ಸೋಮವಾರಪೇಟೆ, ಜೂ. 26: ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್‍ನಲ್ಲಿ ಧಾರ್ಮಿಕ ವಿಚಾರಗಳನ್ನು ಚರ್ಚೆಗೆ ಎಳೆತಂದು ಕೊನೆಯಲ್ಲಿ ಹಲ್ಲೆಗೆ ತಿರುಗಿದ ಘಟನೆ ಭಾನುವಾರ ರಾತ್ರಿ ಸೋಮವಾರಪೇಟೆ ಪಟ್ಟಣದಲ್ಲಿ ನಡೆದಿದ್ದು, ವಿಭಿನ್ನ ಕೋಮಿನ ಯುವಕರ ನಡುವೆ ಘರ್ಷಣೆ ಏರ್ಪಟ್ಟಿದ್ದರಿಂದ ನಗರದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.ಘಟನೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಈಗಾಗಲೇ ಮೂವರನ್ನು ವಶಕ್ಕೆ ಪಡೆದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಪೊಲೀಸ್ ಉಪ ಅಧೀಕ್ಷಕರು ನಗರದಲ್ಲಿ ರಾತ್ರಿಯಿಡೀ ಮೊಕ್ಕಾಂ ಹೂಡಿದ್ದರು.

ಘಟನೆಯ ವಿವರ: ನಗರದ ಜನತಾ ಕಾಲೋನಿ ನಿವಾಸಿ, ಅಂಬು ಎಂಬವರ ಮಗ ಅಜೀಂ ಬೇಗ್ ಎಂಬಾತ ಅಜೀಂ ಅಡ್ಡು ಹೆಸರಿನಲ್ಲಿ ಫೇಸ್‍ಬುಕ್ ಖಾತೆ ಹೊಂದಿದ್ದು, ಇದರಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾಗಿ ನಂತರ ಧಾರುಣವಾಗಿ ಸಾವನ್ನಪ್ಪಿದ್ದಾಳೆ. ಇತರ ಸಹೋದರಿಯರು ಎಚ್ಚರದಿಂದಿರಿ, ಇದು ಕೇಸರಿ

(ಮೊದಲ ಪುಟದಿಂದ) ಲವ್ ಜಿಹಾದ್ ಎಂದು ಪೋಸ್ಟ್ ಮಾಡಿದ್ದ.

ಈ ವಿಚಾರದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಹಿಂದೂ ಯುವಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಅಜೀಂ ಅದನ್ನು ಸಮರ್ಥಿಸಿಕೊಂಡಿದ್ದ. ಈ ಬಗ್ಗೆ ಪರಸ್ಪರ ದ್ವೇಷ ಕಾರಿಕೊಂಡಿದ್ದ ‘ಫೇಸ್‍ಬುಕ್ ಗೆಳೆಯರು’ ಏಕವಚನದ ಕೀಳುಮಟ್ಟದ ಪದಗಳಲ್ಲಿ ಬೈದಾಡಿಕೊಂಡಿದ್ದರು. ನಿನ್ನೆ ಮಧ್ಯಾಹ್ನ ಗೋಪಾಲಪುರದ ಪುನೀತ್ ಎಂಬಾತ ಸೋಮವಾರಪೇಟೆ ಪಟ್ಟಣದಲ್ಲಿರುವ ತನ್ನ ಅಂಗಡಿಗೆ ಆಗಮಿಸಿದ ಸಂದರ್ಭ ಅಂಬು ಅವರ ಮಕ್ಕಳಾದ ಅಜೀಂ ಬೇಗ್, ಕರೀಂ ಬೇಗ್, ಜನತಾ ಕಾಲೋನಿಯ ಸಮೀರ್ ಸೇರಿದಂತೆ ಇತರರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪುನೀತ್ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಾದ ನಂತರ ರಾತ್ರಿ 9 ಗಂಟೆಯ ಸಮಯದಲ್ಲಿ ಜನತಾ ಕಾಲೋನಿ ನಿವಾಸಿ ವೀಕ್ಷಿತ್ ಎಂಬಾತ ನಗರದ ಮೇಲಿನ ಪೆಟ್ರೋಲ್ ಬಂಕ್ ಬಳಿ ನಿಂತಿದ್ದಾಗ ಆಗಮಿಸಿದ ಅಜೀಂ ಬೇಗ್, ಕರೀಂ ಬೇಗ್, ಸಮೀರ್ ಸೇರಿದಂತೆ ಇತರರು ಹಳೆ ಘಟನೆಯ ಬಗ್ಗೆ ತಗಾದೆ ತೆಗೆದು ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ವೀಕ್ಷಿತ್ ಅವರ ಕೈಗೆ ಗಂಭೀರ ಗಾಯವಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಗಾಯಾಳುವಿಗೆ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಇದಾದ ನಂತರ ಬೇಳೂರು ನಿವಾಸಿ, ಪ್ರಜ್ವಲ್ ಸೇರಿದಂತೆ ಮತ್ತಿತರರು ಬಜೆಗುಂಡಿಯ ನೌಷಾದ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದು, ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯ ಸೂಕ್ಷ್ಮತೆಯನ್ನು ಅರಿತ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಕತ್ತಿಯಿಂದ ಹಲ್ಲೆ ನಡೆಸಿದ ಆರೋಪಿಗಳಾದ ಕರೀಂ ಬೇಗ್, ಅಜೀಂ ಬೇಗ್ ಹಾಗೂ ಸಮೀರ್‍ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ನಗರದಲ್ಲಿ ನಡೆದಿದ್ದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಮೋಹನ್ ಎಂಬಾತನ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲೂ ಸಹ ಈ ಮೂವರು ಆರೋಪಿಗಳಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ವೇಳೆಗೆ ಸೋಮವಾರಪೇಟೆ ಪಟ್ಟಣಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಡಿವೈಎಸ್‍ಪಿ ಸಂಪತ್ ಕುಮಾರ್ ಅವರುಗಳು ನಗರದಲ್ಲಿ ಮೊಕ್ಕಾಂ ಹೂಡಿದ್ದರು.

ಸದ್ಯ ಪಟ್ಟಣದಲ್ಲಿ 2 ಕೆಎಸ್‍ಆರ್‍ಪಿ ಹಾಗೂ 2 ಡಿಎಆರ್ ತುಕಡಿಗಳು ಬೀಡುಬಿಟ್ಟಿದ್ದು, ಪೊಲೀಸ್ ವೃತ್ತ ನಿರೀಕ್ಷಕ ಪರಶಿವ ಮೂರ್ತಿ, ಠಾಣಾಧಿಕಾರಿ ಶಿವಣ್ಣ ಸೇರಿದಂತೆ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಐಜಿ ವಿಪುಲ್ ಕುಮಾರ್ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರೌಡಿ ಶೀಟರ್‍ಗಳು ಶಾಂತಿಕದಡುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆದ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.