ಮಡಿಕೇರಿ, ಜೂ. 27: ಮಾನವತಾ ಪ್ರೇಮಿ ಅರಸನಾಗಿದ್ದ..., ಎಲ್ಲರೂ ಬದುಕಬೇಕೆಂಬ ಮನಸ್ಥಿತಿಯ ನಾಡಪ್ರಭು ಕೆಂಪೇಗೌಡರು ಆದರ್ಶ ಪ್ರಾಯರಾಗಿದ್ದು, ಅವರ ಆದರ್ಶ ಇಂದಿಗೂ ಪ್ರಸ್ತುತವಾಗಿದೆ ಎಂದು ಗಣ್ಯರು ಅಭಿಮತ ವ್ಯಕ್ತಪಡಿಸಿದ್ದಾರೆ.ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ಇಲ್ಲಿನ ಹೊಟೇಲ್ ರಾಜ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಕೆಂಪೇಗೌಡರು ಅವಿರತ ಶ್ರಮದಿಂದ ಮಹಾನಗರಿ ಬೆಂಗಳೂರನ್ನು ನಿರ್ಮಿಸಿದ್ದಾರೆ. ಗೌಡರ ದೂರದೃಷ್ಟಿತ್ವ, ಛಲ, ಎಲ್ಲರಿಗೂ ಬದುಕಲು ಅವಕಾಶ ನೀಡಬೇಕೆಂಬ ಸದುದ್ದೇಶದೊಂದಿಗೆ ಕೆರೆ ಕಟ್ಟೆಗಳನ್ನು ನಿರ್ಮಿಸಿ ಕುಡಿಯುವ ನೀರು, ರಾಜಕಾಲುವೆಗಳ ಮೂಲಕ ಕೃಷಿಗೆ ಅವಕಾಶ ಕಲ್ಪಿಸಿದ್ದರು. ವೃತ್ತಿ ಜನಾಂಗಗಳನ್ನು ಗುರುತಿಸುವ ಸಲುವಾಗಿ ಪ್ರತಿಯೊಂದು ಪೇಟೆಗಳಿಗೂ ಹೆಸರನ್ನಿಟ್ಟು ಗೌರವಿಸಿದ್ದರು. ಅವರನ್ನು ನೆನೆÀಪಿಸಿಕೊಳ್ಳುವದು ಧರ್ಮವೆಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಕೆಂಪೇಗೌಡರು ಸಮಾಜದ ಆಸ್ತಿ, ಇವರ ಜನ್ಮ ದಿನಾಚರಣೆಯನ್ನು ನಾಡಹಬ್ಬ ದಸರಾದಂತೆ ಎಲ್ಲರೂ ಒಟ್ಟಾಗಿ ಸೇರಿ ಆಚರಿಸುವಂತಾಗ ಬೇಕೆಂದು ಹೇಳಿದರು.

ಬೆಂಗಳೂರನ್ನು ವಿಶ್ವ ನೋಡುತ್ತಿದೆ. ಇದರ ನಿಮಾತೃ ಕೆಂಪೇಗೌಡರನ್ನು

(ಮೊದಲ ಪುಟದಿಂದ) ನಾವು ನೆನಪಿಸಿ ಕೊಳ್ಳಬೇಕು. ಇಂದಿನ ಯುವಪೀಳಿಗೆ ಮೊಬೈಲ್, ಇಂಟರ್‍ನೆಟ್‍ಗಳಲ್ಲಿ ಮುಳುಗಿ ಹೋಗಿದ್ದು, ಹಿರಿಯರನ್ನು ಮರೆಯುತ್ತಿದ್ದಾರೆ. ಇದು ಆಗಬಾರದೆಂದು ಹೇಳಿದರು.

ಮುಖ್ಯ ಭಾಷಣಕಾರರಾಗಿದ್ದ ವಿ.ಪಿ. ಶಶಿಧರ್ ಮಾತನಾಡಿ, 500 ವರ್ಷಗಳ ಹಿಂದೆ ಯೋಜನಾ ಬದ್ಧವಾಗಿ, ವ್ಯವಸ್ಥಿತವಾಗಿ ನಗರ ಕಟ್ಟಿದ ರೀತಿ ಜಗತ್ತಿನಲ್ಲೇ ವಿಖ್ಯಾತವಾಗಿದ್ದು, ಕೆಂಪೇಗೌಡರ ಆಡಳಿತದ ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಕೆಂಪೇಗೌಡರು ಪರಾಕ್ರಮಿಯೂ ಆಗಿದ್ದರು. ಕೆಂಪೇಗೌಡರಲ್ಲಿದ್ದ ದೂರಾಲೋಚನೆ, ಎಲ್ಲರಿಗಾಗಿ ಬದುಕಬೇಕೆಂಬ ಮನಸ್ಥಿತಿಯಿಂದ ಮಾನವತಾ ಪ್ರೇಮಿ ಅರಸರಾಗಿದ್ದರು ಎಂದು ಕೆಂಪೇಗೌಡರ ಪೂರ್ವಾಪರ ಇತಿಹಾಸವನ್ನು ತೆರೆದಿಟ್ಟರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಸದನದಲ್ಲಿ ನಮ್ಮೆಲ್ಲರ ಹೋರಾಟದ ಫಲವಾಗಿ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನಿಡಲಾಗಿದೆ. ವಿಶ್ವಮಟ್ಟದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಗುರುತಿಸಿಕೊಂಡಿದ್ದರೂ, ಇಂದು ಬೆಂಗಳೂರಿನಲ್ಲಿ ಕನ್ನಡ ಮಾಯವಾಗಿದ್ದು, ಆಂಧ್ರ, ತಮಿಳುನಾಡಿನಲ್ಲಿದ್ದೆವೆಯಾ? ಎಂಬ ಭಾವನೆ ಮೂಡುತ್ತದೆ. ಈ ಪರಿಸ್ಥಿತಿ ಮರೆಯಾಗಬೇಕು. ಕನ್ನಡಕ್ಕೆ ಒತ್ತು ನೀಡುವದರೊಂದಿಗೆ ಕನ್ನಡ ಉಳಿಸಿ ಬೆಳೆಸುವಂತಾಗಬೇಕೆಂದರು.

ನಾವುಗಳು ಕೃಷಿಕರು, ಭೂಮಿಗೆ ರಾಜರುಗಳು, ದೇಶದ ರಕ್ಷಣೆಗೂ ಮುಂದಾಗಬೇಕು, ಇಂತಹ ಸಂದೇಶವನ್ನು ಯುವಪೀಳಿಗೆಗೆ ತಲಪಿಸುವಂತಾಗಬೇಕೆಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಶ್ರೀಕೃಷ್ಣ, ಶ್ರೀ ರಾಮನಿಂದ ಹಿಡಿದ್ದು, ದಾರ್ಶನಿಕರು, ಪವಾಡಪುರುಷರ ಜನ್ಮ ದಿನಾಚರಣೆಗಳನ್ನು ವರ್ಷ ಪೂರ್ತಿ ಆಚರಿಸುತ್ತೇವೆ. ಈ ಮಹಾನ್ ಸಾಧಕರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಲಿ ಎಂಬದೇ ಇದರ ಆಶಯವಾಗಿದೆ ಎಂದು ಹೇಳಿದರು. ಬೆಂಗಳೂರಿನ ಮಣ್ಣಿನ ಗುಣವನ್ನು ಅರಿತಿದ್ದ, ಒಕ್ಕಲಿಗ ಕೆಂಪೇಗೌಡರು ಮಹಾನಗರವನ್ನು ಕಟ್ಟಿದರು.

ಇದು ಹವಾನಿಯಂತ್ರಿತ ನಗರವಾಗಿದ್ದು, ಯಾವದೇ ಮಹಾನಗರದಲ್ಲಿ ಇಂತಹ ಹವಾಗುಣ ಇಲ್ಲವೆಂದು ಹೇಳಿದರು. ಎಲ್ಲರೂ ನಮ್ಮವರು ಎಂಬ ಆದರ್ಶ ಹೊಂದಿದ ವ್ಯಕ್ತಿಯ ಜನ್ಮ ದಿನಾಚರಣೆ ಅರ್ಥಪೂರ್ಣವೆಂದರು.

ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಒಕ್ಕಲಿಗರು ಕೊಡುವ ಕೈಗಳಾಗಿದ್ದು, ಸಮಾಜಗಳು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರಿಗೆ ನೆರವಾಗುವ ಕೆಲಸ ಮಾಡಬೇಕು. ಇದಕ್ಕೆ ಉದಾಹರಣೆ ಕೆಂಪೇಗೌಡರಾಗಿದ್ದಾರೆ ಎಂದು ಹೇಳಿದರು. ಪತ್ರಿಕೋದ್ಯಮಿ ಡಾ. ನವೀನ್‍ಕುಮಾರ್ ಮಾತನಾಡಿ, ದಾರ್ಶನಿಕರ ಜನ್ಮ ದಿನಾಚರಣೆ ಜನಾಂಗ, ಜಾತಿಗೆ ಸೀಮಿತವಾಗಬಾರದು, ಸಮಾಜ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದಿರುವವರನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದರು.

ಕೊಡಗು - ದಕ್ಷಿಣ ಕನ್ನಡ ಗೌಡ ಒಕ್ಕಲಿಗ ಒಕ್ಕೂಟದ ಅಧ್ಯಕ್ಷ ಭರತ್ ಮಾತನಾಡಿ, ಒಕ್ಕಲಿಗರು ಹಾಗೂ ಅರೆಭಾಷಿಕ ಗೌಡರು ಒಂದಾಗಿ ಒಂದೇ ವೇದಿಕೆಗೆ ಬರುವ ಕೆಲಸವಾಗಬೇಕೆಂದು ಆಶಿಸಿದರು.

ಮಡಿಕೇರಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಶುಭ ಹಾರೈಸಿದರು. ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷ ಎಂ.ಪಿ. ಕೃಷ್ಣರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಮಾಜಿ ಸದಸ್ಯೆ ದೀರ್ಘಕೇಶಿ ಶಿವಣ್ಣ, ಕೆ.ಎಂ. ಲೋಕೇಶ್, ತಾಲೂಕು ಅಧ್ಯಕ್ಷರುಗಳಾದ ಎ.ಆರ್. ಮುತ್ತಣ್ಣ, ರಾಮಚಂದ್ರ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಕುಶಾಲನಗರ ಯುವ ಘಟಕದ ಅಧ್ಯಕ್ಷ ಕುಶಾಲಪ್ಪ ಇನ್ನಿತರರಿದ್ದರು.

ಜಾನಕಿ ಪ್ರಾರ್ಥಿಸಿದರೆ, ಕೆ.ಕೆ. ಮಂಜುನಾಥ್ ಕುಮಾರ್ ನಿರೂಪಿಸಿದರು. ವಿ.ಪಿ. ಸುರೇಶ್ ಸ್ವಾಗತಿಸಿದರೆ, ತಾಕೇರಿ ಪೊನ್ನಪ್ಪ ವಂದಿಸಿದರು.