ಮಡಿಕೇರಿ, ಜೂ. 27: ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಗ್ಗೆ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಆಡಳಿತ ಬಿಜೆಪಿ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್ ಸದಸ್ಯರ ನಡುವೆ ಆರೋಪ - ಪ್ರತ್ಯಾರೋಪವೇ ಕೇಳಿಬಂದಿತು.ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ಜಿ.ಪಂ. ಸಾಮಾನ್ಯ ಸಭೆ ನಡೆಯಿತು. ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ವಿಷಯ ಪ್ರಸ್ತಾಪಿಸಿ, ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಯಾವ ವರದಿ ನೀಡಲಾಗಿದೆ. ಮಾಹಿತಿ ನೀಡುವಂತೆ ಆಗ್ರಹಿಸಿದರು. ಇದಕ್ಕೆ ದ್ವನಿಗೂಡಿಸಿದ ಸದಸ್ಯೆ ಸರಿತಾ ಪೂಣಚ್ಚ, ಕಸ್ತೂರಿ ರಂಗನ್ ವರದಿ ಅನುಷ್ಠಾನ ದೇಶದ್ರೋಹಿ ಕೃತ್ಯಕ್ಕಿಂತ ಹೆಚ್ಚಿನ ಕೃತ್ಯವಾಗಿದೆ ಎಂದು ಪಿ.ಎಂ. ಲತೀಫ್ ಅವರನ್ನು ಬಿಜೆಪಿ ಸದಸ್ಯರು ಛೇಡಿಸಿದ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಬಿಜೆಪಿ ಸದಸ್ಯರನ್ನು ಕುಟುಕಿದರು.

ಈ ಸಂದರ್ಭ ಬಿಜೆಪಿ ಸದಸ್ಯರಾದ ಸಿ.ಕೆ. ಬೋಪಣ್ಣ, ಮುರುಳಿ ಕರುಂಬಮ್ಮಯ್ಯ, ಮಹೇಶ್ ಗಣಪತಿ, ಶಶಿ ಸುಬ್ರಮಣಿ, ವಿಜು ಸುಬ್ರಮಣಿ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಪರಸ್ಪರ ಆರೋಪ - ಪ್ರತ್ಯಾರೋಪ ಕೇಳಿ ಬಂತು. ವಿಜು ಸುಬ್ರಮಣಿ ಮಾತನಾಡಿ, ಸೂಕ್ಷ್ಮ ಪರಿಸರ ತಾಣ ಹಾಗೂ ಕಸ್ತೂರಿ ರಂಗನ್ ವರದಿ ಎರಡು ಬೇರೆ ಬೇರೆಯಾಗಿದೆ ಎಂದರು. ಸೂಕ್ಷ್ಮ ಪರಿಸರ ತಾಣವನ್ನು ಶೂನ್ಯಕ್ಕೆ ಇಳಿಸುವದಕ್ಕೆ ನಮ್ಮ ಆಗ್ರಹವೂ ಇದೆ. ನಮಗೂ ಪರಿಸರ ಕಾಳಜಿ ಇದೆ. ಅರಣ್ಯದಲ್ಲಿ ವರದಿ ಅನುಷ್ಠಾನ ಮಾಡಲಿ ಎಂದು ಅಚ್ಚಪಂಡ ಮಹೇಶ್ ಗಣಪತಿ ಒತ್ತಾಯಿಸಿದರು. ಗ್ರಾ.ಪಂ., ತಾ.ಪಂ. ಹಾಗೂ ಜಿ.ಪಂ. ನಿರ್ಣಯಗಳಿಗೆ ಬೆಲೆ ಇಲ್ಲವೇ? ಎಂದು ಸದಸ್ಯ ಶಿವು ಮಾದಪ್ಪ ಪ್ರಶ್ನಿಸಿದರು.

(ಮೊದಲ ಪುಟದಿಂದ) ವರದಿ ತಿರಸ್ಕಾರದ ಬಗ್ಗೆ ಸಂಸದರು ಹಾಗೂ ಜಿಲ್ಲೆಯ ಶಾಸಕರು ಯಾವ ರೀತಿ ಸ್ಪಂದಿಸಿದ್ದಾರೆ ಎಂದು ಸದಸ್ಯರಾದ ಸರಿತಾ ಪೂಣಚ್ಚ ಹಾಗೂ ಬಾನಂಡ ಪ್ರಥ್ಯು ಪ್ರಶ್ನಿಸಿದರು. ಶಾಸಕರು ಹಾಗು ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಯಾವ ವರದಿ ಕಳುಹಿಸಿದೆ ಎಂದು ದಾಖಲೆ ಕೊಡುವಂತೆ ಆಗ್ರಹಿಸಿದ ಮುರಳಿ ಕರುಂಬಮ್ಮಯ್ಯ ರಾಜ್ಯ ಸರ್ಕಾರದ ವರದಿಯಂತೆ ಅನುಷ್ಠಾನ ಕೈಗೊಂಡಿದೆ ಎಂದು ಆರೋಪಿಸಿದರು.

ಜಿ.ಪಂ. ಸಿಇಓ, ಗ್ರಾ.ಪಂ., ತಾ.ಪಂ. ಹಾಗೂ ಜಿ.ಪಂ. ಸಭೆಗಳಲ್ಲಿ ಕೈಗೊಂಡು ಸರ್ಕಾರಕ್ಕೆ ಕಳುಹಿಸಿದ ವರದಿಯ ಪ್ರತಿಯನ್ನು ಎಲ್ಲಾ ಸದಸ್ಯರಿಗೂ ಹಂಚಿದರು. ಕೇವಲ ಆರೋಪ - ಪ್ರತ್ಯಾರೋಪ ನಡೆಯಿತೇ ವಿನಃ ಯಾವದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ.

ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದೆರೆಡು ಮಕ್ಕಳಿದ್ದರೂ ಶಾಲೆ ಮುಚ್ಚದಂತೆ ನೋಡಿಕೊಳ್ಳುವದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯ ನಾಗರಹೊಳೆ ವ್ಯಾಪ್ತಿಯ ಗೋಣಿಮರೂರು ಹಾಡಿಯ ಶಾಲೆಯಲ್ಲಿ 9 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಶಾಲೆಯನ್ನು ಮುಚ್ಚಲು ಮುಂದಾಗಿದ್ದಾರೆ. ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಜಿ.ಪಂ.ಸದಸ್ಯ ಬಾನಂಡ ಪ್ರಥ್ಯು ಸಭೆಯ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷರು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಶಾಲೆ ಇದ್ದರೂ ಸಹ ಮುಚ್ಚಬಾರದು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸೇರ್ಪಡೆ ಮಾಡಿಕೊಂಡು ಆದಿವಾಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕು ಎಂದು ಅವರು ಸಲಹೆ ಮಾಡಿದರು.

ಜಿ.ಪಂ.ಸದಸ್ಯ ಸಿ.ಕೆ. ಬೋಪಣ್ಣ ಮಳೆಗಾಲ ಆರಂಭವಾಗಿದ್ದು, ಜಿಲ್ಲೆಯಲ್ಲಿ ವಿಪರೀತ ಚಳಿ ಇದೆ. ಹಾಡಿಯ ಜನರು ಗುಡಿಸಲಿನಲ್ಲಿ ಬದುಕುತ್ತಿದ್ದಾರೆ. ಇವರಿಗೆ ಕೂಡಲೇ ಟಾರ್ಪಲ್ ವಿತರಣೆ ಮಾಡಬೇಕು ಎಂದು ಸಲಹೆ ಮಾಡಿದರು.

ಸದಸ್ಯೆ ಸರಿತಾ ಪೂಣಚ್ಚ ಸಿದ್ದಾಪುರ ಜಿ.ಪಂ. ವ್ಯಾಪ್ತಿಯ ಅವರೆಗುಂದ ಹಾಡಿಯ ಜನರು ಕತ್ತಲೆಯಲ್ಲಿ ಬದುಕು ನಡೆಸುತ್ತಿದ್ದಾರೆ. ಆದ್ದರಿಂದ ಕೂಡಲೇ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಮಾಹಿತಿ ನೀಡಿದ ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಕುಶಾಲನಗರ ಇಂಜಿನಿಯರಿಂಗ್ ಕಾಲೇಜು ಮೂಲಕ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.

ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ವಿಜುಸುಬ್ರಮಣಿ ಮಾತನಾಡಿ, ಜಿಲ್ಲೆಯಲ್ಲಿನ ಅಂಗನವಾಡಿಗಳಿಗೆ ಗುಣಮಟ್ಟದ ಹಾಲು ಮತ್ತು ಆಹಾರ ಪೂರೈಕೆ ಮಾಡಬೇಕು. ಮಳೆ, ಚಳಿ ವಾತಾವರಣದಲ್ಲಿ ಆಹಾರ ಪದಾರ್ಥ ಗಳು ಕೆಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸು ವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ಕೆಲವು ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪೂರೈಕೆ ಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ತಾಲೂಕು ಮಟ್ಟದ ಸಿಡಿಪಿಓ ಗಳಿಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಪಿ.ಸುಬ್ರಮಣಿ ಮಾತನಾಡಿ, ಮಳೆಗಾಲ ಆರಂಭವಾಗಿದ್ದು, ತಿತಿಮತಿ, ಬಾಳೆಲೆ, ಕರಿಕೆ ಇತರೆ ಪ್ರದೇಶಗಳಲ್ಲಿ ಮಲೇರಿಯಾ, ಡೆಂಗ್ಯೂ, ಚಿಕುನ್‍ಗುನ್ಯ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಇದನ್ನು ನಿಯಂತ್ರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಸದಸ್ಯ ಶಿವು ಮಾದಪ್ಪ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಅಂತರ್ಜಲ ಹೆಚ್ಚಳಕ್ಕೆ ಎಲ್ಲರೂ ಜಾಗೃತಿ ವಹಿಸಬೇಕಿದೆ. ಈ ಸಂಬಂಧ ಜಿ.ಪಂ.ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸದಸ್ಯರಾದ ಬಿ.ಜಿ. ದೀಪಕ್, ಕೆ.ಪಿ. ಚಂದ್ರಕಲಾ ಸೇರಿದಂತೆ ಹಲವು ಸದಸ್ಯರು ಸಲಹೆ ಮಾಡಿದರು. ಗಿರಿಜನ ಹಾಸ್ಟೆಲ್‍ಗಳು, ಆಶ್ರಮ ಶಾಲೆಗಳಲ್ಲಿ ಆದಿವಾಸಿ ಪದವೀದರರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು ಎಂದು ಜಿ.ಪಂ. ಸದಸ್ಯೆ ಪಂಕಜ ಸಲಹೆ ಮಾಡಿದರು.

ನಾಗರಹೊಳೆಯ ವನ್ಯಜೀವಿ ಪ್ರದೇಶ ಸೇರಿದಂತೆ ಹಾಡಿಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಬಾನಂಡ ಪ್ರಥ್ಯು, ಶಿವು ಮಾದಪ್ಪ, ಪಿ.ಆರ್. ಪಂಕಜ ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಸಿಇಓ ಚಾರುಲತಾ ಸೋಮಲ್ ಈ ಸಂಬಂಧ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೊತೆ ಚರ್ಚಿಸಲಾಗುವದು ಎಂದು ಹೇಳಿದರು. ಸದಸ್ಯ ಪುಟ್ಟರಾಜು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ಸಂಬಂಧಿಸಿದಂತೆ ಆಯಾಯ ಪ್ರದೇಶದ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದರೆ ಒಳ್ಳೆಯದು. ಇದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯ ಸರ್ಕಾರಿ ಶಾಲೆಗಳ ಜಾಗ ಸಂಬಂಧ ಆರ್‍ಟಿಸಿ ಮಾಡಿಸಿಕೊಳ್ಳಲು ಹಲವು ವರ್ಷಗಳಿಂದ ಸಭೆಯಲ್ಲಿ ಚರ್ಚಿಸುತ್ತಾ ಬರಲಾಗಿದೆ. ಆದರೆ ಕೆಲವು ಶಾಲೆಗಳ ಜಾಗ ಒತ್ತುವರಿಯಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಕವಿತಾ ಪ್ರಭಾಕರ್ ಹೇಳಿದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನ ಹರಿಸಲು ಕೃಷಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಸದಸ್ಯೆ ಎ. ಭವ್ಯ ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಗಾಳಿಯಿಂದಾಗಿ ವಿದ್ಯುತ್ ತಂತಿಗಳು ತುಂಡಾಗಿ ಬೀಳುತ್ತಿದ್ದು, ಈ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು. ಮುರಳಿ ಕರುಂಬಮ್ಮಯ್ಯ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವತ್ತ ಗಮನಹರಿಸಬೇಕಿದೆ ಎಂದರು. ಬಾನಂಡ ಪ್ರಥ್ಯು ಮಾತನಾಡಿ, ದಕ್ಷಿಣ ಕೊಡಗಿನಲ್ಲಿ ವಿದ್ಯುತ್ ಸಮಸ್ಯೆ ನಿರಂತರವಾಗಿದೆ. ಇದೇ ರೀತಿ ಮುಂದುವರಿದರೆ ದಕ್ಷಿಣ ಕೊಡಗು ಕತ್ತಲೆಯಲ್ಲಿಯೇ ಇರಬೇಕೆ? ಎಂದು ಸೆಸ್ಕ್ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ಜಿಲ್ಲೆಯ ಅರಣ್ಯದಂಚಿನ ಹಾಡಿಯ ಮಕ್ಕಳು ಕಾಡಾನೆ ಹಾವಳಿ ಯಿಂದ ಶಾಲೆಗೆ ತೆರಳಲು ಕಷ್ಟವಾಗು ತ್ತದೆ. ಆದ್ದರಿಂದ ಅರಣ್ಯ ಇಲಾಖೆ ವತಿಯಿಂದ ಆದಿವಾಸಿ ಮಕ್ಕಳು ಶಾಲೆಗೆ ತೆರಳುವಂತಾಗಲು ಬಸ್ ವ್ಯವಸ್ಥೆ ಮಾಡಬೇಕು ಎಂದು ಮೂಕೊಂಡ ಪಿ.ಸುಬ್ರಮಣಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ಸಹ ಕುಡಿಯುವ ನೀರಿನ ಸಮಸ್ಯೆ ಕೇಳಿಬರುತ್ತಿದೆ. ಆದ್ದರಿಂದ ಕುಡಿಯುವ ನೀರು ಸಮಸ್ಯೆ ಇರುವ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಗಮನಹರಿಸ ಬೇಕಿದೆ ಎಂದರು. ಬಾನಂಡ ಪ್ರಥ್ಯು ಸರ್ಕಾರ ಸಹಕಾರ ಸಂಘಗಳಲ್ಲಿ ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ ಹಿನ್ನೆಲೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಇದನ್ನು ಜಿ.ಪಂ.ಸದಸ್ಯರೆಲ್ಲರೂ ಸ್ವಾಗತಿಸಿದರು. ಕೇಂದ್ರ ಸರ್ಕಾರ ರೈತರ ಎಲ್ಲಾ ಸಾಲ ಮನ್ನಾ ಮಾಡಲು ನಿರ್ಣಯವನ್ನು ಕೈಗೊಳ್ಳುವಂತೆ ಪ್ರಥ್ಯು ಆಗ್ರಹಿಸಿದರು. ಈ ಸಂದರ್ಭ ಅಧ್ಯಕ್ಷ ಬಿ.ಎ. ಹರೀಶ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡೋಣವೆಂದರು.

ಸಭೆಯಲ್ಲಿ ಜಿ.ಪಂ.ಸದಸ್ಯರಾದ ಲೀಲಾವತಿ, ಕಿರಣ್ ಕಾರ್ಯಪ್ಪ, ಕೆ.ಕೆ. ಕುಮಾರ, ಸರೋಜಮ್ಮ, ಪೂರ್ಣಿಮಾ ಗೋಪಾಲ್, ಕೆ.ಆರ್. ಮಂಜುಳ, ಎಂ.ಬಿ. ಸುನಿತಾ ಇತರರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು. ಜಿ.ಪಂ. ಉಪಕಾರ್ಯದರ್ಶಿ ಸಿದ್ದಲಿಂಗಮೂರ್ತಿ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನಂದ, ಮುಖ್ಯ ಯೋಜನಾಧಿಕಾರಿ ಶ್ರೀಕಂಠ ಮೂರ್ತಿ, ವಿವಿಧ ಇಲಾಖೆ ಅಧಿಕಾರಿಗಳು ಇತರರು ತಮ್ಮ ಇಲಾಖಾ ವ್ಯಾಪ್ತಿಯ ಹಲವು ಮಾಹಿತಿ ನೀಡಿದರು.