ಕೂಡಿಗೆ, ಜೂ. 27: ಒಂದೂವರೆ ವರ್ಷದ ಗಿಳಿಯೊಂದು ಬ್ಯಾಡಗೊಟ್ಟ ಗ್ರಾಮದಲ್ಲಿ ಲೊಟಗುಟ್ಟುತ್ತಿದೆ. ಕಡ್ಯದ ನಾಣಯ್ಯ ಎಂಬವರ ಮಗ ಆಟೋ ಸತೀಶ್ ಅವರ ಮನೆಯಲ್ಲಿ ಈ ಅಪರೂಪದ ಮಾತನಾಡುವ ಗಿಳಿಯೊಂದು ಮನೆಗೆ ಹೋದವರನ್ನು ತನ್ನದೇ ಶೈಲಿಯಲ್ಲಿ ಉಪಚರಿಸುವ ಗುಣವನ್ನು ಹೊಂದಿದೆ.

ಮನೆಯ ಮುಂಭಾಗದಲ್ಲೇ ಈ ಗಿಳಿಯನ್ನು ಗೂಡಿನಲ್ಲಿರಿಸಲಾಗಿದ್ದು, ಮನೆಯ ಹತ್ತಿರ ಹೋದ ಜನರನ್ನು “ಊಟ ಆಯ್ತಾ”, “ಬನ್ನಿ” ಎಂದು ಕರೆಯುತ್ತದೆ. ಇದರ ಜೊತೆಯಲ್ಲಿ ಸತೀಶ್ ಅವರ ಮಕ್ಕಳನ್ನು ಛಾಯಾ ಅಕ್ಕಾ, ಹರ್ಷಿತ ಅಕ್ಕಾ, ಕಾಂತಿ ಅಕ್ಕಾ ಬಾ, ಹೋಗು ಎಂದೆಲ್ಲಾ ಮಾತನಾಡಿಸುತ್ತದೆ.

ಮನೆಯ ಮಾಲೀಕ ನಾಣಯ್ಯ ಅವರ ಪತ್ನಿಯನ್ನು ಅವ್ವ ಬಾ, ಊಟ ಆಯ್ತಾ, ಸಾಂಬಾರ್ ಏನ್ ಎಂದು ಕೇಳುವ ಈ ಗಿಳಿ ಬಹಳ ಚುರುಕಾಗಿದೆ.

ಇನ್ನೊಂದು ವಿಶೇಷವೆಂದರೆ ಮನೆಯ ಮಕ್ಕಳೊಂದಿಗೆ ಆಟವಾಡಿ, ಬೆಕ್ಕುಗಳು ತನ್ನನ್ನು ಹಿಡಿಯುತ್ತದೆ ಎಂದು ತಾನೇ ತನ್ನ ಗೂಡಿಗೆ ಹಾರಿ ಹೋಗಿ ಬಾಗಿಲು ಹಾಕಿಕೊಂಡು ತನ್ನನ್ನು ರಕ್ಷಿಸಿಕೊಳ್ಳುವ ಚಾಣಾಕ್ಷ ಬುದ್ಧಿ ಹೊಂದಿರುವ ವಿಶೇಷ ಗಿಳಿ ಇದು. ಗಿಳಿಯನ್ನು ತಂದು ಸಾಕಿದ ಸತೀಶ್ ತನ್ನ ಮೊಬೈಲ್‍ನಲ್ಲಿ ಕೊಡವ ಕುಣಿತದ ಹಾಡನ್ನು ಹಾಕಿದಾಗ ಗಿಳಿಯು ಹಾಡಿಗೆ ತನ್ನ ಕುತ್ತಿಗೆಯನ್ನು ಮೇಲೆ ಕೆಳಗೆ ಅಲುಗಾಡಿಸಿ, ಕಾಲುಗಳನ್ನೆತ್ತಿ ನೃತ್ಯ ಮಾಡುತ್ತದೆ.

ರಾತ್ರಿಯಲ್ಲಿ ಮಕ್ಕಳಂತೆ ಕುಳಿತು ಟಿವಿ ವೀಕ್ಷಿಸುತ್ತದೆ. ಮಕ್ಕಳು ಚೇಷ್ಟೆ ಮಾಡಲು ಟಿವಿಯನ್ನು ಆಫ್ ಮಾಡಿದಾಗ ಕೂಗುತ್ತಿರುತ್ತದೆ. ಟಿವಿಯನ್ನು ಹಾಕಿ ಮನೆಯವರು ಹೊರಗೆ ತೆರಳಿದಾಗ ಟಿವಿಯಲ್ಲಿ ಬರುವ ಶಬ್ದ ಕೇಳಿ ತಲೆ ಅಲ್ಲಾಡಿಸುತ್ತ ಮನರಂಜನೆ ಪಡೆಯುತ್ತದೆ ಎಂದು ಮನೆಯ ಮಾಲೀಕ ಕಡ್ಯದ ನಾಣಯ್ಯ ಸ್ಥಳಕ್ಕೆ ತೆರಳಿದ ಸುದ್ಧಿಗಾರರಿಗೆ ತಮ್ಮ ಮನೆಯ ಗಿಳಿಯ ವಿಶೇಷತೆಗಳನ್ನು ತಿಳಿಸಿದರು.

- ಕೆ.ಕೆ. ನಾಗರಾಜಶೆಟ್ಟಿ.