ಮಡಿಕೇರಿ, ಜೂ. 26: ಕೊಡಗಿನ ಅಸ್ತಿತ್ವವನ್ನು ಉಳಿಸಿಕೊಳ್ಳುವದ ರೊಂದಿಗೆ ಜಿಲ್ಲೆಯ ಸುಭದ್ರತೆಗೆ ಸಾಮಾಜಿಕ ಒಗ್ಗಟ್ಟಿನ ಚಿಂತನೆ ಅತ್ಯಗತ್ಯವಾಗಿದೆ. ಕ್ರೀಡೆಯಿಂದ ಸ್ನೇಹಚಾರ, ವಿಶ್ವಾಸಾರ್ಹತೆ, ಸಹೋದರತೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಕೊಡವ ಕುಟುಂಬಗಳ ನಡುವೆ ಕಳೆದ 21 ವರ್ಷಗಳ ಹಿಂದೆ ಪಾಂಡಂಡ ಎಂ. ಕುಟ್ಟಪ್ಪ ಸಹೋದರರು ಕೌಟುಂಬಿಕ ಹಾಕಿ ಹಬ್ಬದ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದು, ಇದು ಅಭೂತಪೂರ್ವ ಯಶಸ್ಸು ಕಂಡಿತು. ಒಂದು ಮನೆಯಲ್ಲಿ ಹಿರಿಯರು ಮಾಡುವ ಒಳ್ಳೆಯ ಕೆಲಸ ಆದರ್ಶವನ್ನು ಇತರರು ಸಹಜವಾಗಿ ಪಾಲಿಸುತ್ತಾರೆ. ಇದರಂತೆ ನಂತರದ ವರ್ಷಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಜಾತಿ ಜನಾಂಗದವರು ವಿವಿಧ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಮೂಲಕ ಆಯಾ ಸಮಾಜದವರು ಒಂದಾದರು. ಬೇಸಿಗೆಯಲ್ಲಿ ಕೊಡಗಿನಲ್ಲಿ ಕ್ರೀಡಾಹಬ್ಬವೇ ಕಂಡುಬರುತ್ತದೆ. ಇದು ಶ್ಲಾಘನೀಯವೂ, ಜಿಲ್ಲೆಯ ಮಟ್ಟಿಗೆ ಉತ್ತಮ ಲಕ್ಷಣವೂ ಆಗಿದೆ. ಆದರೆ ಇದರ ನಡುವೆ ಇತ್ತೀಚಿನ ದಿನಗಳಲ್ಲಿ ವಿಶಾಲ ಮನೋಭಾವ ಹೊಂದಿದ್ದ ಜಿಲ್ಲೆಯಲ್ಲಿ ಜಾತಿ - ಜಾತಿಗಳ ನಡುವೆ ವಿಷಬೀಜ ಬಿತ್ತುವದು, ಸಂಶಯ, ವಕ್ರದೃಷ್ಟಿಕೋನ ಕಂಡುಬರುತ್ತಿರುವದು ದುರದೃಷ್ಟಕರ. ಸಾಮಾಜಿಕ ಜಾಲತಾಣಗಳಿಂದಲೂ ಇದು ಹೆಚ್ಚಾಗುತ್ತಿದೆ. ಸಹೋದರತೆ ವೃದ್ಧಿಸಿಕೊಳ್ಳುವ ಬದಲಾಗಿ ಪರಸ್ಪರ ಅವಹೇಳನ, ವಿರೋಧಾಭಾಸಗಳು ಜಿಲ್ಲೆಯ ಮಟ್ಟಿಗೆ ಸಮಂಜಸವಲ್ಲ.

ಜಿಲ್ಲೆಯ ಮೂಲನಿವಾಸಿಗಳ ಪೈಕಿ ಹಿರಿಯಣ್ಣ ಎಂದು ಗುರುತಿಸಿಕೊಂಡಿರುವ ಕೊಡವರು ಈ ಹಿಂದಿನಿಂದಲೂ ಸ್ವಾರ್ಥ ಮನೋಭಾವ ತೋರಿದವರಲ್ಲ. ಗ್ರಾಮೀಣ ಭಾಗದಿಂದಲೂ ಇತರ ಎಲ್ಲರನ್ನೂ ಅವರವರ ಕಸುಬಿಗೆ ತಕ್ಕಂತೆ ಒಗ್ಗೂಡಿಸಿಕೊಂಡು ಒಂದೇ ಜೀವನ ಕ್ರಮದ ಬದುಕು ಸಾಗಿಸಿಕೊಂಡು ಬಂದಿದ್ದಾರೆ. ಈ ಮೂಲಕ ಎಲ್ಲರೂ ಪರಸ್ಪರ ಅನ್ಯೋನ್ಯತೆಯಿಂದಲೇ ಇದ್ದು, ಶಾಂತಿಯುತವಾಗಿ ಸಹಬಾಳ್ವೆ ಮುಂದುವರಿದಿತ್ತು. ಇದಕ್ಕೆ ಪ್ರಸ್ತುತ ದಿನಗಳಲ್ಲಿ ನಾನಾ ಕಾರಣಗಳಿಂದ ಧಕ್ಕೆಯಾಗುತ್ತಿರುವದು ವಿಷಾದಕರ. ರಾಜಕೀಯ ವ್ಯವಸ್ಥೆ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರಬೇಕು. ಜಿಲ್ಲೆಯ ಸಾಮಾಜಿಕ ವ್ಯವಸ್ಥೆಗೆ ಇದರಿಂದ ಧಕ್ಕೆಯಾಗಬಾರದು. ಕ್ಷುಲ್ಲಕ ಕಾರಣಗಳಿಗೆ ಗುಂಪುಗಾರಿಕೆ, ಜಾತಿ ವೈಷಮ್ಯ ಮಾಡಬಾರದು. ಕೊಡಗಿನ ಅಸ್ತಿತ್ವಕ್ಕೆ ಧಕ್ಕೆಯಾದಲ್ಲಿ ಅದು ಕೇವಲ ಕೊಡವರಿಗೆ ಮಾತ್ರ ತೊಂದರೆಯಲ್ಲ. ಎಲ್ಲಾ ಮೂಲ ನಿವಾಸಿಗಳು, ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಬದುಕು ಸಾಗಿಸುತ್ತಿರುವ ಎಲ್ಲರ ಬುಡಕ್ಕೂ ಧಕ್ಕೆಯಾಗಲಿದೆ ಎಂಬದು ವಾಸ್ತವ ಸತ್ಯ. ಈ ಬಗ್ಗೆ ಪ್ರತಿಯೊಬ್ಬರೂ ಗಂಭೀರ ಚಿಂತನೆ ಮಾಡಬೇಕಿದೆ. ದೂರದೃಷ್ಟಿತ್ವ ಇಲ್ಲದ ಚಿಂತನೆಗಳು, ಒಗ್ಗಟ್ಟಿನ ಕೊರತೆ, ರಾಜಕೀಯ, ಸ್ವಾರ್ಥ, ಜಿಲ್ಲೆಯ ಹಲವು ಸಮಸ್ಯೆಗಳಿಗೆ ಕಾರಣವಾಗಿವೆ. ಇದರೊಂದಿಗೆ ಆಡಳಿತ ವ್ಯವಸ್ಥೆಯೂ ಹಲವು ಸಮಸ್ಯೆ ಸೃಷ್ಟಿಸಿದ್ದು, ಸಂಘರ್ಷಕ್ಕೂ ಎಡೆಯಾಗಿದೆ. ಇದಕ್ಕೆ ಯಾವದೇ ಜಾತಿ - ಜನಾಂಗದವರು ಕಾರಣರಲ್ಲ. ದೂರದೃಷ್ಟಿತ್ವ ಇಲ್ಲದ ಆಡಳಿತ ವ್ಯವಸ್ಥೆ ಕೆಲವು ಅಧಿಕಾರಿಗಳ ವಿರೋಧಿ ಧೋರಣೆಯ ವರ್ತನೆ ಕಾರಣವಾಗಿದೆ. ಇವೆಲ್ಲವನ್ನೂ ಮೆಟ್ಟಿನಿಲ್ಲಲು ಸಾಮಾಜಿಕ ಒಗ್ಗಟ್ಟು ಇಂದಿನ ಅಗತ್ಯವಾಗಿದೆ. ಪುರಾತನ ಕಾಲದಿಂದಲೂ ಜಿಲ್ಲೆಗೆ ಸಂಬಂಧಿಸಿದಂತೆ ಹಲವಾರು ದಂತಕಥೆಗಳೂ ಇವೆ. ದುರಂತ ಕಥೆಗಳೂ ಇವೆ. ಈ ದಂತಕಥೆಗಳು ದುರಂತಕಥೆಗಳಾಗಬಾರದು. ಅದರಂತೆ ದುರಂತಕಥೆಗಳೂ ದÀಂತಕಥೆಗಳಾಗಬಾರದು. ಚರಿತ್ರೆ ಯಾವತ್ತೂ ದಾಖಲೆಯೇ ಎಂಬದು ಐತಿಹಾಸಿಕ ಸತ್ಯ.

ಜಿಲ್ಲೆಯ ಎಲ್ಲಾ ಸಮಾಜದವರು ತಮ್ಮತನ ಉಳಿಸಿಕೊಳ್ಳುವದರೊಂದಿಗೆ ಜಿಲ್ಲೆಯ ಅಸ್ತಿತ್ವ ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸಮಾಜಗಳು ಚಿಂತನೆ ನಡೆಸಬೇಕು. ಸಮಾನ ಮನಸ್ಕರಾಗಿ ಕುಳಿತು ವಿಮರ್ಶೆ ಮಾಡುವ ಅಗತ್ಯತೆಯೂ ಇದೆ. ಕೊಡಗಿನಲ್ಲಿ ಸಾಮರಸ್ಯದ ಬದುಕಿಗೆ ಈ ಹಿಂದಿನ ಹಲವು ನಿದರ್ಶನಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ.

ಕಳೆದ 75 ವರ್ಷಗಳಿಂದ ಅಖಿಲ ಕೊಡವ ಸಮಾಜ ಕೇವಲ ಕೊಡವರ ಪರವಾಗಿ ಮಾತ್ರ ನಿಂತಿಲ್ಲ. ಇದರೊಂದಿಗೆ ಜಿಲ್ಲೆಯ ಅಸ್ತಿತ್ವದ ಹೋರಾಟ ಎಲ್ಲಾ ಮೂಲನಿವಾಸಿಗಳ ಪರವಾಗಿಯೂ ನಿಂತಿದೆ. ಹಲವಾರು ಸಮಸ್ಯೆಗಳು ಎದುರಾದಾಗಲೂ ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು ಹೋಗುವ ಸಂಸ್ಕøತಿಯನ್ನು ಬೆಳೆಸಿಕೊಂಡಿದೆ.

ಈಗಿನ ಸ್ಥಿತಿಯಲ್ಲೂ ಸಾಮಾಜಿಕ ಒಗ್ಗಟ್ಟಿಗೆ ಮುಂದೆ ನಿಲ್ಲಲು ಚಿಂತನೆ ನಡೆಸಲಾಗುತ್ತಿದೆ.

ಮಾತಂಡ ಎಂ. ಮೊಣ್ಣಪ್ಪ,

ಅಧ್ಯಕ್ಷರು, ಅಖಿಲ ಕೊಡವ ಸಮಾಜ.

(ತಾ.18ರ ‘ಶಕ್ತಿ'ಯಲ್ಲಿ ಪ್ರಕಟಗೊಂಡ ಕಾಯಪಂಡ ಶಶಿ ಸೋಮಯ್ಯ ಅವರ ವಾರದ ಬರಹ ಲೇಖನಕ್ಕೆ ಪ್ರತಿಕ್ರಿಯೆ)