ಸೋಮವಾರಪೇಟೆ, ಜೂ. 27: ಕಸ್ತೂರಿ ರಂಗನ್ ವರದಿಯನ್ವಯ ಕೊಡಗು ಜಿಲ್ಲೆಯ ಹಲವಷ್ಟು ಗ್ರಾಮ ಗಳನ್ನು ಸೂಕ್ಷ್ಮ ಪರಿಸರ ತಾಣವನ್ನಾಗಿ ಘೋಷಣೆ ಮಾಡುತ್ತಿರುವ ಕ್ರಮದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದ್ದು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಜನತೆಯ ಎದುರು ಬಹಿರಂಗಪಡಿಸಲಿ ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ ವರದಿಯ ಅಂಶಗಳನ್ನು ಜನತೆಯ ಮುಂದಿಡಬೇಕು. ಆಗ ವರದಿಯ ಸತ್ಯಾಸತ್ಯತೆ ಬಯಲಾಗಿ ಕಾಂಗ್ರೆಸ್ ಸರ್ಕಾರದ ನಿಜಬಣ್ಣ ಜನತೆಗೆ ಗೊತ್ತಾಗುತ್ತದೆ ಎಂದರು.

ಸೂಕ್ಷ್ಮ ಪರಿಸರ ತಾಣ ಘೋಷಣೆ ಸಂಬಂಧ ಆಯಾ

(ಮೊದಲ ಪುಟದಿಂದ) ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆದ ಸಂದರ್ಭ ಕರ್ನಾಟಕ ಸರ್ಕಾರ ಯಾವದಕ್ಕೂ ತಕರಾರು ಎತ್ತದೇ ಎಲ್ಲ ಅಂಶಗಳಿಗೂ ಸಮ್ಮತಿ ಸೂಚಿಸಿ ವರದಿ ರವಾನಿಸಿದ್ದೇ ಸಮಸ್ಯೆಗೆ ಕಾರಣವಾಗಿದೆ ಎಂದ ಪ್ರತಾಪ್ ಸಿಂಹ, ಇದೀಗ ರಾಜ್ಯ ಸರ್ಕಾರದ ಪ್ರಮಾದವನ್ನು ಬಿಜೆಪಿಯ ಕೇಂದ್ರ ಸರ್ಕಾರ ಹಾಗೂ ತನ್ನ ತಲೆಗೆ ಕಟ್ಟಲು ಕಾಂಗ್ರೆಸ್ ನಾಯಕರು ಯತ್ನಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಸಾಂವಿಧಾನಿಕ ಜವಾಬ್ದಾರಿ ಹೊತ್ತಿರುವ ಸರ್ಕಾರ ಜನತೆಯ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ತನ್ನ ಕರ್ತವ್ಯವನ್ನೂ ಮರೆತಿದೆ. ಈ ಹಿಂದೆ ಜಿಲ್ಲೆಯ ಶಾಸಕರುಗಳಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ಭಾರೀ ಪ್ರತಿಭಟನೆ ನಡೆಸಿ ವರದಿ ಜಾರಿಯನ್ನು ವಿರೋಧಿಸಲಾಗಿತ್ತು. ಆ ಸಂದರ್ಭ ಸಚಿವ ಸಂಪುಟದ ಉಪ ಸಮಿತಿಯನ್ನು ನೇಮಿಸಿ ಜಿಲ್ಲೆಗೆ ಕಳುಹಿಸಲಾಗಿತ್ತು. ಸಮಿತಿಯ ಸದಸ್ಯರು ಪಟ್ಟಣದಲ್ಲಿ ಕುಳಿತು ಅಧಿಕಾರಿಗಳನ್ನು ಕರೆಸಿಕೊಂಡು ತಮಗಿಷ್ಟ ಬಂದ ವರದಿಯನ್ನು ನೀಡಿದ್ದಾರೆ ಎಂದು ಆರೋಪಿಸಿದರು.

ಜನಜೀವನವನ್ನು ತಳಮಟ್ಟದಲ್ಲಿ ಅರಿಯುವಂತಹ ಭೌತಿಕ ಸರ್ವೆ ಮಾಡದೇ ಅಧಿಕಾರಿಗಳು ನೀಡಿದ ಅಂಕಿಅಂಶಗಳನ್ನು ಉಲ್ಲೇಖಿಸಿ ವರದಿ ಕಳುಹಿಸಿಕೊಟ್ಟಿದ್ದಾರೆ. ಇದರೊಂದಿಗೆ ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸಮೀಕ್ಷೆಯನ್ನೂ ನಡೆಸಿಲ್ಲ. ಅವೈಜ್ಞಾನಿಕವಾಗಿ ಕಾಟಾಚಾರದ ವರದಿ ತಯಾರಿಸಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿರುವದು ಕಾಂಗ್ರೆಸ್ ಸರ್ಕಾರದ ಜನಪರ ಕಾಳಜಿಗೆ ನಿಜವಾದ ಸಾಕ್ಷಿಯಂತಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಕೊಡಗಿನ ಕೆಲವು ಪ್ರದೇಶಗಳನ್ನು ಸೂಕ್ಷ್ಮ ಪರಿಸರ ತಾಣ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಸಂಬಂಧ ನೋಟಿಫೈ ಮಾಡಿದೆ. ಇನ್ನೂ ಅನುಷ್ಠಾನಗೊಳಿಸಿಲ್ಲ. 10 ತಿಂಗಳಿನಲ್ಲಿ ರಾಜ್ಯದಲ್ಲಿ ಸರ್ಕಾರ ಬದಲಾಗಲಿದ್ದು, ಕೊಡಗಿನ ಜನರ ಹಿತಕಾಪಾಡಲು ನಮ್ಮ ಸರ್ಕಾರ ಮುಂದಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಾಪ್ ಸಿಂಹ ಉತ್ತರಿಸಿದರು. ಈ ಸಂದರ್ಭ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ನಗರ ಬಿಜೆಪಿ ಅಧ್ಯಕ್ಷ ಎಸ್.ಆರ್. ಸೋಮೇಶ್ ಮತ್ತಿತರರು ಉಪಸ್ಥಿತರಿದ್ದರು.