ಮಡಿಕೇರಿ, ಜೂ. 27: ಪರಿಸರ ಉಳಿದಲ್ಲಿ ಜೀವ ಸಂಕುಲಗಳ ಉಳಿವು ಸಾಧ್ಯ. ಇಂದು ಪರಿಸರದ ಅಸಮತೋಲನ, ವೈಪರಿತ್ಯದಿಂದಾಗಿ ಸಮಾಜದಲ್ಲಿ ಅನೇಕ ಸಮಸ್ಯೆಗಳು ಕಂಡು ಬರುತ್ತಿರುವದನ್ನು ನಾವು ಕಾಣಬಹುದು. ಈ ನಿಟ್ಟಿನಲ್ಲಿ ಅನೇಕ ಸಂಘ - ಸಂಸ್ಥೆಗಳು ಪರಿಸರದ ಮೇಲಿನ ಕಾಳಜಿಯಿಂದ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವದು, ಗಿಡ ನೆಡುವ ಕಾರ್ಯಕ್ರಮ ನಡೆಯುತ್ತಿರುವದು ಕಂಡು ಬರುತ್ತಿದೆ.

ಈ ನಿಟ್ಟಿನಲ್ಲಿ ವಿಶೇಷ ಚೇತನರು ಪರಿಸರ ಉಳಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನದಲ್ಲಿ ತೊಡಗಿರುವದು ಕಂಡು ಬಂತು. ಹೌದು, ಕೊಡಗು ವಿದ್ಯಾಲಯ ಆಪರ್ಚುನಿಟಿ ಶಾಲೆಯ ವಿಶೇಷ ಚೇತನ ಮಕ್ಕಳು ಈ ರೀತಿಯ ವಿಶೇಷ ಪ್ರಯತ್ನದಲ್ಲಿ ತೊಡಗಿರುವದು ಕಂಡು ಬಂದಿತು. ಅನೇಕ ಸಂಘ - ಸಂಸ್ಥೆಗಳು ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದು ಪರಿಸರ ದಿನಾಚರಣೆಯಂದು ಪರಿಸರದಲ್ಲಿ ಗಿಡ ನೆಡುವ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದರೆ, ಈ ವಿಶೇಷ ಚೇತನರು ಸ್ವತಃ ತಾವೇ ಗಿಡಗಳ ಬೀಜದುಂಡೆ (ಸೀಡ್‍ಬಾಲ್) ತಯಾರಿಕೆಯಲ್ಲಿ ತೊಡಗಿದ್ದರು. ಏನಿದು ಬೀಜದುಂಡೆ, ಆಶ್ಚರ್ಯವಾಗ ಬಹುದು. ಫಲವತ್ತಾದ ಮಣ್ಣು, ಗೊಬ್ಬರ ಹಾಗೂ ಸ್ವಲ್ಪ ನೀರನ್ನು ಮಿಶ್ರಣ ಮಾಡಿ ಹಣ್ಣಿನ ಬೀಜ ಸೇರಿದಂತೆ ಇನ್ನಿತರ ಬೀಜಗಳನ್ನು ತೆಗೆದುಕೊಂಡು ಒಂದೆರಡು ಬೀಜ ಮತ್ತು ಸ್ವಲ್ಪ ಮಣ್ಣನ್ನು ಅಂಗೈಯಲ್ಲಿ ತೆಗೆದುಕೊಂಡು ಉಂಡೆ ಮಾಡುವದು. ಈ ರೀತಿ ಮಾಡಿದ ಉಂಡೆಯನ್ನು ಕೆಲವು ದಿನಗಳ ಕಾಲ ಒಣಗಿಸಿ ಬಳಿಕ ಪರಿಸರದಲ್ಲಿ ಎಲ್ಲೆಂದರಲ್ಲಿ ಬಿಸಾಡಿದರೆ, ಅಲ್ಲಿ ಬೀಜದುಂಡೆ ಮೊಳಕೆಯೊಡೆದು ಪರಿಸರದಲ್ಲಿ ಲೀನವಾಗಿ ಬೆಳೆಯತೊಡಗುತ್ತದೆ.

ಈ ರೀತಿ ಬೀಜದುಂಡೆ ತಯಾರಿಯಲ್ಲಿ ತೊಡಗಿದ ವಿಶೇಷ ಚೇತನರು ಎಲ್ಲರಿಗೂ ಮಾದರಿ ಯಾಗುವಂತಹ ಕಾರ್ಯವನ್ನು ಮಾಡಿದ್ದಾರೆ. ವಿಶೇಷ ಚೇತನರಿಗೆ ಬೀಜದುಂಡೆ ತಯಾರಿಕೆಯಲ್ಲಿ ಅರಣ್ಯ ಇಲಾಖೆಯ ಕುಶಾಲನಗರ ವಲಯಾಧಿಕಾರಿ ರಂಜನ್ ಸೇರಿದಂತೆ ಸಿಬ್ಬಂದಿಗಳು ಹಾಗೂ ಭಾರತೀಯ ವಿದ್ಯಾಭವನದ ಕೊಡಗು ವಿದ್ಯಾಲಯದ ಕೆಲವು ವಿದ್ಯಾರ್ಥಿಗಳು ಸಾಥ್ ನೀಡಿದರು. ಅರಣ್ಯ ಇಲಾಖೆಯಿಂದ ಬೀಜ ವನ್ನು ಒದಗಿಸಲಾಗಿತ್ತು. ಮೇಲುಸ್ತುವಾರಿ ಯನ್ನು ಆಪರ್ಚುನಿಟಿ ಶಾಲೆಯ ಟ್ರಸ್ಟಿ ಮೀನ ಕಾರ್ಯಪ್ಪ, ಅಗತ್ಯ ಸಲಹೆ ಸೂಚನೆಯನ್ನು ಮಕ್ಕಳಿಗೆ ನೀಡಿದರು.

ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಮೀನ ಕಾರ್ಯಪ್ಪ ಜೀವನದಿ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಇಂದು ನೀರಿಲ್ಲದೆ ಬರಿದಾಗುತ್ತಿರುವದನ್ನು ಕಾಣುತ್ತಿದ್ದೇವೆ. ಇದಕ್ಕೆಲ್ಲ ಪರಿಸರ ಅಸಮತೋಲನ ಹಾಗೂ ಪರಿಸರ ನಾಶ ಕಾರಣವಾಗಿದೆ. ಹೀಗಾಗಿ ಗಿಡಗಳನ್ನು ಬೆಳೆಸುವದು ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಸರ ಕಾಳಜಿಯಿಂದ ಬೀಜುದುಂಡೆಯನ್ನು ವಿಶೇಷ ಚೇತನರು ತಯಾರಿಸಿದ್ದಾರೆ ಎಂದರು.

-ಚಂದ್ರ