ಸೋಮವಾರಪೇಟೆ, ಜೂ. 27: ಉಡುಪಿಯ ಕೃಷ್ಣ ಮಠದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯ ದವರಿಗೆ ಪೇಜಾವರ ಶ್ರೀಗಳು ಇಫ್ತಾರ್ ಕೂಟ ಆಯೋಜಿಸಿದ್ದುದು ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಸಂಸದ ಪ್ರತಾಪ್ ಸಿಂಹ ಅವರು ಪೇಜಾವರರ ಪರವಾಗಿ ನಿಂತಿದ್ದಾರೆ.ಪೇಜಾವರ ಶ್ರೀಗಳ ಕಾರ್ಯಕ್ಕೆ ಹಿಂದೂ ಸಮಾಜದಲ್ಲೇ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಸಂಸದ ಪ್ರತಾಪ್ ಸಿಂಹ ಅವರು, ಪೇಜಾವರರ ಕಾರ್ಯ ಸಮಾಜಕ್ಕೆ ಮೇಲ್ಪಂಕ್ತಿಯಾಗಿದ್ದು, ಮುಸ್ಲಿಂ ಸಮುದಾಯದಲ್ಲಿ ಸದಭಿಪ್ರಾಯ ಮೂಡಲು ಇಂತಹ ಕಾರ್ಯ ಸಹಕಾರಿ ಯಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.

ನಗರದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ದೀಪಾವಳಿ, ಗಣೇಶ ಹಬ್ಬಗಳಲ್ಲಿ ಅವರುಗಳೂ ಸಹ ಭಾಗಿಯಾಗಬಹುದು. ಮಸೀದಿಗಳಿಗೂ ಹಿಂದೂಗಳು ತೆರಳ ಬಹುದಾದ ಅವಕಾಶ ಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಶ್ರೀಗಳು ಚಿಂತನೆ ನಡೆಸಿರಬಹುದು ಎಂದು ಸಂಸದರು ತಿಳಿಸಿದ್ದಾರೆ.

ಪೇಜಾವರರ ಕಾರ್ಯದಲ್ಲಿ ಹುಳುಕು ಹುಡುಕಬಾರದು. ವಿನೂತನ ಪ್ರಯತ್ನಕ್ಕೆ ಅವರು ಮುಂದಾಗಿದ್ದಾರೆ. ಹಿಂದೆ ದಲಿತ ಕೇರಿಗಳಲ್ಲಿ ಪಾದಯಾತ್ರೆ ಮಾಡಿ ಸಮಾನತೆಯ ಸಂದೇಶ ಸಾರಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಮುಸ್ಲಿಂ ಸಮುದಾಯದವರಿಗೆ ಇಫ್ತಾರ್ ಕೂಟ ಆಯೋಜಿಸಿದ್ದಾರೆ. ಇದರೊಂದಿಗೆ ಪ್ರಾರ್ಥನೆಗೆ ಅವಕಾಶವನ್ನೂ ಕಲ್ಪಿಸಿರುವದು ಹಿಂದೂ ಸಮಾಜದ ಉದಾರತೆಯ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.

ಆಹಾರಗಳು ಅವರವರ ವೈಯಕ್ತಿಕ. ಆದರೆ ಗೋವಿನ ಬಗ್ಗೆ ಹಿಂದೂಗಳಿಗೆ ಪೂಜ್ಯ ಭಾವನೆಯಿದೆ. ಇದನ್ನೂ ನಾವುಗಳೂ ಆಗಾಗ್ಗೆ ಹೇಳಿಕೊಂಡೇ ಬಂದಿದ್ದೇವೆ. ಹಿಂದೂ ಸಮಾಜದ ಯತಿವರ್ಯರೇ ಇದೀಗ ಇಂತಹ ಕ್ರಮಕ್ಕೆ ಮುಂದಾಗಿರುವದು ಮುಸಲ್ಮಾನ ಬಾಂಧವರಲ್ಲೂ ಬದಲಾವಣೆಗೆ ಕಾರಣವಾಗಬಹುದು. ಹಿಂದೂಗಳ ಧಾರ್ಮಿಕ ಭಾವನೆ ಯನ್ನು ಘಾಸಿಗೊಳಿಸುವ ಯತ್ನಗಳು ನಿಂತರೆ ಅದಕ್ಕಿಂತ ಒಳ್ಳೆಯ ಬೆಳವಣಿಗೆ ಮತ್ತೊಂದಿಲ್ಲ ಎಂದು ಶ್ರೀಗಳ ಕ್ರಮವನ್ನು ಸಮರ್ಥಿಸಿದರು.

ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರು ಪೇಜಾವರರ ಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್ ಸಿಂಹ, ಹಿಂದೂ ಸಮಾಜದ ಉನ್ನತಿಗೆ ಪೇಜಾವರರ ಕೊಡುಗೆ ಅಪಾರ. ವಿಶ್ವ ಹಿಂದೂ ಪರಿಷತ್‍ನ ಮೂಲಕ ಹಲವಷ್ಟು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ. ಅಯೋಧ್ಯೆ ಚಳುವಳಿಯಲ್ಲೂ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಅವರ ಬದ್ಧತೆ, ರಾಷ್ಟ್ರೀಯತೆಯನ್ನು ಪ್ರಶ್ನಿಸುವಂತಹ ಅರ್ಹತೆ ಯಾರಿಗೂ ಇಲ್ಲ ಎಂದರು.