ಸೋಮವಾರಪೇಟೆ, ಜೂ.26 : ಸಾಮಾಜಿಕವಾಗಿ ನೊಂದವರೂ ಸೇರಿದಂತೆ ಕಾನೂನಿನ ಅರಿವಿನ ಕೊರತೆ ಇರುವವರು ತಮಗೆ ಅನ್ಯಾಯವಾದಾಗ ಉಚಿತ ಕಾನೂನು ನೆರವಿನ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದೆಬರಬೇಕು ಎಂದು ಇಲ್ಲಿನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡಮನಿ ಕರೆ ನೀಡಿದರು.

ಇಲ್ಲಿನ ಪೊಲೀಸ್ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ನಗರದ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ನೊಂದವರಿಗೆ ಕಾನೂನಿನ ನೆರವು-ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ವಿವಿಧ ಘಟನಾವಳಿಗಳು, ಕಾರಣಗಳಿಂದ ನೊಂದಿರುವ ಎಲ್ಲರಿಗೂ ಉಚಿತ ಕಾನೂನಿನ ನೆರವನ್ನು ಸರ್ಕಾರಗಳು ಒದಗಿಸುತ್ತವೆ. ನ್ಯಾಯಾಲಯಗಳು ಮತ್ತು ಸಂಬಂಧಪಟ್ಟ ಇಲಾಖೆಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದ ನ್ಯಾಯಾಧೀಶರು, ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ನೀಡಿದರೆ ಅಪರಾಧ ರಹಿತ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದರು.

ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿದರಷ್ಟೇ ಸಾಲದು. ಸಾಮಾಜಿಕ ಜೀವನ ನಡೆಸಲು ಬೇಕಾದ ಸಂಸ್ಕಾರವನ್ನು ಕಲಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ವಹಿಸಿದ್ದರು. ನೊಂದವರಿಗೆ ದೊರಕುವ ಉಚಿತ ಕಾನೂನು ನೆರವುಗಳ ಬಗ್ಗೆ ವಕೀಲ ಮನೋಹರ್ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಸದಸ್ಯೆ ತಂಗಮ್ಮ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶೈಲಾ, ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಠಾಣಾಧಿಕಾರಿ ಗಳಾದ ಶಿವಣ್ಣ, ಮರಿಸ್ವಾಮಿ, ಮಹಿಳಾ ಸಮಾಜ ಅಧ್ಯಕ್ಷೆ ನಳಿನಿಗಣೇಶ್ ಅವರುಗಳು ಉಪಸ್ಥಿತರಿದ್ದರು.