ಸೋಮವಾರಪೇಟೆ, ಜೂ. 27: ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಮೀಸಲಿಟ್ಟಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಸೂಚನೆ ನೀಡಿದರು.ಕೇಂದ್ರ ಸರ್ಕಾರ ಪುರಸ್ಕøತ ಯೋಜನೆಗಳ ಅನುಷ್ಠಾನ ಸಂಬಂಧ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಗಾ ಯೋಜನೆ ಅನುಷ್ಠಾನದಲ್ಲಿ ಪಿಡಿಓಗಳು ವೈಯಕ್ತಿವಾಗಿ ಆಸಕ್ತಿ ವಹಿಸಿ ಹೆಚ್ಚಿನ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಬೇಕು. ಇನ್ನಷ್ಟು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಮಳೆಗಾಲ ಪ್ರಾರಂಭವಾಗಿರುವದ ರಿಂದ ವಿದ್ಯುತ್ ಇಲಾಖೆ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧವಿರಬೇಕು. ಅಗತ್ಯ ಲೈನ್‍ಮೆನ್ ಗಳು, ಪರಿಕರಗಳು, ಟ್ರಾನ್ಸ್‍ಫಾರ್ಮರ್ ಗಳನ್ನು ಹೊಂದಿಕೊಂಡಿರಬೇಕು ಎಂದು ಸಂಸದರು ಇಲಾಖೆಯ ಅಭಿಯಂತರ ನೀಲಶೆಟ್ಟಿ ಅವರಿಗೆ ಸೂಚಿಸಿದರು. ಬ್ಯಾಡಗೊಟ್ಟ ಗ್ರಾ.ಪಂ.ನ ಬೆಂಬಳೂರಿನಲ್ಲಿ 1 ವರ್ಷ ಕಳೆದರೂ ಟ್ರಾನ್ಸ್‍ಫಾರ್ಮರ್ ಅಳವಡಿಸಿಲ್ಲ ಎಂದು ಪಿಡಿಓ ಸಭೆಯ ಗಮನಕ್ಕೆ ತಂದರು.

ಒಂದು ಟ್ರಾನ್ಸ್‍ಫಾರ್ಮರ್ ಅಳವಡಿಸಲು ಒಂದು ವರ್ಷ ಬೇಕೇನ್ರೀ? ತಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆದು ಟ್ರಾನ್ಸ್ ಫಾರ್ಮರ್ ಅಳವಡಿಸಲು ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿದ್ದ ಶಾಸಕ ಅಪ್ಪಚ್ಚುರಂಜನ್ ಅಭಿಯಂತರರಿಗೆ ನಿರ್ದೇಶನ ನೀಡಿದರು.

ಹಾನಗಲ್ಲುಬಾಣೆಯಲ್ಲಿ 66 ಕೆ.ವಿ. ವಿದ್ಯುತ್ ಪ್ರಸರಣಾ ಕೇಂದ್ರ ಸ್ಥಾಪನೆ ಸಂಬಂಧ ಈಗಾಗಲೇ ಕಾರ್ಯೋನ್ಮುಖವಾಗಿದ್ದೇವೆ ಎಂದು ನೀಲಶೆಟ್ಟಿ ತಿಳಿಸಿದರು. ಮಳೆಗಾಲದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಸೂಚಿಸಿದರು.

ಕುಶಾಲನಗರದಲ್ಲಿ 3, ಶಾಂತಳ್ಳಿ, ಬಿಳಿಗೇರಿ, ಶಿರಂಗಾಲ, ಮಾದಾಪುರ, ಸೋಮವಾರಪೇಟೆಯಲ್ಲಿ ತಲಾ ಒಂದೊಂದು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಹೊರಭಾಗಕ್ಕೆ ತೆರಳಿದ ವ್ಯಕ್ತಿಗಳಲ್ಲಿ ರೋಗ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ರೋಗ ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಪಾರ್ವತಿ ಮಾಹಿತಿ ನೀಡಿದರು.

ಮಳೆಗಾಲವಾದ್ದರಿಂದ ಕಾಫಿ ತೋಟಗಳಲ್ಲಿ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದು, ಹಾವುಗಳು ಕಚ್ಚಿ ಅಸ್ವಸ್ಥರಾಗುವ ಸಂಭವ ಇರುವದ ರಿಂದ ಸ್ಥಳೀಯ ಎಲ್ಲಾ ಆಸ್ಪತ್ರೆಗಳಲ್ಲಿ ಸಂಬಂಧಿಸಿದ ಔಷದಿಗಳನ್ನು ಶೇಖರಿಸಿ ಇಡಬೇಕು ಎಂದು ಪ್ರತಾಪ್ ಸಿಂಹ ತಿಳಿಸಿದರು.

ತಾಲೂಕಿನ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಬಗ್ಗೆ ಸ್ಥಳೀಯರು ದೂರುತ್ತಿದ್ದಾರೆ. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಿ ಎಂದು ಶಾಸಕ ಅಪ್ಪಚ್ಚು ರಂಜನ್ ಅವರು, ಸಂಬಂಧಿ ಸಿದ ಇಲಾಖಾ ಇಂಜಿನಿಯರ್ ವೀರೇಂದ್ರ ಅವರಿಗೆ ಸೂಚಿಸಿದರು.

ತಾಲೂಕಿನಲ್ಲಿ 68 ಸಾವಿರ ರೈತರಿದ್ದು, ಕೃಷಿ ಇಲಾಖೆಯಿಂದ ಈಗಾಗಲೇ 42 ಸಾವಿರ ರೈತರಿಗೆ ಮಣ್ಣು ಪರೀಕ್ಷಾ ಕಾರ್ಡ್‍ಗಳನ್ನು ವಿತರಿಸಲಾಗಿದೆ. ಉಳಿದವರಿಗೆ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಹಾಯಕ ಕೃಷಿ ಇಲಾಖಾ ನಿರ್ದೇಶಕ ರಾಜಶೇಖರ್ ಸಭೆಗೆ ತಿಳಿಸಿದರು. ಕೇಂದ್ರ ಸರ್ಕಾರ ಪ್ರಾಯೋಜಿತ ಮಣ್ಣು ಪರೀಕ್ಷಾ ಕಾರ್ಡ್‍ಗಳನ್ನು ವಿತರಿಸುವ ಸಂದರ್ಭ ಸ್ಥಳೀಯ ಶಾಸಕರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸಿ. ಉಳಿದ ರೈತರಿಗೂ ಈ ಬಗ್ಗೆ ಜಾಗೃತಿ ಮೂಡಿಸಿ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದರು.

ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರು ಫಸಲ್ ಭಿಮಾ ಯೋಜನೆಗೆ ಒಳಪಡಲು ಹಿಂದೇಟು ಹಾಕಿದರೆ ಕೃಷಿ ಬೆಳೆಗಳನ್ನು ಬೆಳೆಯುವ ರೈತರನ್ನು ಈ ಯೋಜನೆಗೆ ಸೇರಿಸಿ. ಕೃಷಿ ಫಸಲು ಕೈಕೊಡುವ ಸಂದರ್ಭ ಸರ್ಕಾರದ ಸವಲತ್ತು ದೊರಕುವಂತೆ ಮಾಡಿ ಎಂದು ಸಂಸದರು ತಿಳಿಸಿದರು.

ತೋಟಗಾರಿಕಾ ಬೆಳೆಗಳನ್ನು ಮಾರಾಟ ಮಾಡುವ ಸಂದರ್ಭ ರೈತರಿಗೆ ಮಾರುಕಟ್ಟೆಗಳ ಅಗತ್ಯ ಮಾಹಿತಿಯನ್ನು ಒದಗಿಸಬೇಕು. ತಾಲೂಕು ವ್ಯಾಪ್ತಿಯಲ್ಲಿ ಕೃಷಿ ಬೆಳೆಗಳನ್ನು ಶೇಖರಿಸಿಡಲು ಶೀಥಿಲೀಕರಣ ಘಟಕ ನಿರ್ಮಿಸಲು ಯಾರಾದರೂ ಮುಂದಾದರೆ ಕೇಂದ್ರ ಸರ್ಕಾರವೂ ಅನುದಾನ ಒದಗಿಸಲಿದೆ. ಈ ಬಗ್ಗೆ ಜಾಗೃತಿ ಮೂಡಿಸಿ ಎಂದ ಸಂಸದರು, ಮುದ್ರಾ ಯೋಜನೆ ಬಗ್ಗೆ ಇನ್ನಷ್ಟು ವ್ಯಾಪಕ ಪ್ರಚಾರ ಆಗಬೇಕಿದೆ. ಕೆಲವೊಂದು ಬ್ಯಾಂಕ್‍ಗಳು ಆಸಕ್ತರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇಂತಹ ಬ್ಯಾಂಕ್‍ಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿಯ ಸಭೆಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನಿರಂತರ ಗೈರಾಗುತ್ತಿ ದ್ದಾರೆ. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಯಾವದೇ ಕ್ರಮಕ್ಕೆ ಶಿಫಾರಸ್ಸು ಮಾಡುತ್ತಿಲ್ಲ. ಇಂದಿನ ಸಭೆಗೂ ಎಸಿಎಫ್ ಹಾಗೂ ಆರ್‍ಎಫ್‍ಓ ಬಂದಿಲ್ಲ. ಸಾಮಾಜಿಕ ಅರಣ್ಯ ಇಲಾಖೆಯವರೂ ನಾಪತ್ತೆಯಾಗಿದ್ದಾರೆ. ಇವರುಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಆರೋಪಿಸಿದರು.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಏನು ಮಾಡಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಗ್ರಾ.ಪಂ.ನಿಂದ ಹಿಡಿದು ರಾಜ್ಯ ಸರ್ಕಾರದವರೆಗೂ ಕೇಂದ್ರದ ಅನುದಾನ ಹರಿದುಬರುತ್ತಿದೆ. ಕೇಂದ್ರದ ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನದೆಂದು ಬಿಂಬಿಸಿಕೊಳ್ಳುತ್ತಿದೆ. ಅಧಿಕಾರಿಗಳು ಕೇಂದ್ರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸಿಕೊಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಸೂಚಿಸಿದರು.

ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರುಗಳು ಉಪಸ್ಥಿತ ರಿದ್ದರು. ವಿವಿಧ ಇಲಾಖಾಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.