ಮಡಿಕೇರಿ, ಜೂ.27 : ರಂಜಾóನ್ ಹಬ್ಬದ ಪ್ರಯುಕ್ತ ಮಡಿಕೇರಿಯ ಅಹ್ಮದಿಯಾ ಮುಸ್ಲಿಂ ಜಮಾಅತ್‍ನ ಬೈತುಲ್‍ಹುದಾಮಸೀದಿಯಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಪ್ರವಚನ ನಡೆಯಿತು.

ಮಸೀದಿಯ ಧರ್ಮಗುರುಗಳಾದ ಹಾಫಿಜ್ó ರಫೀಕ್ ಉಜ್ಜಮ ಅವರ ನೇತೃತ್ವದಲ್ಲಿ ನಮಾಜ್ó ನಿರ್ವಹಿಸಿದ ನಂತರ ಈದ್ ಪ್ರವಚನ ನೀಡಲಾಯಿತು.

ಹಬ್ಬ ಎನ್ನುವದು ಕೇವಲ ಉಂಡು ನಲಿದಾಡಿ ಆನಂದಿಸುವದು ಅಲ್ಲ. ಬದಲಾಗಿ ಆ ದಿನದ ಮಹತ್ವವನ್ನು ಅರಿತು ಆಚರಿಸಿದಾಗ ಮಾತ್ರ ಹಬ್ಬದ ಉದ್ದೇಶ ಈಡೇರುತ್ತದೆ ಎಂದರು.

ಜಮಾಅತ್‍ನ ಅಧ್ಯಕ್ಷರಾದ ಎಂ.ಬಿ. ಜಹೀರ್ ಅಹ್ಮದ್ ಮಾತನಾಡಿ, ರಂಜಾನ್ ಆಚರಣೆಯ ಉದ್ದೇಶ ಹಾಗೂ ಮಹತ್ವದ ಬಗ್ಗೆ ತಿಳಿಸಿದರು. ಮೂವತ್ತು ದಿನಗಳ ಉಪವಾಸ ವ್ರತದಲ್ಲಿ ಹಸಿವಿನ ಮಹತ್ವವನ್ನು ಅರಿತು ವರ್ಷದ ಇತರ ದಿನಗಳಲ್ಲಿಯೂ ಬಡವರಿಗೆ ದಾನಧರ್ಮ ಮಾಡಲು ಮುಂದಾಗಬೇಕೆಂದರು.

ಜಗತ್ತಿನ ಸರ್ವ ಮಾನವ ಕುಲಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ ನಂತರ ಮುಸಲ್ಮಾನ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವಿಶೇಷವಾಗಿ ಮಹಿಳೆಯರು ಕೂಡ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಜಮಾಅತ್‍ನ ಮಾಜಿ ಅಧ್ಯಕ್ಷರಾದ ಎಂ.ಎ. ಬಷೀರ್ ಅಹ್ಮದ್, ತಮೀಂ ಅಬ್ಬಾಸ್, ಪಿ.ಕೆ. ಜಲೀಲ್, ಎಂ.ಯು. ವಸೀಂ ಅಹ್ಮದ್, ಇಬ್ರಾಹಿಂ, ಮಹಮ್ಮದ್ ಅಲಿ, ಎಂ.ಬಿ. ನಾಸಿರ್ ಅಹಮ್ಮದ್, ಎಂ.ಎ. ಮನ್ಸೂರ್ ಅಹ್ಮದ್, ಎಂ.ಎಫ್. ಬಷೀರ್ ಅಹ್ಮದ್, ಜೆ.ಎಂ. ಷರೀಫ್ ಮತ್ತಿತರ ಪ್ರಮುಖರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.