ಮಡಿಕೇರಿ, ಜೂ. 27: ಕೊಡಗನ್ನು ಒಳಗೊಂಡ ರೋಟರಿ ಜಿಲ್ಲೆ 3181ರ ನೂತನ ರಾಜ್ಯಪಾಲರಾಗಿ ಮಡಿಕೇರಿ ರೋಟರಿಯ ಮಾತಂಡ ಸುರೇಶ್ ಚಂಗಪ್ಪ ಆಯ್ಕೆಯಾಗಿದ್ದು, ಇದೇ ತಾ. 30 ರಂದು ನಗರದಲ್ಲಿ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೆÉೀರಿ ರೋಟರಿ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಈ ಬಗ್ಗೆ ಮಾಹಿತಿ ನೀಡಿದರು. ತಾ. 30 ರಂದು ಸಂಜೆ 7 ಗಂಟೆಗೆ ನಗರದ ಕ್ರಿಸ್ಟಲ್ ಹಾಲ್‍ನಲ್ಲಿ ನಡೆಯುವ ಪದಗ್ರಹಣ ಸಮಾರಂಭದಲ್ಲಿ ರೊ. ಮಾತಂಡ ಎಂ. ಚಂಗಪ್ಪ ಅವರು ಕೊಡಗು, ದಕ್ಷಿಣ ಕನ್ನಡ, ಮೈಸೂರು ಮತ್ತು ಚಾಮರಾಜನಗರವÀನ್ನು ಒಳಗೊಂಡ ರೋಟರಿ ಜಿಲ್ಲೆಯ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲೆ 3250ರ ಹಿಂದಿನ ರಾಜ್ಯಪಾಲರಾಗಿದ್ದ ಕಮಲ್ ಸಾಂಗ್ವಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮಡಿಕೇರಿ ರೋಟರಿ ಜಿಲ್ಲಾ ಬುಲೆಟಿನ್ ಸಂಪಾದಕÀ ಬಿ.ಜಿ. ಅನಂತಶಯನ ಮಾತನಾಡಿ, ಮಾತಂಡ ಸುರೇಶ್ ಚಂಗಪ್ಪ ಅವರು ಜಿಲ್ಲಾ ರೋಟರಿ ರಾಜ್ಯಪಾಲರಾಗಿ ಆಯ್ಕೆಯಾಗುತ್ತಿರುವ ಜಿಲ್ಲೆಯ ನಾಲ್ಕನೇ ವ್ಯಕ್ತಿಯಾಗಿರುವದು

(ಮೊದಲ ಪುಟದಿಂದ) ಹೆಮ್ಮೆಯ ವಿಚಾರ ಎಂದರು. ಈ ಹಿಂದೆ ಜಿಲ್ಲೆಯ ಕರ್ನಲ್ ಚಂಗಪ್ಪ, ಡಾ. ಅಪ್ಪುರಾವ್ ಪೈ ಮತ್ತು ಡಾ. ರವಿ ಅಪ್ಪಾಜಿ ಅವರು ಜಿಲ್ಲಾ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರೆಂದು ಮಾಹಿತಿ ನೀಡಿದರು.

ಮಾತಂಡ ಸುರೇಶ್ ಚಂಗಪ್ಪ ಅವರು ಮಡಿಕೆÉೀರಿ ರೋಟರಿ ಅಧ್ಯಕ್ಷರಾಗಿ, ಉಪ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವದಲ್ಲದೆ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾಗಿದ್ದರು. ಹಿಂದಿನ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಮಡಿಕೇರಿಗೆ ಕರೆ ತರುವಲ್ಲಿ ಸುರೇಶ್ ಚಂಗಪ್ಪ ಮಹತ್ವದ ಕಾರ್ಯ ನಿರ್ವಹಿಸಿದ್ದರು ಎಂದು ಹೇಳಿದರು.

ನೂತನ ಜಿಲ್ಲಾ ರೋಟರಿ ರಾಜ್ಯಪಾಲ ಮಾತಂಡ ಸುರೇಶ್ ಚಂಗಪ್ಪ ಮಾತನಾಡಿ, ನಾಲ್ಕು ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲೆಯ ರಾಜ್ಯಪಾಲನಾಗಿ ತಾನು ಕಾರ್ಯನಿರ್ವಹಿಸಬೇಕಿದೆ. ಈ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 72 ರೋಟರಿ ಕ್ಲಬ್ ಹಾಗೂ ಕೊಡಗಿನಲ್ಲಿ 9 ರೋಟರಿ ಕ್ಲಬ್‍ಗಳಿದ್ದು, ಇವೆಲ್ಲವುಗಳ ಸಹಕಾರದಿಂದ ಹಲವು ಜನಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿ ಸುವ ಪ್ರಯತ್ನವನ್ನು ಮಾಡಲಿದ್ದೇನೆ. ಪ್ರಮುಖವಾಗಿ ರೋಟರಿ ಸಂಸ್ಥೆ ಮೂಲಕ ರೋಟರಿ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ನಾಲ್ಕು ಜಿಲ್ಲೆಗಳಲ್ಲಿ ಗುರುತಿಸಲಾಗಿರುವ 1700 ವಿದ್ಯುತ್ ರಹಿತ ಮನೆಗಳಿಗೆ ‘ಸತ್ಯಜ್ಯೋತಿ’ ಯೋಜನೆಯಡಿ ಸೋಲಾರ್ ದೀಪಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಪರಿಸರ ಸಂರಕ್ಷಣೆಯ ಉದ್ದೇಶದಿಂದ 1 ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಹೊಂದಿರುವದ ಲ್ಲದೆ, ಹಸಿರ ಪರಿಸರವನ್ನು ಹೆಚ್ಚಿಸುವ ಚಿಂತನೆಯಡಿ ‘ಸೀಡ್ ಬಾಲ್’ಗಳನ್ನು ಹರಡುವ ಯೋಜನೆಯೂ ತನ್ನ ಮುಂದಿದೆ. ಇವೆಲ್ಲವುಗಳೊಂದಿಗೆ ಸ್ವಚ್ಛತಾ ಅಭಿಯಾನಗಳನ್ನು ನಡೆಸುವ ಮೂಲಕ ಸ್ವಚ್ಛತೆಯಿಂದ ಆರೋಗ್ಯದ ವೃದ್ಧಿ ಎನ್ನುವ ಸಂದೇಶವನ್ನು ಜನರಿಗೆ ತಲಪಿಸುವ ಗುರಿಯನ್ನು ಹೊಂದಲಾ ಗಿದೆ. ತಮ್ಮ ಚಿಂತನೆಯ ಯೋಜನೆ ಗಳನ್ನು 36 ವಿವಿಧ ಸಮಿತಿಗಳನ್ನು ರಚಿಸಿ ಜೋನಲ್ ಕೋಆರ್ಡಿನೇಟರ್ ಗಳ ಮೂಲಕ ಕಾರ್ಯರೂಪಕ್ಕೆ ತರುವ ವಿಶ್ವಾಸ ವ್ಯಕ್ತಪಡಿಸಿದರು.

ಪೋಲಿಯೋ ಕಾರ್ಯಕ್ರಮ ನಿರಂತರವಾಗಿ ನಡೆಯಲಿದ್ದು, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಪೋಲಿಯೋ ನಿರ್ಮೂಲನೆಯ ಮೂಲಕ ಇಡೀ ವಿಶ್ವ ಪೋಲಿಯೋ ಮುಕ್ತಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ಸುರೇಶ್ ಚಂಗಪ್ಪ, ರೋಟರಿ ಇಂಟರ್ ನ್ಯಾಷನಲ್‍ನ ಧ್ಯೇಯದಂತೆ ಸಾಕ್ಷರತೆಯ ‘ಟೀಚ್’ ಕಾರ್ಯಕ್ರಮ ನಿರಂತರವಾಗಿರಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಜಿಲ್ಲಾ ಕಾರ್ಯದರ್ಶಿಗಳಾದ ಎಂ. ಈಶ್ವರ ಭಟ್, ಕೆ.ಕೆ. ವಿಶ್ವನಾಥ್ ಹಾಗೂ ಎಂ.ಎಸ್. ಕರುಂಬಯ್ಯ ಉಪಸ್ಥಿತರಿದ್ದರು.