ಸುಂಟಿಕೊಪ್ಪ, ಜೂ. 26: ಮಾದಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಮೂವತ್ತೋಕ್ಲು ಗ್ರಾಮದಲ್ಲಿ ಕಳೆದ ಸಾಲಿನ ಜಿ.ಪಂ. ಆಡಳಿತದ ಅವಧಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. 6 ವರ್ಷ ಕಳೆದರೂ ಈ ಯೋಜನೆ ಪೂರ್ಣಗೊಳ್ಳಲಿಲ್ಲ, ಗ್ರಾಮಸ್ಥರಿಗೆ ಕುಡಿಯುವ ನೀರಿನ ಭಾಗ್ಯವೂ ಲಭ್ಯವಾಗಿಲ್ಲ.

ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ ಮೋಟಾರ್‍ಗೆ ವಿದ್ಯುತ್ ಸಂಪರ್ಕ ಇದೀಗ ಅಳವಡಿಸಲಾಗಿದ್ದು, ಅರ್ಧಂಬರ್ಧ ಪೈಪ್ ಲೈನ್ ನಿರ್ಮಿಸಿ ಗುತ್ತಿಗೆದಾರರು ಕಾಮಗಾರಿ ಪೂರೈಸದೆ ನಾಪತ್ತೆಯಾಗಿದ್ದಾರೆ. ನಾಲ್ಕೈದು ಮನೆಯವರಿಗೆ ಅಲ್ಪಸ್ವಲ್ಪ ನೀರು ಸಿಗುತ್ತಿದ್ದು, ಉಳಿದ ಕುಟುಂಬಸ್ಥರು ನೀರಿಗಾಗಿ ಪರದಾಡುವಂತಾಗಿದೆ ಎಂದು ಗ್ರಾಮಸ್ಥರಾದ ಟಿ. ಗಣಪತಿ, ಸಚ್ಚಿ ಕಾಳಪ್ಪ, ಬಿವಿನ್ ತಿಳಿಸಿದ್ದಾರೆ.

ಮೂವತೋಕ್ಲು ಗ್ರಾಮದ ದೇವರಕಾಡು ಎಸ್ಟೇಟ್ ರಸ್ತೆ ಕಾಮಗಾರಿ ಕಳಪೆಯಿಂದ ಸಂಪೂರ್ಣ ಹಾಳಾಗಿದ್ದು, ತಾ.ಪಂ. ಅನುದಾನ ನೀರಿಗೆ ಹೋಮ ಮಾಡಿದಂತಾಗಿದೆ ಎಂದು ಟೀಕಿಸಿದ್ದಾರೆ.

ದೇವರಕಾಡು ಎಸ್ಟೇಟ್, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತೆರಳಲು ರಸ್ತೆ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ತಾ.ಪಂ. ನಿಂದ 5ಲಕ್ಷ ಅನುದಾನದಲ್ಲಿ 250 ಮೀ.ರಸ್ತೆ ಕಾಮಗಾರಿಂiÀiನ್ನು ನಡೆಸಲಾಗಿದೆ. ಈ ರಸ್ತೆ ಈಗ ಸಂಪೂರ್ಣ ಹದಗೆಟ್ಟಿದ್ದು ಶಾಲಾ ಮಕ್ಕಳು ಸಾರ್ವಜನಿಕರು ಹಾಗೂ ವಾಹನಗಳು ಸಂಚರಿಸದಂತೆ ಹದಗೆಟ್ಟಿದೆ. ಗುತ್ತಿಗೆದಾರ ಹಾಗೂ ಜಿ.ಪಂ ಇಂಜಿನಿಯರ್ ಕರ್ತವ್ಯ ನಿರ್ಲಕ್ಷ್ಯದಿಂದ ಸರಕಾರದ ಹಣ ಪೋಲಾಗಿದೆ ಎಂದು ದೂರಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಾದ ಟಿ. ಕಾರ್ಯಪ್ಪ, ಟಿ. ಮಂದಣ್ಣ, ಗಣಪತಿ, ಟಿ.ನಂಜುಂಡ ಸುರೇಶ್ ಹಾಗೂ ಭೀಮಯ್ಯ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ, ಜಿ.ಪಂ.ಸಿಇಓ ಹಾಗೂ ತಾ.ಪಂ ಇಓ ರವರಿಗೆ ದೂರು ಸಲ್ಲಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.