*ಸಿದ್ದಾಪುರ, ಜೂ. 26: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಾಫಿ ತೋಟಗಳೊಳಗೆ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಅಲ್ಲಿಯೇ ಸಂತಾನೋತ್ಪತ್ತಿ ಮಾಡಿಕೊಂಡು ಅತ್ತಿತ್ತ ಅಲೆದಾಡುತ್ತಾ, ನಷ್ಟವುಂಟು ಮಾಡುತ್ತಿದೆಯಲ್ಲದೆ, ಜನತೆಯಲ್ಲಿ ಭೀತಿಯ ವಾತಾವರಣ ಸೃಷ್ಟಿಯುಂಟು ಮಾಡಿದೆ. ಅಭ್ಯತ್‍ಮಂಗಲ ವ್ಯಾಪ್ತಿಯ ಗ್ರೀನ್‍ಫೀಲ್ಡ್, ಟಾಟಾ ಸಂಸ್ಥೆ ಸೇರಿದಂತೆ ಇತರರ ಕಾಫಿ ತೋಟಗಳಲ್ಲಿ ಕಾಡಾನೆಗಳು ಅಲೆದಾಡುತ್ತಿವೆ. ಹಗಲಿಡೀ ಈ ವ್ಯಾಪ್ತಿಯಲ್ಲಿ ಪಟಾಕಿಗಳ ಅಬ್ಬರವೇ ಕೇಳಿ ಬರುತ್ತಿದ್ದು, ಹುತ್ತರಿ ಹಬ್ಬದ ಸನ್ನಿವೇಶ ಸೃಷ್ಟಿಯಾಗಿದೆ. ಮೀನುಕೊಲ್ಲಿ ವಲಯ ಅರಣ್ಯಾಧಿಕಾರಿ ಬಾನಂಡ ದೇವಿಪ್ರಸಾದ್ ನೇತೃತ್ವದಲ್ಲಿ ಇತ್ತೀಚೆಗೆ ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟಲಾಗಿತ್ತಾದರೂ ಇದೀಗ ಆನೆಗಳು ಮರಳಿ ನಾಡಿಗೆ ಬಂದಿವೆ.

ಇತ್ತೀಚೆಗಷ್ಟೇ ತೋಟವೊಂದರಲ್ಲಿ ಆನೆ ಮರಿ ಸಾವನ್ನಪ್ಪಿದ್ದು, ಇದೀಗ ಮರಿ ಆನೆಯಿದ್ದ ಹಿಂಡು ಮರಿಯನ್ನು ಹುಡುಕುತ್ತಾ ಅತ್ತಿತ್ತ ಅಲೆದಾಡುತ್ತಿವೆ. ಕೃಷಿಕರು ಬೆಳೆದ ಶುಂಠಿ ಬೆಳೆ ಈ ಆನೆಗಳ ಕಾಲಡಿಗೆ ಸಿಲುಕಿ ನಾಶವಾಗಿವೆ.

ಆನೆಗಳ ಓಡಾಟದಿಂದಾಗಿ ಭಯ ಭೀತರಾಗಿರುವ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿಲ್ಲ. ಕಾರ್ಮಿಕರು ಕೆಲಸಕ್ಕೆ ಹೋಗುತ್ತಿಲ್ಲ. ಅರಣ್ಯ ಇಲಾಖೆ ಕೇಂದ್ರದ ಅನುಮತಿ ಪಡೆದು ಆನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿ ಸುವದೇ ಇದಕ್ಕೆ ಪರಿಹಾರವೆಂಬದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

-ಅಂಚೆಮನೆ ಸುಧಿ