ಕುಶಾಲನಗರ, ಜೂ. 26: ಕುಶಾಲನಗರ ಸುತ್ತಮುತ್ತ ವ್ಯಾಪ್ತಿಯ ಹಾರಂಗಿ ಹಿನ್ನೀರು ಮತ್ತು ದುಬಾರೆ ಪ್ರವಾಸಿ ಸ್ಥಳಗಳು ಅಕ್ರಮ ವ್ಯಾಪಾರಿ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತಿರುವದರೊಂದಿಗೆ ನಿರ್ವಹಣೆಯ ಕೊರತೆಯಿಂದ ಅಶುಚಿತ್ವದ ತಾಣವಾಗುತ್ತಿರುವದು ಒಂದೆಡೆಯಾದರೆ ಇಂತಹ ತಾಣಗಳಲ್ಲಿ ಪ್ರವಾಸಿಗರು ಹುಚ್ಚು ಸಾಹಸಕ್ಕೆ ತೆರಳಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವದು ಇತ್ತೀಚಿನ ಬೆಳವಣಿಗೆ.

ವಿಶ್ವವಿಖ್ಯಾತ ಪ್ರವಾಸಿ ತಾಣ ಎನಿಸಿರುವ ದುಬಾರೆ ಸಾಕಾನೆ ಶಿಬಿರದ ಮುಂಭಾಗ ನದಿ ತಟಗಳಲ್ಲಿ ಎಳನೀರು, ಹಣ್ಣು, ತಿಂಡಿತಿನಿಸು ಮಾರಾಟ ಮಾಡುವ ಅಕ್ರಮ ವ್ಯಾಪಾರ ವಹಿವಾಟುಗಳು ಅಧಿಕಗೊಂಡಿವೆ. ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ಕೇಂದ್ರ ಕಲುಷಿತವಾಗುವದರೊಂದಿಗೆ ನದಿ ನೀರು ಮಾಲಿನ್ಯಗೊಳ್ಳುತ್ತಿರುವದು ಕಂಡುಬರುತ್ತಿದೆ. ಈ ನಡುವೆ ಕೆಲ ಪ್ರವಾಸಿಗರು ಮದ್ಯದ ಅಮಲಿನಲ್ಲಿ ನದಿ ನೀರಲ್ಲಿ ಈಜಲು ತೆರಳಿ ಅಪಾಯಕ್ಕೆ ಒಳಗಾಗುವ ದುರ್ಘಟನೆ ಆಗಾಗ್ಗೆ ನಡೆಯುತ್ತಿದೆ.

ಗ್ರಾಮ ಪಂಚಾಯಿತಿ ಉಸ್ತುವಾರಿಯಲ್ಲಿರುವ ಈ ಪ್ರವಾಸಿ ಕೇಂದ್ರವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಪಂಚಾಯಿತಿ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ ಎನ್ನುವದು ಸ್ಥಳೀಯರ ದೂರಾಗಿದೆ. ನದಿ ತಟದಲ್ಲಿ ಎಳನೀರು ಅಂಗಡಿಗಳು ತಲೆ ಎತ್ತುವದರೊಂದಿಗೆ ಇದರ ತ್ಯಾಜ್ಯಗಳನ್ನು ನದಿಯಲ್ಲಿಯೇ ಎಸೆಯಲಾಗುತ್ತಿದೆ.

ಎಲ್ಲೆಂದರಲ್ಲಿ ಪ್ರವಾಸಿಗರು ನದಿಗೆ ಇಳಿಯುತ್ತಿದ್ದು, ಅಪಾಯಕ್ಕೆ ಒಳಗಾಗುವದು ಇತ್ತೀಚಿನ ಬೆಳವಣಿಗೆಯಾಗಿದ್ದು ನದಿಗೆ ಇಳಿಯಲು ಏಕಮಾತ್ರ ದಾರಿ ನಿರ್ಮಾಣಗೊಳ್ಳಬೇಕಿದೆ ಎಂಬ ಮಾತು ಕೇಳಿ ಬರುತ್ತಿದೆ. ದುಬಾರೆ ಸಾಕಾನೆ ಶಿಬಿರದ ಅಂಚಿನಲ್ಲಿ ಅರಣ್ಯ ಇಲಾಖೆ ತಡೆಗೋಡೆ ನಿರ್ಮಿಸಿದ್ದು ಇದೇ ರೀತಿ ನದಿಯ ಇನ್ನೊಂದು ಭಾಗದಲ್ಲಿ ಕೂಡ ತಡೆಗೋಡೆ ನಿರ್ಮಿಸುವ ಮೂಲಕ ಇಂತಹ ಅನಾಹುತಗಳನ್ನು ತಪ್ಪಿಸಬಹುದು ಎನ್ನುವದು ಇಲ್ಲಿನ ಉದ್ಯಮಿಗಳ ಹಾಗೂ ಸ್ಥಳೀಯರ ಅಭಿಪ್ರಾಯವಾಗಿದೆ.

ಹಾರಂಗಿ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ಕೂಡ ಪ್ರವಾಸಿಗರು ತಮ್ಮ ವಾಹನಗಳೊಂದಿಗೆ ನದಿ ದ್ವೀಪಗಳಿಗೆ ತೆರಳಿ ಇಡೀ ಪ್ರದೇಶದಲ್ಲಿ ಪ್ಲಾಸ್ಟಿಕ್ ಹಾಗೂ ಬಾಟಲ್‍ಗಳನ್ನು ಎಸೆಯುವ ಮೂಲಕ ಮಲಿನಗೊಳಿಸುತ್ತಿದ್ದಾರೆ. ವಾರಾಂತ್ಯದಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹಾರಂಗಿ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡುವದರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ.

ಕೆಲವು ಪ್ರವಾಸಿಗರು ರಾತ್ರಿ ವೇಳೆ ಕೂಡ ಇಲ್ಲಿ ನೆಲೆಸುತ್ತಿದ್ದು, ಅಪಾಯಕಾರಿ ಸನ್ನಿವೇಶ ಎದುರಿಸುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಯಾವದೇ ರೀತಿಯ ಕ್ರಮಕೈಗೊಳ್ಳುತ್ತಿಲ್ಲ ಎನ್ನುವದು ಈ ಭಾಗದ ನಾಗರಿಕರ ದೂರಾಗಿದೆ.

ಕೆಲವೊಂದು ಪ್ರವಾಸಿಗರು ಸ್ಥಳೀಯರ ನೆರವಿನೊಂದಿಗೆ ಅಕ್ರಮವಾಗಿ ರ್ಯಾಫ್ಟಿಂಗ್ ಕ್ರೀಡೆಯಲ್ಲಿ ತೊಡಗುವದು, ಅಕ್ರಮ ಮೀನುಗಾರಿಕೆ ಮುಂತಾದ ಚಟುವಟಿಕೆಗಳು ಈ ವ್ಯಾಪ್ತಿಯಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ. ಗುಡ್ಡೆಹೊಸೂರು ಬಳಿ ಹೆದ್ದಾರಿಯಿಂದ ಅತ್ತೂರು ಮೀಸಲು ಅರಣ್ಯದ ಒಳಭಾಗದ ಮಾರ್ಗದ ಮೂಲಕ ದಿನನಿತ್ಯ ನೂರಾರು ಪ್ರವಾಸಿಗರ ವಾಹನಗಳು ಇಲ್ಲಿ ಮೋಜು ಮಸ್ತಿಗೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಅಪಾಯ ಸಂಭವಿಸುವ ಮುನ್ನ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕಾಗಿದೆ ಎನ್ನುವದು ನಾಗರಿಕರ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಶಾಶ್ವತ ಕಾರ್ಯಯೋಜನೆ ರೂಪಿಸಬೇಕಾಗಿದೆ.