ಶ್ರೀಮಂಗಲ, ಜೂ. 27: ಭಾರತ ದೇಶದಲ್ಲಿ ಶೇ. 45 ರಷ್ಟು ರೈತ ಭಾಂದವರು ದೇಶದ ಬೆನ್ನೆಲುಬಾಗಿ ದುಡಿಯುತ್ತಿದ್ದರೂ, ಯಾವೊಬ್ಬ ರಾಜಕಾರಣಿ ರೈತರ ಸಂಕಷ್ಟವನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಮಾಡುತ್ತಿಲ್ಲ. ವಾಣಿಜ್ಯ ಉತ್ಪನ್ನಗಳಿಗೆ ಕಚ್ಚಾ ಉತ್ಪನ್ನಗಳನ್ನು ರೈತರು ನೀಡುತ್ತಿದ್ದರೂ, ರೈತರು ಬೆಳೆದ ಬೆಳೆಗೆ ವ್ಯಾಪಾರಿಗಳು ದರ ನಿಗದಿ ಮಾಡುತ್ತಿದ್ದಾರೆ. ಆದರೆ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ತಾವೆ ದರ ನಿಗದಿ ಮಾಡಿ ಮಾರುಕಟ್ಟೆಯಲ್ಲಿ ಉತ್ತಮ ಲಾಭವನ್ನು ಗಳಿಸಿ ಸ್ಥಿತಿವಂತರಾದರೆ ರೈತರ ಬಾಳು ಶೋಚನೀಯ ಸ್ಥಿತಿಯನ್ನು ತಲಪಿದೆ. ಈ ನಿಟ್ಟಿನಲ್ಲಿ ಭಾರತೀಯ ಕಿಸಾನ್ ಸಂಘ ಹಲವಾರು ವರ್ಷಗಳಿಂದ ರೈತಪರ ಕಾಳಜಿಯನ್ನು ವಹಿಸುತ್ತಾ ರಾಜಕೀಯ ರಹಿತವಾಗಿ ಕೆಲಸವನ್ನು ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಭಾರತೀಯ ಕಿಸಾನ್ ಸಂಘ ಪ್ರಾರಂಭಗೊಂಡಿರುವದು ಉತ್ತಮ ಬೆಳವಣಿಗೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಸಂಚಾಲಕ ಚೆಕ್ಕೇರ ಮನು ಕಾವೇರಪ್ಪ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪೊನ್ನಂಪೇಟೆಯಲ್ಲಿ ಭಾರತೀಯ ಕಿಸಾನ್ ಸಂಘದ ವೀರಾಜಪೇಟೆ ತಾಲೂಕು ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಕಿಸಾನ್ ಸಂಘ ಅಖಿಲ ಭಾರತದ ಸಂಘಟನೆಯಾಗಿದೆ. ಸಂಘಟನೆಯ ಮೂಲ ಉದ್ದೇಶದಂತೆ ರೈತರ ಸಂಕಷ್ಟಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಕಿಸಾನ್ ಸಂಘ ಕಾರ್ಯನಿರ್ವಹಿಸಬೇಕಾಗಿದೆ. ಇಂದು ರೈತರು ಹವಾಮಾನ ವೈಪರಿತ್ಯ ಮತ್ತು ಉತ್ತಮ ಧಾರಣೆ ಸಿಗದೆ ಮತ್ತು ಕಾಡುಪ್ರಾಣಿಗಳ ಮತ್ತು ಆನೆ-ಮಾನವ ಸಂಘರ್ಷದಿಂದ ಬಹಳಷ್ಟು ಕಷ್ಟವನ್ನು ಅನುಭವಿಸುತ್ತಿದ್ದಾರೆ. ರೈತರು ಸ್ವಾಭಿಮಾನಿ ಜನಾಂಗ. ಯಾರಿಗೂ ಯಾವದೇ ಕಾರಣದಲ್ಲಿ ತೊಂದರೆ ಮತ್ತು ಅನ್ಯಾಯವನ್ನು ಮಾಡದೆ ಕಾಯಕವೇ ಕೈಲಾಸವೆಂಬ ನಾಣ್ನುಡಿಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೃಷಿಗಾಗಿ ಬ್ಯಾಂಕ್‍ಗಳಿಂದ ಸಾಲವನ್ನು ಪಡೆದು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವದು ವಿಪರ್ಯಾಸ. ರೈತರ ಹೆಸರಿನಲ್ಲಿ ಪ್ರಮಾಣವಚನ ಮಾಡುವ ರಾಜಕೀಯ ಪಕ್ಷಗಳ ಪ್ರಮುಖರು ನಂತರದ ದಿನದಲ್ಲಿ ರೈತರನ್ನು ಮರೆಯುತ್ತಿರುವದು ನಾಚಿಕೆಯ ವಿಷಯ. ಅಸಂಘಟಿತವಾಗಿರುವ ರೈತ ಸಮುದಾಯ ಸಂಘಟಿತವಾಗಬೇಕಾಗಿದೆ. ಈ ಮೂಲಕ ತಾವು ಬೆಳೆದ ಬೆಳೆಗೆ ತಾವೇ ದರ ನಿಗದಿ ಮಾಡಿ ವ್ಯಾಪಾರ ಮಾಡಬೇಕಾಗಿದೆ. ಯಾವದೇ ರಾಜಕೀಯ ಪಕ್ಷಗಳ ಬೂಟಾಟಿಕೆಗೆ ಬಲಿಯಾಗಬಾರದು ಎಂದು ಕರೆ ನೀಡಿದರು.

ಜಿಲ್ಲೆಯಲ್ಲಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಭಾರತೀಯ ಕಿಸಾನ್ ಸಂಘ ಸಂಘಟಿತವಾಗಿ ಹೋರಾಡುವದರ ಮೂಲಕ ರೈತರಲ್ಲಿ ಕೃಷಿಯ ಬಗ್ಗೆ ಭರವಸೆ ಮೂಡಿಸಬೇಕಾಗಿದೆ, ಜಿಲ್ಲೆಯ ಪ್ರತಿ ಮೂಲೆಯಲ್ಲೂ ಕಿಸಾನ್ ಸಂಘ ರೈತ ಪರವಾಗಿ ಕೆಲಸ ಮಾಡುವದರ ಮೂಲಕ ಜಿಲ್ಲೆಯಲ್ಲಿ ಶಕ್ತಿಶಾಲಿ ಸಂಘಟನೆಯಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷರಾದ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಪ್ರವೀಣ್, ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಉಲ್ಲಾಸ್, ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ, ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ, ಕಟ್ಟೇರ ಲಾಲಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿ ನೂರೇರ ಮನೋಜ್, ಜಿಲ್ಲಾ ಮಹಿಳಾ ಪ್ರಮುಖ್ ಕರ್ತಚ್ಚಿರ ಕಾವೇರಮ್ಮ, ತಾಲೂಕು ಮಹಿಳಾ ಪ್ರಮುಖ್ ಚೊಟ್ಟೆಕಾಳಪಂಡ ಆಶಾ, ಉಪಾಧ್ಯಕ್ಷ ಸಿ.ಡಿ. ಮಾದಪ್ಪ, ಚೋಡುಮಾಡ ವಿಕ್ರಮ್, ಜಿಲ್ಲಾ ಸದಸ್ಯರಾದ ಕೋಟೆರ ಕಿಶನ್, ಗಾಂಡಂಗಡ ಕೌಶಿಕ್ ದೇವಯ್ಯ, ದೇಯಂಡ ರತನ್, ರಜನಿ, ಮಲ್ಲಮಾಡ ಪ್ರಭು ಪೂಣಚ್ಚ ಮುಂತಾದವರು ಹಾಜರಿದ್ದರು.