರದ ಕೈಗಾರಿಕೋದ್ಯಮಿ ತಾಹಿರ್, ಚಿಕ್ಕಮಗಳೂರು ಜಿಲ್ಲಾ ವಕ್ಫ್ ಮಂಡಳಿ ಉದ್ಯೋಗಿ ಸಯ್ಯದ್, ಮಡಿಕೇರಿ ನಗರಸಭೆಯ ಉದ್ಯೋಗಿ ಎಂ.ಎ. ಬಶೀರ್ ಅಹಮದ್, ನಿಸಾರ್ ಅಹಮದ್, ಅಸ್ಲಂ ಮುಂತಾದವರು ಉಪಸ್ಥಿತರಿದ್ದರು.

ಏಳನೇ ತರಗತಿಯಿಂದ ಪದವಿವರೆಗೂ ಕಲಿಯುವ ಜಿಲ್ಲೆಯ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ನಗರದ ಮದೀನಾ ಮಸೀದಿಯ ಧರ್ಮಗುರು ಮೌಲಾನ ಅಬ್ದುಲ್ ಹಕೀಂ ಪ್ರಾರ್ಥನಾ ಕಾರ್ಯ ನೆರವೇರಿಸಿದರು. ಸಂಸ್ಥೆಯ ಕಾರ್ಯದರ್ಶಿ ಎಂ.ಹೆಚ್. ಮೊಹಮದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.