ಶ್ರೀಮಂಗಲ, ಜೂ. 27: ಭಾರತೀಯ ಕಿಸಾನ್ ಸಂಘದ ವತಿಯಿಂದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಕಂಡುಬರುತ್ತಿರುವ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಪೊನ್ನಂಪೇಟೆ ಅರಣ್ಯ ಇಲಾಖೆಗೆ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಯಿತು.ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಅವರ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಗೆ ಪೊನ್ನಂಪೇಟೆ ವರ್ತಕರ ಸಂಘದ ಅಧ್ಯಕ್ಷ ಸಿ.ಕೆ. ಉತ್ತಪ್ಪ ಚಾಲನೆ ನೀಡಿದರು.

ಪೊನ್ನಂಪೇಟೆಯ ವಿರಾಜಪೇಟೆ ತಾಲೂಕು ಭಾರತೀಯ ಕಿಸಾನ್ ಸಂಘದ ಕಚೇರಿಯಿಂದ ನೂರಾರು ಕಾರ್ಯಕರ್ತರು

(ಮೊದಲ ಪುಟದಿಂದ) ಮತ್ತು ಬಿರುನಾಣಿÀ ಕೆದಮುಳ್ಳೂರು, ಬಿ.ಶೆಟ್ಟಿಗೇರಿಯಿಂದ ಮಾಲ್ದಾರೆವರೆಗಿನ ರೈತರು ಪಾಲ್ಗೊಂಡಿದ್ದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜೀವ್ ಬೋಪಯ್ಯ, ಜಿಲ್ಲೆಯಲ್ಲಿ ಪ್ರಸ್ತುತ ರೈತರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಆನೆ ಧಾಳಿಯಿಂದ ಸಾವನ್ನಪ್ಪುತ್ತಿದ್ದಾರೆ. ರೈತರು ಬೆಳೆದ ಫಸಲನ್ನು ಕಾಡು ಪ್ರಾಣಿಗಳು ನಾಶ ಮಾಡುತ್ತಿದ್ದು, ಇದರೊಂದಿಗೆ ಹುಲಿ ಧಾಳಿಯಿಂದ ಸಾಕಷ್ಟು ದನ, ಕರುಗಳನ್ನು ರೈತರು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಶಾಶ್ವತ ಪರಿಹಾರವನ್ನು ಅರಣ್ಯ ಇಲಾಖೆ ಮತ್ತು ಸರಕಾರ ಮಾಡಬೇಕಾಗಿದೆ. ಉತ್ತಮ ರೀತಿಯ ಕಂದಕ ನಿರ್ಮಾಣ, ಹಾಗೂ ರೈಲ್ವೆ ಕಂಬಿಗಳನ್ನು ಅಳವಡಿಸಬೇಕಾಗಿದೆ. ಅರಣ್ಯದಲ್ಲಿ ಅವುಗಳಿಗೆ ಬೇಕಾದ ಆಹಾರ ನೀರನ್ನು ಒದಗಿಸುವ ಕೆಲಸವನ್ನು ಇಲಾಖೆ ಮಾಡಬೇಕಾಗಿದೆ. ಇದನ್ನು ಇಲಾಖೆ ಮಾಡಲು ಸಾಧ್ಯವಾಗದಿದ್ದರೆ, ಕಿಸಾನ್ ಸಂಘದಿಂದ ಅರಣ್ಯದಲ್ಲಿ ಕಾಡು ಪ್ರಾಣಿಗಳಿಗೆ ಬೇಕಾದ ಆಹಾರ ಧಾನ್ಯಗಳನ್ನು ಬಿತ್ತಲು ಅನುಮತಿ ನೀಡುವಂತೆ ಆಗ್ರಹಿಸಿದರು.

ಆನೆ ಧಾಳಿಯಿಂದ ಸತ್ತರೆ ಇಲಾಖಾ ವತಿಯಿಂದ ರೂ. 5 ಲಕ್ಷ ಹಣ ನೀಡುತ್ತಿದ್ದು, ಆ ಹಣವನ್ನು ಇಲಾಖೆ ಮತ್ತು ಸರಕಾರವೇ ಇಟ್ಟುಕೊಳ್ಳಲಿ. ಉಪದ್ರವನ್ನು ನೀಡುತ್ತಿರುವ ಆನೆಗಳಿಗೆ ಗುಂಡಿಟ್ಟುಕೊಲ್ಲುವ ಅನುಮತಿಯನ್ನು ಇಲಾಖೆ ರೈತರಿಗೆ ನೀಡಲಿ. ಸರಕಾರದಿಂದ ಈಗಾಗಲೇ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು 150 ಕೋಟಿಗಳ ಅನುದಾನ ಬಿಡುಗಡೆಯಾಗಿದ್ದರೂ ಸಮರ್ಪಕವಾದ ಕೆಲಸವನ್ನು ಮಾಡಿಲ್ಲ. ಈ ಹಣ ದುರುಪಯೋಗವಾಗಿದೆಯೇ ಎಂಬ ಗುಮಾನಿ ಇದೆ ಎಂದು ಹೇಳಿದರು.

ಕಾಫಿ ರಾಷ್ಟ್ರೀಯ ಪಾನೀಯ ಹೋರಾಟ ಸಮಿತಿಯ ಸಂಚಾಲಕ ಮಾಚಿಮಾಡ ರವೀಂದ್ರ ಮಾತನಾಡಿ, ಕಾಡಾನೆ ಮತ್ತು ಕಾಡು ಪ್ರಾಣಿಗಳಿಂದ ರೈತರ ಬದುಕು ನರಕ ಸದೃಶ್ಯವಾಗಿದ್ದು, ಮುಂದಿನ ಒಂದು ತಿಂಗಳ ಒಳಗಡೆ ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲೆಯ ವಿವಿಧ ಭಾಗಗಳಿಂದ ರೈತರನ್ನು ಒಂದುಗೂಡಿಸಿ, ದೆಹಲಿಯ ಮಟ್ಟದಲ್ಲಿ ನಮ್ಮ ಪ್ರತಿಭಟನೆ ನಡೆದಂತಹ ರೀತಿಯಲ್ಲೇ ಬೃಹತ್ ಪ್ರತಿಭಟನೆಯನ್ನು ಮಾಡಲಾಗುವದು ಎಂದು ಎಚ್ಚರಿಸಿದರು.

ಈ ಸಂದÀರ್ಭ ಕಾಡಾನೆ ಹಾವಳಿಯಿಂದ ನೊಂದ ಕರಿನೆರವಂಡ ರಮೇಶ್ ಮಾತನಾಡಿ, ಪಾಲಂಗಾಲ ಕದನೂರು ಭಾಗದಲ್ಲಿ 20 ರಿಂದ 25 ಆನೆಗಳು ಬೀಡುಬಿಟ್ಟಿದ್ದು, 2 ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಲಾಖೆ ವತಿಯಿಂದ ಮಾಡುತ್ತಿರುವ ಆನೆ ಕಂದಕ ಉತ್ತಮವಾಗಿಲ್ಲ. ಇದರಲ್ಲಿ ಬಂಡೆ ಮತ್ತು ಮಣ್ಣುಗಳು ತುಂಬಿದ್ದು, ಆನೆಗಳು ಸರಾಗವಾಗಿ ನಾಡಿಗೆ ದಾಳಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ತಂಬಿ ನಾಣಯ್ಯ ಮಾತನಾಡಿ, ಆನೆಗೆ ದಿನವೊಂದಕ್ಕೆ 250 ಕೆ.ಜಿ. ಆಹಾರ ಬೇಕಾಗಿದ್ದು 40 ಚದರ ಅಡಿ ಓಡಾಡಬೇಕಾಗಿದೆ. ಆದರೆ ಅರಣ್ಯ ಇಲಾಖೆ ಇದನ್ನು ಗಮನದಲ್ಲಿಟ್ಟುಕೊಳ್ಳದೆ ಅರಣ್ಯದಲ್ಲಿ ಇವುಗಳಿಗೆ ಬೇಕಾದಂತಹ ಆಹಾರಗಳನ್ನು ಬೆಳೆಸುವ ಬದಲು ತೇಗ ಮರಗಳನ್ನು ನೆಡುತ್ತಿರುವದು ಸರಿಯಲ್ಲ. ನೆಟ್ಟಿರುವ ತೇಗ ಮರಗಳನ್ನು ಕಡಿದು ಮಾರಾಟ ಮಾಡಿ, ರೈತರ ಸಾಲ ಮನ್ನಾ ಮಾಡಿ ಕಾಡಾನೆ ಹಾವಳಿಯಿಂದ ಅನುಭವಿಸುವ ನಷ್ಟವನ್ನು ಸರಿದೂಗಿಸಲಿ ಎಂದು ಆಗ್ರಹಿಸಿದರು.

ಬೊಪ್ಪಂಡ ವಸಂತ್ ಮಾತನಾಡಿ, ನಾಂಗಾಲ ಭಾಗದಲ್ಲಿ ಆನೆ ಕಂದಕಗಳಲ್ಲಿ ನಾಯಿಗಳು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಡು ಪ್ರಾಣಿಗಳಿಂದ ಬೆಳೆ ನಾಶವಾದರೆ ಹತ್ತು ಸಾವಿರಕ್ಕೆ ಸಾವಿರ ರೂ. ಪರಿಹಾರ ನೀಡುತ್ತಿದ್ದಾರೆ. ಆದರೆ ಈ ಪರಿಹಾರಕ್ಕೆ ಸಲ್ಲಿಸುವ ಅರ್ಜಿ ಮತ್ತು ರೈತರ ಓಡಾಟಕ್ಕೆ ಇದಕ್ಕಿಂತಲೂ ಹೆಚ್ಚು ಮೊತ್ತ ಖರ್ಚಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವರೊಂದಿಗೆ ಬಾಡಗ ನಾಲ್ಕೇರಿ ಗ್ರಾಮದ ಗುಡಿಯಂಗಡ ನಾಚಪ್ಪ. ಅಮ್ಮತ್ತಿ ಕಾರ್ಮಾಡು ಗ್ರಾಮದಿಂದ ಐನಂಡ ಇಂದಿರಾ ಅಯ್ಯಪ್ಪ, ಬಾಳಾಜಿ ಕಿರುಗೂರು ಗ್ರಾಮದ ವತಿಯಿಂದ ಚೆರಿಯಪಂಡ ರಾಜ ನಂಜಪ್ಪ ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸಿದರು.

ಈ ಸಂದÀರ್ಭ ಪ್ರತಿಭಟನಾಗಾರರ ಕರೆಗೆ ಓಗೊಟ್ಟು, ಸಿ.ಸಿ.ಎಫ್ ಮನೋಜ್ ಕುಮಾರ್ ಅವರ ಆದೇಶದ ಮೇರೆಗೆ ಸ್ಥಳದಲ್ಲಿ ಹಾಜರಿದ್ದ ಡಿ.ಎಫ್.ಓ. ಮುಕ್ಕಾಟಿರ ಜಯಾ ಪ್ರತಿಭಟನಾಗಾರರಿಂದ ಮನವಿಯನ್ನು ಸ್ವೀಕಾರ ಮಾಡಿ ಮಾತನಾಡಿ, ಜಿಲ್ಲೆಯಲ್ಲಿ ಕಾಡಾನೆ ಹಾವಳಿಯ ಸಮಸ್ಯೆ ಇಲಾಖೆಗೂ ಅರಿವಿದ್ದು ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಈಗಾಗಲೆ ಸಾಕಷ್ಟು ಪೂರ್ವಭಾವಿ ಯೋಜನೆಗಳನ್ನು ಸಿದ್ಧಪಡಿಸಲಾಗಿದ್ದು, ಈ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ತಾ.30 ರಂದು 3 ಗಂಟೆಗೆ ಮಡಿಕೇರಿಯ ಅರಣ್ಯ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಮತ್ತು ನಾಗರಹೊಳೆ, ಮಾಕುಟ್ಟ, ಭ್ರಹ್ಮಗಿರಿ ವಲಯದ ಪ್ರತಿ ಊರುಗಳಿಂದ ತಲಾ ಇಬ್ಬರು ರೈತ ಮುಖಂಡರನ್ನು ಒಂದು ಗೂಡಿಸಿ ಆಯಾಯ ಭಾಗದ ಸಮಸ್ಯೆಗಳನ್ನು ಪರಿಶೀಲಿಸಿ ಶಾಶ್ವತ ಪರಿಹಾರವನ್ನು ಮಾಡಲಾಗುವದು ಎಂದು ಪ್ರತಿಭಟನಾಗಾರರಿಗೆ ಭರವಸೆಯನ್ನು ನೀಡಿದರು.

ಈ ಸಂದರ್ಭ ಎ.ಸಿ.ಎಫ್ ಶ್ರೀಪತಿ, ಆರ್.ಎಫ್.ಒಗಳಾದ ಉತ್ತಪ್ಪ, ವೀರೇಂದ್ರ ಹಾಗೂ ಅಧಿಕಾರಿಗಳು ಹಾಜರಿದ್ದರು.