ಶನಿವಾರಸಂತೆ. ಜೂ. 26: ನೋಂದಣಿ ಆಗದ ಹೊಸ ಹುಂಡೈ ಕಾರೊಂದು ಮೋರಿಗೆ ಡಿಕ್ಕಿಯಾದ ಪರಿಣಾಮ ಕಾರು ಚಾಲಿಸುತ್ತಿದ್ದ ಯುವಕ ಗಂಭೀರವಾಗಿ ಗಾಯಗೊಂಡು ಜತೆಯಲ್ಲಿದ್ದ ಮತ್ತೋರ್ವ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರಸಂತೆ ಗಡಿಭಾಗ ಹಾಸನ ಜಿಲ್ಲೆ, ಯಸಳೂರು ಹೋಬಳಿಯ ಮತ್ತೂರು ಹೆದ್ದಾರಿಯಲ್ಲಿ ಇಂದು ಸಂಜೆ ನಡೆದಿದೆ.ಮೃತಪಟ್ಟ ಯುವಕ ಶನಿವಾರಸಂತೆ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಹರೀಶ್ ಅವರ ಪುತ್ರ ನಿತಿನ್ (18), ಗಾಯಗೊಂಡ ಯುವಕ ಹಿಟ್ಟಿನ ಗಿರಣಿ ಮಾಲೀಕ ರಂಗಸ್ವಾಮಿ ಅವರ ಪುತ್ರ ಕೌಶಿಕ್ (19), ರಂಗಸ್ವಾಮಿ ಅವರಿಗೆ ಸೇರಿದ ಕಾರು ಚಾಲಿಸುತ್ತಿದ್ದ ಕೌಶಿಕ್‍ನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ನಿತಿನ್‍ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳು ಕೌಶಿಕ್‍ನನ್ನು ಹಾಸನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತ ನಿತಿನ್ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆದಿದ್ದ. ಕೌಶಿಕ್ ಡಿಪ್ಲೋಮಾ ಮುಗಿಸಿದ್ದಾನೆ. ನಿತಿನ್‍ನ ಅಂತ್ಯಕ್ರಿಯೆ ತಾ. 27ರಂದು (ಇಂದು) ಶನಿವಾರಸಂತೆಯಲ್ಲಿ ನೆರವೇರಲಿದೆ.

ಯಸಳೂರು ಪೊಲೀಸ್ ಠಾಣೆಯ ಪಿಎಸ್‍ಐ ವಿ.ವಿ. ದಯಾನಂದ್ ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.