ಮಡಿಕೇರಿ, ಜೂ. 27: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕಸವಿಲೇವಾರಿ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಸರಿತಾ ಪೂಣಚ್ಚ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಪೀಠದೆದುರು ಧರಣಿ ಕುಳಿತ ಪ್ರಸಂಗ ನಡೆಯಿತು.

ಹಲವು ಸಮಯಗಳಿಂದ ತಲೆದೋರಿದ್ದ ಕಸವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ಪರಿಹಾರ ಕಂಡು ಹಿಡಿಯುವದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದರೂ ಏನು ಕ್ರಮ ಸಾಧ್ಯವಾಗಿಲ್ಲ. ಈ ಹಿಂದೆ ಕಸವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಸಿದ್ದಾಪುರ ಬಂದ್ ಹೋರಾಟದ ಎಚ್ಚರಿಕೆ ನೀಡಿದ ಸಂದರ್ಭ ಜಿಲ್ಲಾಧಿಕಾರಿ ವ್ಯವಸ್ಥೆ ಮಾಡುವ ಭರವಸೆ ನೀಡಿ 75 ಸೆಂಟ್ ಜಾಗ ಗುರುತಿಸಿ ಪತ್ರ ಮುಖೇನ ತಿಳಿಸಿದ್ದರು. ಇದೇ ಸಂದರ್ಭ ಜಿಲ್ಲಾಧಿಕಾರಿ ಚೀಫ್ ಸೆಕ್ರೆಟರಿ ಅವರಿಗೆ ಪತ್ರ ಬರೆದು ಬೇರೆ ಉಪಯೋಗಕ್ಕೂ ಜಾಗವನ್ನು ಕೇಳಿ ಗೊಂದಲ ಮೂಡಿಸಿದ್ದಾರೆ.

ಕಸವಿಲೇವಾರಿಯಾಗದೆ ಚಿಕೂನ್ ಗುನ್ಯಾ, ಡೆಂಗ್ಯೂನಂತಹ ಕಾಯಿಲೆ ತಲೆದೋರಲು ಕಾರಣವಾಗಿದೆ. ಸಮಸ್ಯೆ ಪರಿಹಾರಕ್ಕೆ ಇದೇ ಸರಿಯಾದ ಸಮಯವೆಂದು ಹೇಳಿದ ಸದಸ್ಯೆ ಸರಿತಾ ಪೂಣಚ್ಚ ಧರಣಿಗೆ ಮುಂದಾಗಿ ಅಧ್ಯಕ್ಷರ ಪೀಠದೆದುರು ಕುಳಿತರು. ಸಭೆ ಮುಂದುವರೆದು ಮುಕ್ತಾಯಕಂಡರೂ ಅಧ್ಯಕ್ಷರು, ಸದಸ್ಯರೆಲ್ಲ ನಿರ್ಗಮಿಸಿದರೂ, ಸರಿತಾ ಪೂಣಚ್ಚ ಅಲ್ಲಿಂದ ತೆರಳಲಿಲ್ಲ. ಇವರಿಗೆ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಮಣಿ ಸೇರಿದಂತೆ ಇತರರು ಸಾಥ್ ನೀಡಿದರು. ಬಳಿಕ ಸದಸ್ಯ ಪಿ.ಎಂ. ಲತೀಫ್, ಸಿಇಓ ಅವರನ್ನು ಕರೆದುಕೊಂಡು ಬಂದು ಸಮಸ್ಯೆ ಪರಿಹಾರಕ್ಕೆ ಮುಂದಾದರು. ಈ ಸಂದರ್ಭ ಸಿಇಓ ಚಾರುಲತಾ ಸೋಮಲ್ ಮಾತನಾಡಿ, ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಎಲ್ಲೆಡೆ ಸಮಸ್ಯೆ ಇದೆ. ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪತ್ರ ಮುಖೇನ ವ್ಯವಹರಿಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಸರಿತಾ ಪೂಣಚ್ಚ ಧರಣಿಯನ್ನು ಹಿಂತೆಗೆದುಕೊಂಡರು.