ಮಡಿಕೇರಿ, ಜೂ. 26: ಕಷ್ಟ ಸಹಿಷ್ಣುತೆಯೊಂದಿಗೆ ಹಸಿವಿನ ನಡುವೆ ಈದುಲ್ ಫಿತರ್ (ರಂಜಾನ್) ವೇಳೆಯಲ್ಲಿ ಎಲ್ಲರೂ ಸೇರಿ ಸಾಮೂಹಿಕವಾಗಿ ವಿಶ್ವಶಾಂತಿ ಹಾಗೂ ಮನುಕುಲದ ಒಳಿತಿಗಾಗಿ ಅಲ್ಲಾಹನನ್ನು (ದೇವರನ್ನು) ಪ್ರಾರ್ಥಿಸೋಣ ಎಂದು ಮಹದೇವಪೇಟೆ ಜಾಮಿಯಾ ಮಸೀದಿಯ ಮೌಲ್ವಿ ಮಹಮ್ಮದ್ ಅಸ್ಲಾಂ ಇಮಾಂ ಅವರು ಕರೆ ನೀಡಿದ್ದಾರೆ.ರಂಜಾನ್ ಪ್ರಯುಕ್ತ ಇಂದು ಆಯೋಜಿಸಿದ್ದ ವಿಶೇಷ ಪ್ರಾರ್ಥನೆ ವೇಳೆ ಧಾರ್ಮಿಕ ಉಪನ್ಯಾಸ ನೀಡಿದ ಅವರು, ಮಹಮ್ಮದ್ ಪೈಗಂಬರರು ಅಂದು ಮನುಕುಲದ ಒಳಿತಿಗಾಗಿ ವ್ರತಾಚರಣೆಯ ಮೂಲಕ ಅಲ್ಲಾನ ಸ್ಮರಣೆಗೆ ಅನುವು ಮಾಡಿಕೊಟ್ಟಿರುವದು ಇನ್ನೊಬ್ಬರ ಕಷ್ಟ ನಿವಾರಣೆಗಾಗಿ ಎಂದು ನೆನಪಿಸಿದರು.

(ಮೊದಲ ಪುಟದಿಂದ) ಮುಸ್ಲಿಂ ಬಾಂಧವರು ಒಂದು ತಿಂಗಳು ಉಪವಾಸವಿದ್ದು ಪ್ರಾರ್ಥನೆ ಮೂಲಕ ಶಿಸ್ತು ಬದ್ಧರಾಗಿ ಆಚಾರ, ವಿಚಾರದೊಂದಿಗೆ ತಮ್ಮ ದುಡಿಮೆಯಲ್ಲಿ ಕನಿಷ್ಟ ಶೇ. 2.5 ಅಂಶವನ್ನು ಬಡತನದೊಂದಿಗೆ ಹಸಿವಿನಿಂದ ಬಳಲುವವರಿಗೆ ದಾನ ಮಾಡಬೇಕೆಂದು ವಿಧಿಸಿರುವ ನಿಯಮವನ್ನು ಉಲ್ಲೇಖಿಸಿದರು.

ಆ ಮೂಲಕ ಪ್ರತಿಯೊಬ್ಬರು ಅಲ್ಲಾಹನ ಆದೇಶ ಪಾಲನೆ ಮಾಡಬೇಕಿದ್ದು, ರಂಜಾನ್ ವೇಳೆ ತಿಂಗಳು ಪೂರ್ತಿ ಉಪವಾಸ ವ್ರತದಿಂದ ದಾನ ಧರ್ಮ ಹಾಗೂ ಪ್ರಾರ್ಥನೆಯಿಂದ ಕಷ್ಟದಲ್ಲಿರುವವರಿಗೆ ನೆರವು ನೀಡಬೇಕೆಂಬದು ಇಸ್ಲಾಂ ಧರ್ಮಿಯರ ಕರ್ತವ್ಯವಾಗಿದೆ ಎಂಬದಾಗಿ ಅವರು ಕಿವಿಮಾತು ಹೇಳಿದರು. ಅಧಿಕ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಪರಸ್ಪರ ಶುಭಾಶಯ ಹಂಚಿಕೊಂಡರು. ಆಡಳಿತ ಮಂಡಳಿ ಅಧ್ಯಕ್ಷ ನಝೀರ್ ಖುರೇಶಿ ಹಾಗೂ ಕಾರ್ಯದರ್ಶಿ ಮಹಮ್ಮದ್ ಇಮ್ರಾನ್ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.

ಎಂಟು ಕಡೆ ಪ್ರಾರ್ಥನೆ

ಮಡಿಕೇರಿ ನಗರದ ಎಂಟು ಕಡೆಗಳಲ್ಲಿರುವ ಆಯಾ ಮಸೀದಿಗಳ ಧರ್ಮಗುರುಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಲ್ಲಿನ ಮೌಲ್ವಿಗಳು ಧಾರ್ಮಿಕ ಉಪನ್ಯಾಸ ನೀಡಿದರು. ಮನುಕುಲದ ಒಳಿತಿಗಾಗಿ ಮತ್ತು ವಿಶ್ವಶಾಂತಿಗಾಗಿ ವಿಶೇಷ ಪ್ರಾರ್ಥನೆ ಬಳಿಕ ಪರಸ್ಪರ ಆಲಿಂಗನದೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಸಿಹಿ ಹಂಚಿ ರಂಜಾನ್ ಶುಭಾಶಯ ಕೋರಿದ್ದು, ವಿಶೇವಾಗಿತ್ತು.

ನಗರದ ಗಣಪತಿ ಬೀದಿಯ ಬದ್ರಿಯಾ ಮಸೀದಿ, ಎಂ.ಎಂ. ಮಸೀದಿ ಸೇರಿದಂತೆ ಮಕ್ಕಾ, ಮದೀನ, ಲಷ್ಕರ್, ಭಟ್ಕಳ್, ಸಲಫಿ, ಮಸ್ಜಿದುರಹ್ಮ ಪ್ರಾರ್ಥನಾ ಮಂದಿರಗಳಲ್ಲಿ ಇಂದು ಸಾಮೂಹಿಕ ರಂಜಾನ್ ಪ್ರಾರ್ಥನೆ ನಡೆಯಿತು.

ಮಡಿಕೇರಿ ನಗರ ಸೇರಿದಂತೆ ಕಳೆದ ಒಂದು ತಿಂಗಳಿನಿಂದ ಉಪವಾಸ ವ್ರತಾಚರಣೆ ನಡೆಸಿದ್ದ ಮುಸ್ಲಿಮರು ಇಂದು ತಮ್ಮ ದೈನಂದಿನ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಸಡಗರ ಸಂಭ್ರಮದ ರಂಜಾನ್ ಆಚರಣೆಯಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು.

ಸೋಮವಾರಪೇಟೆ: ಸೋಮವಾರಪೇಟೆ, ಮಾದಾಪುರ, ಶನಿವಾರಸಂತೆ, ಕೊಡ್ಲಿಪೇಟೆ, ಐಗೂರು ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ಪ್ರಾರ್ಥನಾ ಮಂದಿರಗಳಲ್ಲಿ ರಂಜಾನ್ ಪ್ರಾರ್ಥನೆಯಲ್ಲಿ ಸಾಮೂಹಿಕವಾಗಿ ಭಾಗಿಯಾಗಿದ್ದ ಮುಸ್ಲಿಮರು ಪರಸ್ಪರ ಶುಭಾಶಯಗಳೊಂದಿಗೆ ತಮ್ಮ ಸಂತೋಷ ಹಂಚಿಕೊಳ್ಳುತ್ತಿದ್ದ ದೃಶ್ಯ ಎದುರಾಯಿತು. ಸೋಮವಾರಪೇಟೆ ತಾಲೂಕು ಕೇಂದ್ರದ ಏಳು ಕಡೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.

ವೀರಾಜಪೇಟೆ: ದಕ್ಷಿಣ ಕೊಡಗಿನ ತಾಲೂಕು ಕೇಂದ್ರ ವೀರಾಜಪೇಟೆಯಲ್ಲಿ ಕೂಡ ಸಂಭ್ರಮದ ರಂಜಾನ್ ಆಚರಣೆ ನಡೆಯಿತು. ಪಟ್ಟಣದ ಪ್ರಮುಖ ಪ್ರಾರ್ಥನಾ ಮಂದಿರಗಳು ಸೇರಿದಂತೆ ಈ ಪ್ರದೇಶದ 13 ಕಡೆಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಅಧಿಕ ಸಂಖ್ಯೆಯ ಸಮಾಜ ಬಾಂಧವರು ಭಾಗವಹಿಸಿದ್ದರು.

ಅಲ್ಲದೆ ಗೋಣಿಕೊಪ್ಪಲು, ಪಾಲಿಬೆಟ್ಟ, ಪೊನ್ನಂಪೇಟೆ ಸೇರಿದಂತೆ ದಕ್ಷಿಣ ಕೊಡಗಿನ ಪ್ರಮುಖ ಮಸೀದಿಗಳಲ್ಲಿ ಅಧಿಕ ಸಂಖ್ಯೆಯ ಮುಸ್ಲಿಮರು ಇಂದಿನ ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿತ್ತು.

ಎಮ್ಮೆಮಾಡು: ಕೊಡಗಿನ ಐತಿಹಾಸಿಕ ಎಮ್ಮೆಮಾಡು ದರ್ಗಾ ಶರೀಫ್ ಪ್ರಾರ್ಥನಾ ಮಂದಿರದಲ್ಲಿ ಬೆಳಿಗ್ಗೆ 8.45ಕ್ಕೆ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಪಾಲ್ಗೊಂಡು ವಿಶ್ವಶಾಂತಿಗಾಗಿ ಅಲ್ಲಾಹುವಿನ ಮೊರೆ ಹೋಗುವ ಮೂಲಕ ಶುಭಾಶಯ ಹಂಚಿಕೊಂಡರು. ಎಮ್ಮೆಮಾಡು ಖತೀಬರು ಧಾರ್ಮಿಕ ಉಪನ್ಯಾಸ ನೀಡಿ, ಹಸಿವನ್ನು ಅಥೈಸಿಕೊಳ್ಳುವ ಸಲುವಾಗಿ ಉಪವಾಸವಿದ್ದು, ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಕೆಲಸಕ್ಕೆ ರಂಜಾನ್ ಹಬ್ಬ ಪ್ರೇರಣೆ ನೀಡಲಿದೆ ಎಂದರು. ಮಸೀದಿ ಆಡಳಿತ ಮಂಡಳಿ ಪ್ರಮುಖರ ಸಹಿತ ಅಧಿಕ ಮಂದಿ ಪಾಲ್ಗೊಂಡಿದ್ದರು.

ಎಮ್ಮೆಮಾಡು ಮಾತ್ರವಲ್ಲದೆ ಅಯ್ಯಂಗೇರಿ, ಪಡಿಯಾಣಿ, ನಾಪೋಕ್ಲು ಹಳೆ ತಾಲೂಕು, ಕೊಳಕೇರಿ, ಕುಂಜಿಲ, ಕಕ್ಕಬೆ, ಕೊಟ್ಟಮುಡಿ, ಹೊದವಾಡ, ತಾವೂರು ಮುಂತಾದೆಡೆ ಆಯಾ ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕವಾಗಿ ರಂಜಾನ್ ಪ್ರಯುಕ್ತ ವಿಶೇಷ ಪ್ರಾರ್ಥನೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

ಕುಶಾಲನಗರ: ಕುಶಾಲನಗರ ಸುತ್ತಮುತ್ತಲಿನ ಮಸೀದಿಗಳಲ್ಲಿ ಮುಸ್ಲಿಮರು ಆಯಾ ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಡಗರದಿಂದ ರಂಜಾನ್ ಆಚರಿಸಿದರು.

ವೀರಾಜಪೇಟೆ ಗ್ರಾಮೀಣ: ವೀರಾಜಪೇಟೆಯಲ್ಲಿ ಕೂಡ ಇಂದು ರಂಜಾನ್ ಪ್ರಾರ್ಥನೆಯಲ್ಲಿ ಹೆಚ್ಚಿನ ಮುಸ್ಲಿಂ ಬಾಂಧವರು ಪಾಲ್ಗೊಂಡು ಸುತ್ತ ಮುತ್ತಲಿನ 15 ಕಡೆಗಳಲ್ಲಿನ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಲ್ಲಲ್ಲಿ ಆಯಾ ಪ್ರಾರ್ಥನಾ ಮಂದಿರಗಳ ಧರ್ಮಗುರುಗಳು ಉಪನ್ಯಾಸ ನೀಡಿದರು.

ಸಿದ್ದಾಪುರ, ಚೆಟ್ಟಳ್ಳಿ, ಕೊಂಡಂಗೇರಿ ಸೇರಿದಂತೆ ಆ ಸುತ್ತಮುತ್ತಲಿನ 15 ಕಡೆಗಳಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಪ್ರಾರ್ಥನೆಯೊಂದಿಗೆ ಧಾರ್ಮಿಕ ಸಭೆಗಳಲ್ಲಿ ಪಾಲ್ಗೊಂಡಿದ್ದರು.

ವೀರಾಜಪೇಟೆ

ನಗರದ ಮುಖ್ಯ ಬೀದಿಯ ಶಾಫೀ ಜುಮಾ ಮಸೀದಿಯಲ್ಲಿ ಮೌ|ಖಲೀಲ್ ಇರ್ಫಾನಿ, ಖಾಸಗಿ ಬಸುನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ನೌಷಾದ್ ದಾರಿಮಿ, ಗೋಣಿಕೊಪ್ಪ ರಸ್ತೆಯ ಇಮಾಮ್ ಮುಸ್ಲಿಂ ಜುಮಾ ಮಸೀದಿಯಲ್ಲಿ ಮೌ|| ಇಬ್ರಾಹೀಂ ಮೌಲವಿ ಬಾಖವಿ, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಮೌ||ಅಬೂ ಉಸಾಮಾ , ಮಲಬಾರ್ ರಸ್ತೆಯ ಸಲಫಿ ಮಸೀದಿಯಲ್ಲಿ ಮುನೀರ್ ಸ್ವಲಾಹಿ, ಬಂಗಾಳಿ ಬೀದಿಯ ಮಸ್ಜಿದ್-ಎ-ಅಝಂನಲ್ಲಿ ಮೌ||ಸಿರಾಜ್ ಅಹಮದ್ ಸಾಹೆಬ್, ಅಪ್ಪಯ್ಯ ಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಮೌ||ಮರ್‍ಗೂಬ್ ಆಲಂ, ಸುಣ್ಣದಬೀದಿಯ ಮದೀನಾ ಮಸೀದಿಯಲ್ಲಿ ಮೌ||.ಮುಝಮಿಲ್ , ಪೆರಂಬಾಡಿಯ ಖಿಳರಿಯಾ ಮಸೀದಿಯಲ್ಲಿ ಮೌ||ಹ್ಯಾರಿಸ್ ಬಾಖವಿ, ಗಡಿಯಾರ ಕಂಬದ ಬಳಿಯ ಬಾದ್‍ಷಾ ಮಸೀದಿಯಲ್ಲಿ ಮೌ||.ಮಖ್‍ಸೂದ್ ಸಾಬ್ ಈದ್ ವಿಶೇಷ ನಮಾಝ್ ಹಾಗೂ ಪ್ರವಚನಕ್ಕ್ಕೆ ನೇತೃತ್ವ ವಹಿಸಿದ್ದರು.

ನಗರದ ಹನಫಿ ಹಾಗೂ ಶಾಫಿ ಮುಸಲ್ಮಾನರು ಒಂದೇ ದಿನ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು. ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸೋಮವಾರಪೇಟೆ

ಮುಸಲ್ಮಾನ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ಅನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಹೊರ ವಲಯಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಳೆದ ಒಂದು ತಿಂಗಳಿಂದ ಉಪವಾಸ ವ್ರತವನ್ನು ಆಚರಿಸಿಕೊಂಡು ಬಂದ ಮುಸಲ್ಮಾನರು ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಸೋಮವಾರ ಹಬ್ಬದಾಚರಣೆಯಲ್ಲಿ ತೊಡಗಿಕೊಂಡರು. ಬೆಳಗ್ಗೆ ತಮ್ಮ ವ್ಯಾಪ್ತಿಯ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿ, ಪರಸ್ಪರ ಆಲಂಗಿಸಿಕೊಳ್ಳುತ್ತಾ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಬಜೆಗುಂಡಿ ಖಿಳಾರಿಯಾ ಜುಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಈ ಸಂದರ್ಭ ಮಸೀದಿಯ ಧರ್ಮಗುರು ಹಂಸ ಮಿಸ್ಬಾಯಿ, ಸಮಿತಿಯ ಅಧ್ಯಕ್ಷ ಕೆ.ಎ. ಯಾಕೂಬ್, ಗೌರವಾಧ್ಯಕ್ಷ ಅಬ್ದುಲ್ ಖಾದರ್, ಉಪಾಧ್ಯಕ್ಷ ಹನೀಫ್, ಪ್ರ.ಕಾರ್ಯದರ್ಶಿ ಸುಲೈಮಾನ್ ಇದ್ದರು.

ಪಟ್ಟಣದ ಜಲಾಲಿಯಾ ಮಸೀದಿ, ಹನಫಿ ಜಾಮೀಯಾ ಮಸೀದಿ, ಕಲ್ಕಂದೂರು, ತಣ್ಣೀರುಹಳ್ಳ, ಕಾಗಡಿಕಟ್ಟೆ, ಹೊಸತೋಟ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ನಡೆಸಿ, ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಕೊಟ್ಟಮುಡಿ ಮರ್ಕಝಲ್ ಹಿದಾಯ ವತಿಯಿಂದ ಜಿಲ್ಲೆಯ ವಿವಿಧೆಡೆಯ ಸರ್ಕಾರಿ ಆಸ್ಪತ್ರೆಯಲ್ಲಿರುವ ಬಡರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸಲಾಯಿತು.

ಗೋಣಿಕೊಪ್ಪ ಯುನೈಟೆಡ್ ಜಮಾಹತ್‍ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮ್ಮದ್ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸಿ ಚಾಲನೆ ನೀಡಿದರು.

ಗೋಣಿಕೊಪ್ಪಲಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಸುರೇಶ್‍ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರುವತೊಕ್ಲುವಿನ ಮೊಯ್ದು,ಅಶ್ರಫ್,ಮೆಹರೂಫ್ ತನ್ವೀರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಶನಿವಾರಸಂತೆ

ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಸಂಭ್ರಮ - ಸಡಗರದಿಂದ ಆಚರಿಸಿದರು.

ಬೆಳಿಗ್ಗೆ ಈದ್ಗಾ ಮಸೀದಿ ಹಾಗೂ ಮದೀನ ಮಸೀದಿಯ ಮುಸ್ಲಿಂ ಬಾಂಧವರು ಪಟ್ಟಣದ ಮುಖ್ಯರಸ್ತೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ಒಟ್ಟಾಗಿ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಧರ್ಮಗುರು ಅಬ್ದುಲ್ ಹನಾನ್ ಅವರ ಧಾರ್ಮಿಕ ಪ್ರವಚನ ಆಲಿಸಿದರು. ಮಸೀದಿಗಳ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.