ಗೋಣಿಕೊಪ್ಪಲು, ಜೂ. 27: ಬಲಿಜ ಸಮಾಜದಿಂದ 2ಎ ಮೀಸಲಾತಿಗೆ ಕಳೆದ 4 ವರ್ಷದಿಂದ ನಡೆಸುತ್ತಿರುವ ಹೋರಾಟ ಫಲಪ್ರದವಾ ಗುವ ನಿರೀಕ್ಷೆ ಮೂಡಿಸಿದೆ ಎಂದು ಬಲಿಜ ಸಮಾಜ ವೀರಾಜಪೇಟೆ ತಾಲೂಕು ಮಾಜಿ ಅಧ್ಯಕ್ಷ ನಾರಾಯಣ ಸ್ವಾಮಿ ನಾಯ್ಡು ತಿಳಿಸಿದ್ದಾರೆ.

2013 ರಲ್ಲಿ ವೀರಾಜಪೇಟೆಯಲ್ಲಿ ಬಲಿಜ ಸಮಾವೇಶ ನಡೆಸುವ ಮೂಲಕ ಬಲಿಜ ಸಮಾಜಕ್ಕೆ ರಾಜಕೀಯ ಹಾಗೂ ಉದ್ಯೋಗ ಮೀಸಲಾತಿಯಲ್ಲಿ ಅವಕಾಶ ಸಿಗುವಂತೆ 2ಎ ಮೀಸಲಾತಿಯನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿತ್ತು. ಇದರಂತೆ ಇದೀಗ ಸರಕಾರ ಮೀಸಲಾತಿ ಪ್ರಕಟಿಸುವ ನಿರೀಕ್ಷೆ ಹೊಂದಿದ್ದೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಎಲ್ಲಾ ವರ್ಗದ ಜನಾಂಗದ ಸಹಕಾರದಲ್ಲಿ ಸಮಾವೇಶ ನಡೆಸಿ ಅಂದಿನ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಮಂಜುಳ ನಾಯ್ಡು ಅವರ ಮುಖಾಂತರ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಬಲಿಜ ಸಮಾಜವು ಇತ್ತೀಚಿನ ದಿನಗಳಲ್ಲಿ ಜಿಲ್ಲಾಧ್ಯಕ್ಷರ ಸ್ವಹಿತಾಸಕ್ತಿಯಂತೆ ನಡೆಯುತ್ತಿದೆ. ಹಿಂದಿನಿಂದಲೇ ಬಲಿಜ ಸಮಾಜದ ಏಳಿಗೆಗೆ ಹೋರಾಟ ನಡೆಸುತ್ತಾ, ಜನಾಂಗದವರನ್ನು ಒಂದಾಗಿಸುತ್ತಿದ್ದ ಹಿರಿಯನ್ನು ಕಡೆಗಣಿಸುತ್ತಿರುವದು ಅಧ್ಯಕ್ಷ ಶ್ರೀನಿವಾಸ್ ಅವರಿಗೆ ಶೋಭೆ ತರುವಂತಹದಲ್ಲ ಎಂದು ಅವರು ಆರೋಪಿಸಿದರು.

ಜಿಲ್ಲೆಯ ಕೊಡವ ಜನಾಂಗದ ಆರ್ಥಿಕ ಸಹಕಾರದಲ್ಲಿ 2013 ರಲ್ಲಿ ಬಲಿಜ ಸಮಾವೇಶ ನಡೆದಿತ್ತು. ಬೇರೆ ಜನಾಂಗದ ಅಭಿವೃದ್ಧಿಗೆ ಮತ್ತೊಂದು ಜನಾಂಗ ಸಹಕಾರ ಮಾಡಿರುವದು ಹೆಮ್ಮೆಯ ವಿಚಾರ. ಅಂದು ಎಲ್ಲರನ್ನೂ ಒಂದಾಗಿಸಿ ಹೋರಾಟ ನಡೆಸಿದ್ದರೂ, ಇಂದು ಬಲಿಜ ಸಮಾಜ ಎಲ್ಲರನ್ನು ಕಡೆಗಣಿಸುತ್ತಿದೆ. ಇದರಿಂದಾಗಿ 2ಎ ಮೀಸಲಾತಿ ಸಿಕ್ಕಿದ ನಂತರ ಸಮಾವೇಶಕ್ಕೆ ಸಹಕಾರ ನೀಡಿದವರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಸಲಾಗುವದು ಎಂದರು.

ಇತ್ತೀಚೆಗೆ ನಡೆದ ರಾಜ್ಯ ಸಮ್ಮೇಳನವು ರಾಜ್ಯ ಸಮಿತಿಯ ಮೂಲಕ ನಡೆದಿದೆ. ಅದರ ಎಲ್ಲಾ ಖರ್ಚು ವೆಚ್ಚವನ್ನೂ ರಾಜ್ಯ ಬಲಿಜ ಸಮಾಜವೇ ಭರಿಸಿದೆ. ಆದರೆ ಈ ಸಮಾವೇಶದ ಹೆಸರಿನಲ್ಲಿ ಕೆಲವರು ಹಣ ವಸೂಲಿ ಮಾಡಿರುವದು ಸಮಾಜಕ್ಕೆ ಶೋಭೆ ತರುವಂತಹದಲ್ಲ ಎಂದರು.

ಬಲಿಜ ಸಮಾಜಕ್ಕೆ ನೀಡಲು ಉದ್ದೇಶಿಸಿರುವ ಸರ್ಕಾರಿ ಜಾಗ ಕಬಳಿಸಲು ಸಮಾಜವನ್ನು ಟ್ರಸ್ಟ್ ಆಗಿ ಪರಿವರ್ತನೆಗೊಳಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡುವದಿಲ್ಲ ಎಂದರು. ಬಲಿಜ ಮುಖಂಡರುಗಳಾದ ಶ್ರೀನಿವಾಸ್, ಟಿ.ಡಿ. ಸುರೇಶ್ ಗೋಷ್ಠಿಯಲ್ಲಿದ್ದರು.