ಕುಶಾಲನಗರ, ಜೂ. 26: ಕುಶಾಲನಗರ ಗುಂಡೂರಾವ್ ಬಡಾವಣೆ ಹರಾಜು ಪ್ರಕ್ರಿಯೆಗೆ ಅಡ್ಡಿಪಡಿಸದೆ ಪಟ್ಟಣದ ಅಭಿವೃದ್ಧಿ ಯೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಮಾಜಿ ಉಸ್ತುವಾರಿ ಸಚಿವ ಆರ್. ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಕುಶಾಲನಗರ ಪಟ್ಟಣದಲ್ಲಿ ಕೊಡಗು ವಿಶೇಷ ಪ್ಯಾಕೆಜ್‍ನಲ್ಲಿ ಬಿಡುಗಡೆಯಾಗಿರುವ ಅನುದಾನ ಮತ್ತು ವಿವಿಧ ಲೆಕ್ಕಶೀರ್ಷಿಕೆಯಡಿ ಬಿಡುಗಡೆಯಾಗಿರುವ ಅನುದಾನದ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗುಂಡೂರಾವ್ ಬಡಾವಣೆ ಪ್ರದೇಶ ಪ್ರಸಕ್ತ ಅಭಿವೃದ್ಧಿ ಕಾಣುವ ಸಂದರ್ಭ ವಿವಾದಗಳನ್ನು ಸೃಷ್ಟಿಸುವದು ಸಮಂಜಸವಲ್ಲ ಎಂದ ಅವರು, ಬಡ ಜನರಿಗೆ ರಾಜ್ಯ ಸರಕಾರ ಹಾಗೂ ಸ್ಥಳೀಯ ಆಡಳಿತದಿಂದ ಆಶ್ರಯ ಮನೆ, ಇಂದಿರಾ ವಸತಿ ಯೋಜನೆ, ಅಕ್ರಮ ಸಕ್ರಮ ಯೋಜನೆ ಸೇರಿದಂತೆ ಹಲವಾರು ಯೋಜನೆಗಳು ಇದ್ದು ಅದರ ಸದುಪಯೋಗವಾಗಬೇಕಾಗಿದೆ. ಪ್ರಸಕ್ತ ಕುಶಾಲನಗರ ಪಟ್ಟಣ ಪಂಚಾಯ್ತಿಗೆ ಆದಾಯದ ಅವಶ್ಯಕತೆ ಇರುವದರೊಂದಿಗೆ ಬಡಾವಣೆಯ ಅಭಿವೃದ್ಧಿ ಕೆಲಸವಾಗಬೇಕಾಗಿದೆ. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಹೆಸರಿನಲ್ಲಿ 6 ಎಕರೆ ಪ್ರದೇಶವನ್ನು ಸಾರ್ವಜನಿಕ ಕಾರ್ಯಗಳಿಗೆ ಮೀಸಲು ಇಡಲಾಗಿದ್ದು ಅದರ ಅಭಿವೃದ್ಧಿಗೆ ಸರಕಾರದಿಂದ ರೂ 10 ಕೋಟಿ ಅನುದಾನ ಕೋರಲಾಗಿದೆ ಎಂದರು.

ಕುಶಾಲನಗರದ ವ್ಯಾಪ್ತಿಯಲ್ಲಿ ಸರಕಾರ ಈಗಾಗಲೇ ಕೆಲವು ಯೋಜನೆಗಳನ್ನು ಬಿಡುಗಡೆಗೊಳಿಸಿದ್ದು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಸೇರಿದಂತೆ ವಿವಿಧ ಸೌಲಭ್ಯಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ ಎಂದರು.